
ಪ್ರಜಾವಾಣಿ ವಾರ್ತೆ
ಗದಗ: ಇಲ್ಲಿನ ಹೊಂಬಳನಾಕಾ ಜನತಾ ಕಾಲೊನಿ ನಿವಾಸಿಗಳು 40 ವರ್ಷಗಳಿಂದ ಮೂಲಸೌಕರ್ಯದಿಂದ ವಂಚಿತರಾಗಿದ್ದು, ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಬದುಕುವಂತಾಗಿದೆ.
ಜನತಾ ಕಾಲೊನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಇಲ್ಲಿಗೆ ತಲುಪಲು ಉತ್ತಮ ರಸ್ತೆ ಸಂಪರ್ಕವಿಲ್ಲ. ಹದಗೆಟ್ಟಿರುವ ಚರಂಡಿ ವ್ಯವಸ್ಥೆಯಿಂದಾಗಿ ಡೆಂಗಿ ಮತ್ತು ಮಲೇರಿಯಾ ಭೀತಿಯಲ್ಲೇ ಜನರು ದಿನ ಕಳೆಯುವಂತಾಗಿದೆ.
‘ಮಕ್ಕಳಿಗೆ ಆಟ ಆಡಲು, ಕಾಲೊನಿ ಜನರ ವಾಯುವಿಹಾರಕ್ಕೆ ಉದ್ಯಾನಗಳಿಲ್ಲ. ರಾಜಕಾಲುವೆಯ ಅರೆಬರೆ ಕಾಮಗಾರಿ ಸೇರಿದಂತೆ ಹಲವು ಸಮಸ್ಯೆಗಳಿಂದ ಇಲ್ಲಿನ ಜನರು ನಲುಗುವಂತಾಗಿದೆ’ ಎಂದು ಹೊಂಬಳನಾಕಾ ಜನತಾ ಕಾಲೊನಿ ಅಭಿವೃದ್ಧಿಪರ ಸೇವಾ ಸಂಘದ ಅಧ್ಯಕ್ಷ ಕೃಷ್ಣಾ ಎಚ್. ಹಡಪದ ಹೇಳಿದರು.
‘ಈ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ಮಾರ್ಗಗಳಲ್ಲಿ ರಸ್ತೆಗಳು ಇಲ್ಲದ ಕಾರಣ ಮಕ್ಕಳು ಶಾಲೆಗೆ ಹೋಗಲು ತೊಂದರೆಯಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಅಂಬುಲೆನ್ಸ್, ಅಗ್ನಿಶಾಮಕ ವಾಹನ, ನಗರಸಭೆಯ ಕಸದ ವಾಹನ ಬರಲಾಗುತ್ತಿಲ್ಲ. ಜನತಾ ಕಾಲೊನಿಯ ಸಮಸ್ಯೆಗಳನ್ನು ಪರಿಹರಿಸಲು ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ’ ಎಂದು ನಿವಾಸಿಗಳಾದ ಶರಣಪ್ಪ ಸೂಡಿ, ರಾಘವೇಂದ್ರ ಗಾಮನಗಟ್ಟಿ, ಚಾಂದ್‌ಸಾಬ ಬದಾಮಿ, ರಾಜು ತಹಶೀಲ್ದಾರ ದೂರಿದರು.
Highlights - ಮೂಲಸೌಕರ್ಯಗಳ ಕೊರತೆಯಿಂದ ನಲುಗಿದ ಜನತೆ ಅಸ್ವಚ್ಛತೆ: ಡೆಂಗಿ, ಮಲೆರಿಯ ಹರಡುವ ಭೀತಿ ರಾಜಕಾಲುವೆ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯ
Quote - ಕಾಲೊನಿಯಲ್ಲಿ ಮೂಲಸೌಕರ್ಯ ಇಲ್ಲದ ಕಾರಣ ಜೀವನ ನಿರ್ವಹಣಗೆ ಕಷ್ಟವಾಗಿದೆ. ಅನೈರ್ಮಲ್ಯದಿಂದಾಗಿ ಸೊಳ್ಳೆ ಹೆಚ್ಚಾಗಿ ಆರೋಗ್ಯಕ್ಕೆ ಹಾನಿಯಾಗುತ್ತಿದೆ ಪರಶುರಾಮ ಅಣ್ಣಿಗೇರಿ ಸೇವಾ ಸಂಘದ ಕಾರ್ಯಾಧ್ಯಕ್ಷ
Quote - ಹೊಂಬಳನಾಕಾ ಜನತಾ ಕಾಲೊನಿಯ ಸಮಸ್ತೆಗಳನ್ನು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಲಾಗುವುದು ಕೃಷ್ಣಗೌಡ ಎಚ್.ಪಾಟೀಲ ಜಿಲ್ಲಾಧ್ಯಕ್ಷ ಯುವ ಕಾಂಗ್ರೆಸ್ ಸಮಿತಿ
Cut-off box - ರಸ್ತೆ ಸಂಪರ್ಕ ಕಲ್ಪಸಲು ಆಗ್ರಹ ‘ರೈಲ್ವೆ ಹಳಿ ಪಕ್ಕದಲ್ಲಿ ಹಳೇ ಕೋರ್ಟ್‌ನಿಂದ ಆರಂಭಗೊಂಡಿರುವ ರಸ್ತೆ ನಿರ್ಮಾಣ ಕಾಮಗಾರಿಯು ಈಗಾಗಲೇ ಡಿಸಿ. ಮಿಲ್ ಕಾಂಪೌಂಡಿನವರೆಗೆ ತಲುಪಿದೆ. ಕಾಂಪೌಂಡ್ ಅನ್ನು ಭಾಗಶಃ ಒಡೆದು ಹೊಂಬಳನಾಕಾ ಜನತಾ ಕಾಲೊನಿಯ ನಾಲ್ಕು ರಸ್ತೆಗಳಿಗೆ ಸಂಪರ್ಕ ಕಲ್ಪಿಸಿದರೆ ಸಮಸ್ಯೆ ಬಗೆಹರಿಯಲಿದೆ’ ಎಂದು ನಿವಾಸಿಗಳಾದ ಸದ್ದಾಂ ಹುಸೇನಭಾಷಾ ಲಕ್ಷ್ಮೇಶ್ವರ ಉಮೇಶ ಬೆಳಧಡಿ ರಾಮಣ್ಣ ಮಂಜುನಾಥ ಕಕ್ಕೇರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.