ADVERTISEMENT

ಸರ್ಕಾರಿ ಕ್ಷೌರದ ಅಂಗಡಿ ತೆರೆದವರ ವಿರುದ್ಧ ಕ್ರಮ ಕೈಗೊಳ್ಳಿ: ಸಾಹಿತಿ ಸೂಳಿಭಾವಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 22:07 IST
Last Updated 2 ಮಾರ್ಚ್ 2026, 22:07 IST
ಬಸವರಾಜ ಸೂಳಿಭಾವಿ
ಬಸವರಾಜ ಸೂಳಿಭಾವಿ   

ಗದಗ: ‘ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಶಿಂಗಟಾಲೂರುನಲ್ಲಿ ಸರ್ಕಾರಿ ಸಲೂನ್‌ ತೆರೆದು, ಅಸ್ಪೃಶ್ಯತೆ ಜೀವಂತವಾಗಿಡುವ ಕೆಲಸ ಮಾಡಿದ ಅಲ್ಲಿನ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ ತಹಶೀಲ್ದಾರ್‌ ವಿರುದ್ಧ ಜಿಲ್ಲಾಡಳಿತ ಕಾನೂನು ಕ್ರಮ ಜರುಗಿಸಬೇಕು’ ಎಂದು ಸಾಹಿತಿ ಬಸವರಾಜ ಸೂಳಿಭಾವಿ ಆಗ್ರಹಿಸಿದರು.

‘ಮೇಲ್ನೋಟಕ್ಕೆ ಇದು ಕ್ರಾಂತಿಕಾರಕ ಅನ್ನಿಸಿದರೂ ಆಳದಲ್ಲಿ ಅಸ್ಪೃಶ್ಯತೆ ಜೀವಂತ ಇಡುವ ಯತ್ನವಾಗಿದೆ’ ಎಂದು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಹಡಪದ ಸಮಾಜದವರು ಪರಿಶಿಷ್ಟರಿಗೆ ಕ್ಷೌರ ಮಾಡುತ್ತಿರಲಿಲ್ಲ. ಸಮಸ್ಯೆ ಹಲವು ವರ್ಷಗಳಿಂದ ಇತ್ತು. ಬಗೆಹರಿಸಲು ಅಧಿಕಾರಿಗಳು ಬೇರೆ ಊರಿನಿಂದ ಒಬ್ಬರನ್ನು ಕರೆತಂದು ಸಲೂನ್‌ ತೆರೆದಿದ್ದಾರೆ. ಅದಕ್ಕೆ ಅಭಿನಂದನೆ. ಆದರೆ, ಅಸ್ಪೃಶ್ಯತೆ ಆಚರಿಸಿದ ಜನರ ವಿರುದ್ಧ ಜಿಲ್ಲಾಡಳಿತದ ಕ್ರಮವೇನು? ಎಂದು ಪ್ರಶ್ನಿಸಿದರು.

ADVERTISEMENT

‘ಅಸ್ಪೃಶ್ಯತೆ ಆಚರಣೆ ಮಾಡುವ ಜನರಿಗೆ ಕಾನೂನಾತ್ಮಕ ರಕ್ಷಣೆ ಕೊಟ್ಟಿರುವ ಅಧಿಕಾರಿಗಳ ಮೇಲೆ ಜಿಲ್ಲಾಡಳಿತ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಅವರ ಮೇಲೆ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಸಮಿತಿ ಸಭೆಗಳು ನಡೆಯುತ್ತವೆ. ಆದರೆ, ಈ ಸಭೆಗಳಲ್ಲಿ ಯಾರೇ ಒಬ್ಬ ಜನಪ್ರತಿನಿಧಿಯೂ ಈವರೆಗೆ ಭಾಗವಹಿಸಿಲ್ಲ. ಸಭೆಯಲ್ಲಿ ಪಾಲ್ಗೊಳ್ಳದೇ ಅಸ್ಪೃಶ್ಯತೆಯನ್ನು ಜೀವಂತಿಕೆ ಇಟ್ಟಿರುವ ಶಾಸಕರ ವಿರುದ್ಧವೂ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.