ADVERTISEMENT

ಗದಗ | ಕೇಂದ್ರ ಬಜೆಟ್‌: ಈಡೇರದ ಜಿಲ್ಲೆಯ ಜನರ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 5:00 IST
Last Updated 2 ಫೆಬ್ರುವರಿ 2026, 5:00 IST
<div class="paragraphs"><p>ಬಜೆಟ್ ಭಾಷಣದ ಟ್ಯಾಬ್‌ನೊಂದಿಗೆ ನಿರ್ಮಲಾ ಸೀತಾರಾಮನ್</p></div>

ಬಜೆಟ್ ಭಾಷಣದ ಟ್ಯಾಬ್‌ನೊಂದಿಗೆ ನಿರ್ಮಲಾ ಸೀತಾರಾಮನ್

   

– ಪಿಟಿಐ ಚಿತ್ರ

ಗದಗ: ಕೃಷಿ ಪ್ರಧಾನವಾದ ಗದಗ ಜಿಲ್ಲೆಯ ಜನರ ಬೇಡಿಕೆಗಳಿಗೆ ಕೇಂದ್ರ ಬಜೆಟ್‌ನಲ್ಲಿ ಮನ್ನಣೆ ಸಿಗದಿರುವುದಕ್ಕೆ ಬೇಸರ ವ್ಯಕ್ತವಾಗಿದೆ.

ADVERTISEMENT

ಗದಗ ಜಿಲ್ಲೆಯಲ್ಲಿ ಬೃಹತ್‌ ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾದ ವಾತಾವರಣ ಇಲ್ಲ. ಆದರೆ, ಕೃಷಿಗೆ ಪೂರಕವಾದ ಕಿರು ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತ ನೆಲೆ ಇದಾಗಿದೆ. ಜಿಲ್ಲೆಯಲ್ಲಿ ‌ಪ್ರಮುಖವಾಗಿ ಬೆಳೆಯುವ ಹೆಸರು, ಮೆಣಸಿನಕಾಯಿ ಮತ್ತು ಈರುಳ್ಳಿ ಬೆಳೆಗಳ ಸಂಸ್ಕರಣೆಗೆ ಪೂರಕವಾದ ಫುಡ್‌ ಪಾರ್ಕ್‌ ನಿರ್ಮಾಣ ಆಗಬೇಕು ಎಂಬ ಕೂಗಿಗೆ ಈ ಬಾರಿಯೂ ಸ್ಪಂದನೆ ಸಿಕ್ಕಿಲ್ಲ.

ಕೃಷಿ ಕೈಗಾರಿಕೆ ಹೊರತಾಗಿ ಜಿಲ್ಲೆಯ ಪ್ರಮುಖ ರೈಲ್ವೆ ಯೋಜನೆಗಳಲ್ಲಿ ಒಂದಾದ ಗದಗ– ಯಲವಗಿ, ಗದಗ– ಮುಂಡರಗಿ– ಹರಪನಹಳ್ಳಿ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ವೇಗ ಸಿಗಲಿದೆ ಎಂದು ಜಿಲ್ಲೆಯ ಜನ ನಂಬಿದ್ದರು. ಆದರೆ, ಅದು ಕೂಡ ಹುಸಿಯಾಗಿದೆ.

ಗದಗ ಜಿಲ್ಲೆಯಲ್ಲಿ ಹಾದುಹೋಗಿರುವ ಕಾರವಾರ– ಇಳಕಲ್‌ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಬೇಕು ಎಂಬ ಜನರ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಲಕ್ಕುಂಡಿಯನ್ನು ಯುನೆಸ್ಕೊ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಯತ್ನಗಳು ಆರಂಭವಾಗಿದ್ದು, ಅದಕ್ಕೆ ನೆರವಾಗಲು ಅಗತ್ಯವಿರುವ ಪ್ರೋತ್ಸಾಹದಾಯ ಯೋಜನೆ ಕೂಡ ಘೋಷಣೆ ಆಗಿಲ್ಲ. 

ರೈತರಿಗೆ ತಾಂತ್ರಿಕ ನೆರವು ನೀಡಲು ಎಐ ಆಧರಿತ ಭಾರತ್ ವಿಸ್ತಾರ್ ಯೋಜನೆ ಘೋಷಿಸಿರುವುದು ಕೃಷಿ ಮಾಹಿತಿ ಮತ್ತು ಮಾರುಕಟ್ಟೆ ಸಂಪರ್ಕಕ್ಕೆ ಸಹಕಾರಿಯಾಗಲಿದೆ. ಅದೇರೀತಿ, ದೇಸಿ ಎಣ್ಣೆಕಾಳು ಉತ್ಪಾದನೆಗೆ ಉತ್ತೇಜನ ನೀಡಿರುವುದರಿಂದ ಜಿಲ್ಲೆಯಲ್ಲಿ ಸೂರ್ಯಕಾಂತಿ ಮತ್ತು ಹೆಸರುಕಾಳು ಬೆಳೆಯುವ ರೈತರಿಗೆ ಪರೋಕ್ಷವಾಗಿ ವರದಾನವಾಗುವ ನಿರೀಕ್ಷೆ ಇದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು, ಈ ಬಾರಿ ಎಂಎಸ್ಎಂಇ ವಲಯಕ್ಕೆ ಸಾಲ ಸೌಲಭ್ಯ ಮತ್ತು ತಂತ್ರಜ್ಞಾನ ಮೇಲ್ದರ್ಜೆಗೇರಿಸಲು ನೀಡಿದ ಒತ್ತು ಜಿಲ್ಲೆಯಲ್ಲಿನ ಸಣ್ಣ ಉದ್ದಿಮೆದಾರರಿಗೆ ತುಸು ಸಮಾಧಾನ ತಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.