ADVERTISEMENT

ಗದಗ: ಕೆ.ಎಚ್‌. ಪಾಟೀಲ ಆಸ್ಪತ್ರೆಯಲ್ಲಿ ಅನ್ಯ ರಕ್ತದ ಗುಂಪಿನ ರೋಗಿಗೆ ಕಿಡ್ನಿ ಕಸಿ

ಹುಲಕೋಟಿಯ ಕೆ.ಎಚ್‌.ಪಾಟೀಲ ಆಸ್ಪತ್ರೆ ವೈದ್ಯರ ಸಾಧನೆ; ಮಗಳಿಗೆ ತಾಯಿಯ ಕಿಡ್ನಿ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 6:21 IST
Last Updated 28 ಡಿಸೆಂಬರ್ 2025, 6:21 IST
ಹೊಂದಾಣಿಕೆಯಾಗದ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯಲ್ಲಿ ಭಾಗವಹಿಸಿದ್ದ ಗದಗ ತಾಲ್ಲೂಕಿನ ಹುಲಕೋಟಿ ಕೆ.ಎಚ್‌.ಪಾಟೀಲ ಆಸ್ಪತ್ರೆಯ ತಜ್ಞ ವೈದ್ಯರ ತಂಡ 
ಹೊಂದಾಣಿಕೆಯಾಗದ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯಲ್ಲಿ ಭಾಗವಹಿಸಿದ್ದ ಗದಗ ತಾಲ್ಲೂಕಿನ ಹುಲಕೋಟಿ ಕೆ.ಎಚ್‌.ಪಾಟೀಲ ಆಸ್ಪತ್ರೆಯ ತಜ್ಞ ವೈದ್ಯರ ತಂಡ    

ಪ್ರಜಾವಾಣಿ ವಾರ್ತೆ

ಗದಗ: ‘ತಾಲ್ಲೂಕಿನ ಹುಲಕೋಟಿ ಗ್ರಾಮದ ಕೆ.ಎಚ್‌. ಪಾಟೀಲ ಆಸ್ಪತ್ರೆಯಲ್ಲಿ  ಮೊದಲ ಬಾರಿಗೆ ಅನ್ಯ ರಕ್ತದ ಗುಂಪಿನ ದಾನಿಯ ಕಿಡ್ನಿಯನ್ನು ಬೇರೊಂದು ರಕ್ತದ ಗುಂಪಿನ ರೋಗಿಗೆ ಕಸಿ ಮಾಡಲಾಗಿದೆ’ ಎಂದು ಕಿಡ್ನಿ ಕಸಿ ತಜ್ಞ ಅವಿನಾಶ್‌ ಓದುಗೌಡರ ತಿಳಿಸಿದರು.

‘ಕೆ.ಎಚ್‌. ಪಾಟೀಲ ಆಸ್ಪತ್ರೆಯಲ್ಲಿ ಈವರೆಗೆ ಹಲವು ರೋಗಿಗಳಿಗೆ ಕಿಡ್ನಿ ಕಸಿ ಮಾಡಲಾಗಿದೆ. ಆದರೆ, ಈ ಪ್ರಕರಣ ಅವೆಲ್ಲವಕ್ಕಿಂತ ಒಂದು ಹೆಜ್ಜೆ ಮುಂದಿದೆ. ಆಸ್ಪತ್ರೆಯ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಆಗಲಿದೆ. ಇದು ಅತ್ಯಂತ ಸವಾಲಿನ ಪ್ರಕ್ರಿಯೆಯಾಗಿದ್ದು, ಯಶಸ್ವಿಯಾಗಿ ನಿಭಾಯಿಸಲಾಗಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ADVERTISEMENT

‘ಡಿ.17ರಂದು ನಡೆದ ಶಸ್ತ್ರಚಿಕಿತ್ಸೆಯಲ್ಲಿ 29 ವರ್ಷದ ಯುವತಿಗೆ ಹೊಂದಾಣಿಕೆಯಾಗದ ಮೂತ್ರಪಿಂಡ ಕಸಿ (ಎಬಿಒ–ಐ) ಮಾಡಲಾಗಿದೆ. ಯುವತಿಯ ತಾಯಿಯೇ ಕಿಡ್ನಿ ದಾನಿಯಾಗಿದ್ದರು. ಇಬ್ಬರ ರಕ್ತದ ಗುಂಪು ಬೇರೆಯಾಗಿತ್ತು. ಇಂತಹ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿದರೆ ಕಿಡ್ನಿ ಕೆಲಸ ಮಾಡುವುದಿಲ್ಲ. ಒಮ್ಮೊಮ್ಮೆ ರೋಗಿಯ ಜೀವಕ್ಕೆ ಆಪತ್ತು ಎದುರಾಗುತ್ತದೆ’ ಎಂದರು.

‘ಇದರ ಗಂಭೀರತೆ ಅರಿತ ತಜ್ಞ ವೈದ್ಯರೆಲ್ಲರೂ ಚರ್ಚಿಸಿ, ರೋಗಿಯ ದೇಹದಲ್ಲಿದ್ದ ಆ್ಯಂಟಿಬಾಡಿಗಳನ್ನು ತೆಗೆದು, ಕಿಡ್ನಿ ಕಸಿ ಮಾಡಲು ನಿರ್ಧರಿಸಿದೆವು. ಅದಕ್ಕೆ ಪೂರಕವಾಗಿ ನ.17ರಿಂದಲೇ ತಯಾರಿ ಆರಂಭಿಸಿದೆವು. ರೋಗಿಯ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕಡಿಮೆ ಮಾಡಲು ಇಂಜೆಕ್ಷನ್‌, ಔಷಧಗಳನ್ನು ಕೊಡಲಾಯಿತು. ಪ್ಲಾಸ್ಮದಲ್ಲಿನ ಆ್ಯಂಟಿಬಾಡಿಗಳನ್ನು ಹೊರಹಾಕಿ, ದಾನಿಯ ರಕ್ತದ ಗುಂಪಿನ ಪ್ಲಾಸ್ಮ ಹಾಕಲಾಯಿತು’ ಎಂದು ವಿವರಿಸಿದರು.

