ಗದಗ: ‘ದೇಶದ ಪ್ರಜೆಗಳ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆ ಅಭಿವೃದ್ಧಿ ಪಡಿಸುವುದು ಮಾನವ ಅಭಿವೃದ್ಧಿ ಸೂಚ್ಯಂಕದ ಪ್ರಮುಖ ಅಂಶಗಳಾಗಿವೆ’ ಎಂದು ಕರ್ಮಯೋಗಿ ಮಿಷನ್‌ನ ಡಾ. ಬಾಲಸುಬ್ರಹ್ಮಣ್ಯಂ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ‘ಮಾನವ ಅಭಿವೃದ್ಧಿ ಸೂಚ್ಯಂಕ ಹಾಗೂ ಸುಸ್ಥಿತ ಅಭಿವೃದ್ಧಿ ಗುರಿ’ ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮಗು ಹುಟ್ಟಿದಾಗ ಆರೋಗ್ಯಕರವಾಗಿ, ಪ್ರಜ್ಞಾವಂತನಾಗಿ, ಕೌಶಲ್ಯತೆಯಿಂದ ವಿಕಸನ ಹೊಂದಿದರೆ ನಿಜವಾದ ಅಭಿವೃದ್ಧಿಯಾದಂತೆ. ವಿಕಸಿತ ಪಂಚಾಯಿತಿ ಕ್ರೋಡೀಕರಿಸಿದರೆ ವಿಕಸಿತ ಭಾರತವಾಗುತ್ತದೆ’ ಎಂದರು.
‘ಮಹಾತ್ಮ ಗಾಂಧೀಜಿಯವರು ಕಂಡ ಗ್ರಾಮೀಣಾಭಿವೃದ್ಧಿಯ ಕನಸು ನನಸಾಗಬೇಕು. ಸಂಪನ್ಮೂಲಗಳ ಕ್ರೋಡೀಕರಣ ವ್ಯವಸ್ಥೆ, ಆಡಳಿತದ ವ್ಯವಸ್ಥೆಯಲ್ಲಿ ಎದುರಾಗುವ ತೊಂದರೆಗಳು, ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ‘ಜಿಲ್ಲೆಯು ಹಲವಾರು ಮಹತ್ವದ ಯೋಜನೆಗಳಿಗೆ ಸರ್ಕಾರಕ್ಕೆ ಮಾರ್ಗದರ್ಶಿಯಾಗಿದೆ. ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ಶುದ್ಧ ಕುಡಿಯುವ ನೀರು ಸಿಗಬೇಕೆಂಬುದು ಸರ್ಕಾರದ ಆಶಯವಾಗಿತ್ತು. ಈ ಯೋಜನೆಯನ್ನು ಪಂಚಾಯಿತಿ, ಗ್ರಾಮಗಳಲ್ಲಿ ಯಶಸ್ವಿಯಾಗಿ ಅನುಷ್ಟಾನ ಮಾಡಲಾಯಿತು. ಸದ್ಯ ಕರ್ನಾಟಕದಲ್ಲಿ 20,000 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಸಾಧ್ಯವಾಗಿದೆ. ಇದು ಗದಗ ಜಿಲ್ಲೆಯಿಂದ ಆರಂಭವಾದ ಯೋಜನೆ ಅಭೂತಪೂರ್ವ ಯಶಸ್ವಿಯಾಗಿದ್ದು ನಮ್ಮ ಹೆಮ್ಮೆ’ಎಂದರು.
‘ಜಿಲ್ಲೆಯಲ್ಲಿಯ ಶಾಲೆಗಳ ಮೂಲಸೌಲಭ್ಯ, ಶೌಚಾಲಯಗಳ ಸ್ವಚ್ಛತೆ ಕುರಿತು ಆಯಾ ವ್ಯಾಪ್ತಿಯ ಪಿಡಿಒಗಳು, ಅಧ್ಯಕ್ಷ, ಉಪಾಧ್ಯಕ್ಷರು ಶಾಲೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಬೇಕು. ಶೌಚಾಲಯಗಳ ಸ್ಥಿತಿಗತಿ ವರದಿಯನ್ನು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಬೇಕು. ಬರುವ ಪ್ರಸ್ತಾವಗಳನ್ನು ಮೇಲಿನ ಹಂತಕ್ಕೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು.
‘ಪ್ರಭುವಿನೆಡೆಗೆ ಪ್ರಭುತ್ವ’ ಕಾರ್ಯಕ್ರಮವನ್ನು ಆಗಸ್ಟ್ 15ರಂದು ಗದಗನಲ್ಲಿ ಆರಂಭಿಸಲಾಗಿದೆ. ಸಾರ್ವಜನಿಕರು ತಮ್ಮ ದೂರು ಅಹವಾಲುಗಳನ್ನು ಯಂತ್ರದಲ್ಲಿ ದಾಖಲಿಸುವ ಮೂಲಕ ಶೀಘ್ರ ಪರಿಹಾರ ಕಂಡುಕೊಳ್ಳಲು ಉತ್ತಮ ಮಾರ್ಗವಾಗಿದೆ. ಸಾರ್ವಜನಿಕರ ಅಹವಾಲುಗಳಿಗೆ ಜಿಲ್ಲಾಡಳಿತ ತಕ್ಷಣ ಸ್ಪಂದಿಸಿ ಪರಿಹಾರ ಒದಗಿಸುತ್ತಿದೆ. ಇದೊಂದು ಮಾದರಿ ಕಾರ್ಯಕ್ರಮವಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ವಿಸ್ತರಿಸುವ ಯೋಜನೆಇದೆ’ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ, ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ರಾಜೂರ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಶಕುಂತಲಾ ಅಕ್ಕಿ, ಜೆ.ಕೆ.ಜಮಾದಾರ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್.ಮುಂಡರಗಿ ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು, ಪಿಡಿಒಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ದೇಶದ ಅಭಿವೃದ್ಧಿಯಲ್ಲಿ ಪಂಚಾಯಿತಿಗಳ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಪಿಡಿಒಗಳು ಕ್ರಿಯಾತ್ಮಕವಾಗಿ ಕೆಲಸ ನಿರ್ವಹಿಸಬೇಕು.– ಎಚ್.ಕೆ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.