ADVERTISEMENT

ಗದಗ | ಅತಿಥಿಗಳ ಪರಿಸ್ಥಿತಿಗೆ ಉನ್ನತ ಶಿಕ್ಷಣ ಇಲಾಖೆಯೇ ಹೊಣೆ: ಎಸ್‌.ವಿ. ಸಂಕನೂರ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 5:16 IST
Last Updated 26 ನವೆಂಬರ್ 2025, 5:16 IST
ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಮಂಗಳವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು
ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಮಂಗಳವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು   

ಗದಗ: ‘ಹಲವು ವರ್ಷಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪಾಠ ಮಾಡುತ್ತಿರುವ ಉಪನ್ಯಾಸಕರ ಕುಟುಂಬಗಳು ಬೀದಿಗೆ ಬೀಳುವಂತಾಗಿದ್ದು, ಅವರ ಈ ಪರಿಸ್ಥಿತಿಗೆ ಉನ್ನತ ಶಿಕ್ಷಣ ಇಲಾಖೆಯೇ ಹೊಣೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಆರೋಪಿಸಿದರು.

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರದಿಂದ ಆರಂಭಗೊಂಡ ಅನಿರ್ದಿಷ್ಟಾವಧಿ ಧರಣಿಯಲ್ಲಿ ಮಾತನಾಡಿದರು.

‘ಉನ್ನತ ಶಿಕ್ಷಣ ಇಲಾಖೆಯ ಪರಿಷ್ಕೃತ ಮೆರಿಟ್‌ ಪಟ್ಟಿಯಿಂದಾಗಿ ಸೇವಾನುಭವ ಇರುವವರು ಕೂಡ ಕೆಲಸ ಕಳೆದುಕೊಳ್ಳುವಂತಾಗಿದೆ’ ಎಂದು ದೂರಿದರು.

ADVERTISEMENT

‘ಮೆರಿಟ್‌ ಪಟ್ಟಿ ಅಂಕಗಳನ್ನು ಆಧರಿಸಿ ಇರಬೇಕೇ ಹೊರತು ಉಳಿದ ವಿಷಯಗಳನ್ನಲ್ಲ. ಆದ್ದರಿಂದ ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಸಚಿವರ ಜತೆಗೆ ಸಮಾಲೋಚನೆ ನಡೆಸಿ, ಪರಿಹಾರ ಒದಗಿಸಲು ಪ್ರಯತ್ನಿಸುವೆ’ ಎಂದು ಭರವಸೆ ನೀಡಿದರು.

ಧರಣಿ ಸ್ಥಳಕ್ಕೆ ಭೇಟಿ‌ ನೀಡಿದ್ದ ತೋಂಟದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ‘ವಿದ್ಯಾರ್ಥಿಗಳ ಬದುಕು ಬೆಳಗಬೇಕಾದವರ ಬದುಕೇ ಕತ್ತಲೆಯ ಕೂಪಕ್ಕೆ ಬಿದ್ದಿದೆ. ಇಲ್ಲಿ ಮಾನವೀಯತೆಗಿಂತ ದೊಡ್ಡದು ಬೇರೇನಿಲ್ಲ. ಇದುವರೆಗೆ ಕಡಿಮೆ ಗೌರವಧನಕ್ಕೆ ಸೇವೆ ಸಲ್ಲಿಸಿದವರ ಬದುಕು ಹಸನುಗೊಳಿಸುವ ಹೊಣೆ ಸರ್ಕಾರದ್ದು’ ಎಂದು ಆಗ್ರಹಿಸಿದರು.

ಬೆಳಗಾವಿ ಅಧಿವೇಶನದ ಒಳಗಾಗಿ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸುವುದು ಅನಿವಾರ್ಯ. ಕಾನೂನು ಸಚಿವ ಎಚ್‌.ಕೆ.ಪಾಟೀಲರು ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸುವ ವಿಶ್ವಾಸ ಇದೆ. ಪ್ರತಿಭಟನೆಯಲ್ಲಿ ಸುತ್ತಮುತ್ತಲಿನ ಜಿಲ್ಲೆಗಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.
ಹನುಮಂತಗೌಡ ಕಲ್ಮನಿ ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ
ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ
ಪ್ರತಿಭಟನೆ ವೇಳೆ ಅತಿಥಿ ಉಪನ್ಯಾಸಕರೊಬ್ಬರು ತಮ್ಮ ಅಸಹಾಯಕ ಸ್ಥಿತಿ ನೆನೆದು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಆಗ ಹತ್ತಿರದಲ್ಲೇ ಇದ್ದ ಪೊಲೀಸರು ಅವರನ್ನು ತಡೆದರು. ಕೊಪ್ಪಳ ಬಾಗಲಕೋಟೆ ವಿಜಯಪುರ ಕಲಬುರಗಿ ಹುಬ್ಬಳ್ಳಿ-ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ನೂರಾರು ಮಹಿಳಾ ಅತಿಥಿ ಉಪನ್ಯಾಸಕರಲ್ಲಿ ಕೆಲವರು ಅಸ್ವಸ್ಥತೆಯಿಂದ ಬಳಲಿದರು. ಅವರಿಗೆ ಇನ್ನುಳಿದ ಪ್ರತಿಭಟನಕಾರರು ಆರೈಕೆ ಮಾಡಿದರು. ಸಂಜೆ ಬಳಿಕ ತೋಂಟದಾರ್ಯ ಮಠದ‌ ಕೊಠಡಿಗಳಲ್ಲಿ ಅವರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಯಿತು. ಬುಧವಾರದಿಂದ ತರಗತಿ ಬಹಿಷ್ಕರಿಸಿ ಕುಟುಂಬ ಸಮೇತ ಪ್ರತಿಭಟನೆ ನಡೆಸಲು ಕರೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.