‘ರೋಗಿಯ ದೇಹ ಹೊಸ ಬದಲಾವಣೆಗೆ ಹೊಂದಿಕೊಳ್ಳುವವರೆಗೆ ಈ ಪ್ರಕ್ರಿಯೆಯನ್ನು ಮೂರ್ನಾಲ್ಕು ಬಾರಿ ಮಾಡಲಾಯಿತು. ಇದು ಅತ್ಯಂತ ಸವಾಲಿನ ದಿನಗಳಾಗಿದ್ದು, ತುಂಬಾ ಸೂಕ್ಷ್ಮವಾಗಿ ನಿಭಾಯಿಸಲಾಯಿತು’ ಎಂದು ಹೇಳಿದರು.

ಕೆ.ಎಚ್.ಪಾಟೀಲ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಸ್‌.ಆರ್‌.ನಾಗನೂರ ಮಾತನಾಡಿ, ‘ಅಂಗಾಂಗ ದಾನ ಜಾಗೃತಿ ಮತ್ತು ದಾನಿಗಳ ನೋಂದಣಿ ಅಭಿಯಾನಗಳು ಸೇರಿದಂತೆ ವಿವಿಧ ಕೆಲಸಗಳಲ್ಲಿ ಆಸ್ಪತ್ರೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಸಚಿವ ಎಚ್.ಕೆ.ಪಾಟೀಲ ಮತ್ತು ಮಾಜಿ ಶಾಸಕ ಡಿ.ಆರ್.ಪಾಟೀಲ ಅವರ ದೂರದೃಷ್ಟಿ, ಮಾರ್ಗದರ್ಶನ, ನಿರಂತರ ಬೆಂಬಲ ಮತ್ತು ಪ್ರೋತ್ಸಾಹದಿಂದ ಈ ಎಲ್ಲಾ ಸಾಧನೆಗಳು ಸಾಧ್ಯವಾಗಿವೆ’ ಎಂದರು. 

ಸಚಿವ ಎಚ್‌.ಕೆ.ಪಾಟೀಲ ಮಾಜಿ ಶಾಸಕ ಡಿ.ಆರ್‌.ಪಾಟೀಲ ಅವರ ಸಹಕಾರದಲ್ಲಿ ಗ್ರಾಮೀಣ ಭಾಗದಲ್ಲಿ ಕಿಡ್ನಿ ಕಸಿ ಕೇಂದ್ರ ತೆರೆಯಲಾಗಿದೆ. ಇದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಸಿಕ್ಕಿದೆ
ಡಾ. ಅವಿನಾಶ್‌ ಓದುಗೌಡರ ಕಿಡ್ನಿ ಕಸಿ ತಜ್ಞ
ಇಡೀ ದೇಶದಲ್ಲಿ ಗ್ರಾಮೀಣ ಭಾಗದಲ್ಲಿ ಕಿಡ್ನಿ ಕಸಿ ಮಾಡಿದ ಹೆಗ್ಗಳಿಕೆಗೆ ನಮ್ಮ ಆಸ್ಪತ್ರೆ ಪಾತ್ರವಾಗಿದೆ. ಈ ಕುರಿರು ಇಂಗ್ಲೆಂಡ್‌ನ ಮಾಧ್ಯಮಗಳಲ್ಲೂ ವರದಿಯಾಗಿದೆ
ಡಾ. ಎಸ್‌.ಆರ್‌.ನಾಗನೂರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ

‘ಉತ್ತಮ ಸ್ಥಿತಿಯಲ್ಲಿ ರೋಗಿ ದಾನಿ’

ಹೊಂದಾಣಿಕೆಯಾಗದ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಪರಿಣತಿ ಬೇಕು. ವೈದ್ಯರಾದ ದೀಪಕ್ ಕುರಹಟ್ಟಿ ಭುವನೇಶ್ ಎನ್. ಪವನ್ ಕೋಳಿವಾಡ ನಿಯಾಜ್ ಅಹ್ಮದ್ ವಿಶಾಲ್ ಕೆ. ಮತ್ತು ವಂದನಾ ಅವರನ್ನೊಳಗೊಂಡ ತಜ್ಞರ ತಂಡವು ಯಶಸ್ವಿ ಶಸ್ತ್ರಚಿಕಿತ್ಸೆಗಾಗಿ ಶ್ರಮಿಸಿದೆ. ತರಬೇತಿ ಪಡೆದ ಶುಶ್ರೂಷಕ ಸಿಬ್ಬಂದಿ ತಂತ್ರಜ್ಞರು ಮತ್ತು ಪ್ರಯೋಗಾಲಯ ತಜ್ಞರ ಬೆಂಬಲದೊಂದಿಗೆ ಯಶಸ್ವಿಯಾಗಿ ನಿಭಾಯಿಸಿದೆ. ರೋಗಿ ಮತ್ತು ದಾನಿ ಇಬ್ಬರೂ ಆರೋಗ್ಯವಾಗಿದ್ದಾರೆ’ ಎಂದು ಡಾ. ಅವಿನಾಶ್‌ ಓದುಗೌಡರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.