ADVERTISEMENT

ಲಂಬಾಣಿ ಜನರು ಶಿಕ್ಷಣಕ್ಕೆ ಆದ್ಯತೆ ನೀಡಿ: ಸಚಿವ ಎಚ್‌.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 7:16 IST
Last Updated 18 ಫೆಬ್ರುವರಿ 2026, 7:16 IST
ಗದಗ ಜಿಲ್ಲಾಡಳಿತ ಭವನದಲ್ಲಿ ನಡೆದ ಸಂತ ಸೇವಾಲಾಲ್‌ ಜಯಂತ್ಯುತ್ಸವವನ್ನು ಸಚಿವ ಎಚ್‌.ಕೆ.ಪಾಟೀಲ ಉದ್ಘಾಟಿಸಿದರು
ಗದಗ ಜಿಲ್ಲಾಡಳಿತ ಭವನದಲ್ಲಿ ನಡೆದ ಸಂತ ಸೇವಾಲಾಲ್‌ ಜಯಂತ್ಯುತ್ಸವವನ್ನು ಸಚಿವ ಎಚ್‌.ಕೆ.ಪಾಟೀಲ ಉದ್ಘಾಟಿಸಿದರು   

ಗದಗ: ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಬಹಳ ಮುಖ್ಯ. ಲಂಬಾಣಿ ಸಮುದಾಯದ ಜನರು ಶಿಕ್ಷಣಕ್ಕೆ ಮಹತ್ವ ನೀಡುವುದರ ಮೂಲಕ ಉತ್ತಮ ಸಮಾಜ ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ನಗರದ ಜಿಲ್ಲಾಡಳಿತ ಭವನದನಲ್ಲಿ ಮಂಗಳವಾರ ನಡೆದ ಸಂತ ಸೇವಾಲಾಲ್‌ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಲಂಬಾಣಿ ಸಮುದಾಯ ಇಂದಿಗೂ ತಮ್ಮ ಸಂಸ್ಕೃತಿಯನ್ನು ಬಿಟ್ಟುಕೊಡದೆ, ಮುಂದುವರೆಸಿಕೊಂಡು ಹೋಗುತ್ತಿರುವುದು ಸಂತಸದ ವಿಷಯ. ಇದಕ್ಕೆ ಸಂತ ಸೇವಾಲಾಲರು ಪ್ರೇರಣೆಯಾಗಿದ್ದಾರೆ’ ಎಂದರು.

ADVERTISEMENT

‘ಸಂಸ್ಕೃತಿ, ನಾಗರಿಕ ಪ್ರಜ್ಞೆ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದನ್ನು ನಾವು ತಾಂಡಾಗಳಲ್ಲಿ ಕಾಣಬಹುದಾಗಿದೆ. ಲಂಬಾಣಿ ಸಮಾಜ ಬಹುದೊಡ್ಡ ಸಮುದಾಯವಾಗಿದ್ದು, ದೇಶದಲ್ಲಿ ಸುಮಾರು 12 ಕೋಟಿಯಷ್ಟು ಜನಸಂಖ್ಯೆ ಹೊಂದಿದೆ’ ಎಂದರು.

‘ಲಂಬಾಣಿ ಸಮುದಾಯವು ಕೊಟ್ಟ ಮಾತನ್ನು ಉಳಿಸಿಕೊಳ್ಳುವ, ಸ್ವಾಭಿಮಾನಕ್ಕೆ ಮಾದರಿಯಾಗಿದೆ. ಪ್ರತಿವರ್ಷ ಕೂಡ ಇದೇ ರೀತಿ ಒಗ್ಗಟ್ಟಿನಿಂದ ಸಂತ ಸೇವಾಲಾಲರ ಜಯಂತಿಯನ್ನು ಆಚರಿಸಬೇಕು’ ಎಂದರು.

‘ಜಿಲ್ಲೆಯಲ್ಲಿ ಅನೇಕ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗಿದೆ. ಇತ್ತೀಚೆಗೆ 19 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಿ, ಅಲ್ಲಿನ ಜನರಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿದೆ’ ಎಂದರು.

ಸಂಪನ್ಮೂಲ ವ್ಯಕ್ತಿ, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಮಾಜಿ ಅಧ್ಯಕ್ಷ ಹರಿಲಾಲ ಪವಾರ ಸಂತ ಸೇವಾಲಾಲರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರೋಹನ್‌ ಜಗದೀಶ್, ಎಡಿಸಿ ಡಾ. ದುರಗೇಶ ಕೆ.ಆರ್., ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್.ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ತಹಶೀಲ್ದಾರ್‌ ಶ್ರೀನಿವಾಸಮೂರ್ತಿ ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಮಾಜದ ಹಿರಿಯರಾದ ಶಿವಪ್ಪ ನಾಯಕ, ಮುಖಂಡರು ಇದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಂಜಾರ ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು.

ಬಾಬು ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ ಅಲ್ಕೋಡ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತಪಡಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.

ಲಂಬಾಣಿ ಸಮುದಾಯ ತಮ್ಮದೇ ಆದ ಜನಪ್ರಾತಿನಿಧ್ಯ ವ್ಯವಸ್ಥೆ ಹೊಂದಿದೆ. ಲಂಬಾಣಿ ಜನರು ಹಿರಿಯರಿಗೆ ನೀಡುವ ಗೌರವ ಸಮಾಜಕ್ಕೆ ಮಾದರಿ.
ಎಚ್‌.ಕೆ.ಪಾಟೀಲ, ಸಚಿವ
ಸಂತ ಸೇವಾಲಾಲ್‌ ಜಯಂತಿಯನ್ನು ರಾಷ್ಟ್ರ ಮಟ್ಟದಲ್ಲಿ ಆಚರಿಸಲು ಹಾಗೂ ಲಂಬಾಣಿ ಸಮುದಾಯ ವಲಸೆ ಹೋಗದಂತೆ ತಡೆಯಲು ಉತ್ತಮ ಯೋಜನೆಗಳನ್ನು ಜಾರಿಗೊಳಿಸುವ ಅವಶ್ಯಕತೆ ಇದೆ.
ಹರಿಲಾಲ ಪವಾರ, ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.