ADVERTISEMENT

ಗದಗ: ವೈದ್ಯಕೀಯ ವಿಜ್ಞಾನದ ಆಸಕ್ತಿ ತಣಿಸಿದ ಮೆಡಿವಿಜನ್‌

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 3:08 IST
Last Updated 22 ಜುಲೈ 2025, 3:08 IST
ದೈಹಿಕ ಬೆಳವಣಿಗೆಗೆ ಏನೇನು ತಿನ್ನಬೇಕು ಎಂಬುದರ ವಿವರಣೆ ನೀಡಿದ ಯುವವೈದ್ಯರು
ದೈಹಿಕ ಬೆಳವಣಿಗೆಗೆ ಏನೇನು ತಿನ್ನಬೇಕು ಎಂಬುದರ ವಿವರಣೆ ನೀಡಿದ ಯುವವೈದ್ಯರು   

ಗದಗ: ಹೇ ಅಲ್ನೋಡ್ಲೆ ಯಪ್ಪಾ, ಅಸ್ತಿಪಂಜರ ಹೆಂಗ್‌ ಮಾತಾಡ್ಲಿಕತ್ತೈತೆ, ತಲೆಬುರ್‌ಡೆ ನೋಡು, ಅದರ ಹಲ್‌ ನೋಡು ಮನ್ಶಾನೇ ನಕ್ಕಂಗೆ ಅನಸಕತ್ತೈತೆ... ಲೋ ಮಂಗ್ಯಾ ಅಲ್ನೋಡ್ಲೆ, ಮಂಗ್ಯಾನಿಂದ ಮನ್ಶಾ ಹೆಂಗಾಗವ್ನೇ ಅಂತ ತೋರ್ಸವ್ರೇ... ಭೂತದ ಮನೆಯೊಳಗೆ ಪಿಶಾಚಿಗಳು ಯಂಗೆ ಕಿರಚಾಕತ್ತಾವೋ ಯಪ್ಪಾ...

ಮನರಂಜನೆ ಆಟದಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು

ಇಂತಹ ನೂರಾರು ಆಸಕ್ತಿಕರ ಮಾತುಗಳು, ಸಂಭಾಷಣೆಗಳು ಕಿವಿಗೆ ಬಿದ್ದಿದ್ದು, ಇಲ್ಲಿನ ಕೆ.ಎಚ್‌.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಆಯೋಜಿಸಿದ್ದ ವೈದ್ಯಕೀಯ ವಿಜ್ಞಾನ ವಸ್ತುಪ್ರದರ್ಶನದಲ್ಲಿ.

ವೈದ್ಯಕೀಯ ವಿಜ್ಞಾನದ ಬಗ್ಗೆ ಆಸಕ್ತಿ ಇರುವ ಮಕ್ಕಳೆಲ್ಲರೂ ಅಲ್ಲಿನ ಮಾದರಿಗಳನ್ನು ಬೆರಗಿನಿಂದ ಕಣ್ತುಂಬಿಕೊಂಡರು. ದೇಹದಲ್ಲಿನ ಯಾವ ಭಾಗಗಳು ಹೇಗೆ ಕಾರ್ಯಾಚರಿಸುತ್ತವೆ, ಅವುಗಳ ರಕ್ಷಣೆ ಹೇಗೆ ಎಂಬುದರ ಬಗ್ಗೆ ತಮ್ಮ ಮನಸ್ಸಿನಲ್ಲಿದ್ದ ಗೊಂದಲಗಳಿಗೆ ಪ್ರಶ್ನೆ ರೂಪ ನೀಡಿದ ವಿದ್ಯಾರ್ಥಿಗಳು ಅದಕ್ಕೆ ವೈದ್ಯರಿಂದ ಉತ್ತರ ಪಡೆದುಕೊಂಡರು. ರೋಗಶಾಸ್ತ್ರದಲ್ಲಿ ಬಳಕೆ ಆಗುತ್ತಿರುವ ನವೀನ ತಂತ್ರಜ್ಞಾನಗಳ ಮಾಹಿತಿಯನ್ನೂ ಕುತೂಹಲದಿಂದ ಕೇಳಿ ತಿಳಿದುಕೊಂಡರು.

ADVERTISEMENT

ಕೆ.ಎಚ್‌.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ 10 ವರ್ಷಗಳು ತುಂಬಿರುವ ಹಿನ್ನಲೆಯಲ್ಲಿ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ‘ಮೆಡಿವಿಜನ್‌ 2025– ವೈದ್ಯಕೀಯ ವಿಜ್ಞಾನ ವಸ್ತುಪ್ರದರ್ಶನ’ ವಿದ್ಯಾರ್ಥಿಗಳಿಗೆ ಭರಪೂರ ಮಾಹಿತಿ ಒದಗಿಸುವಲ್ಲಿ ಯಶಸ್ವಿಯಾಯಿತು.

ಕಣ್ಣು, ಮೂಗು, ಬಾಯಿ, ಕಿವಿ ಸೇರಿದಂತೆ ಇಡೀ ದೇಹದ ಸಂಕೀರ್ಣ ರಚನೆಗಳನ್ನು ಯುವ ವೈದ್ಯರು ವಿದ್ಯಾರ್ಥಿಗಳಿಗೆ ಸರಳವಾಗಿ ತಿಳಿಸಿಕೊಟ್ಟರು. ವೈದ್ಯರ ವಿವರಣೆಯನ್ನು ಮಕ್ಕಳು ಆಸಕ್ತಿಯಿಂದ ಕೇಳಿ, ತಿಳಿದುಕೊಂಡರು.

ಜನರಲ್‌ ಮೆಡಿಸನ್‌, ಮನೋವೈದ್ಯಕೀಯ, ಸರ್ಜರಿ, ಇಎನ್‌ಟಿ, ರಕ್ತ, ಕರಳು, ಕಿಡ್ನಿ, ಮೂಳೆ ಮತ್ತು ಎಲುಬು, ಅನಾಟಮಿ, ಪ್ರಸೂತಿ ಮತ್ತು ಹೆರಿಗೆ ಸೇರಿದಂತೆ ವೈದ್ಯಕೀಯ ವಿಜ್ಞಾನದಲ್ಲಿರುವ ಅಷ್ಟು ಶಾಖೆಗಳ ವಿವರಣೆ ನೀಡಲು ಪ್ರತ್ಯೇಕ ಸ್ಟಾಲ್‌ಗಳನ್ನು ನಿರ್ಮಿಸಲಾಗಿತ್ತು. ಅದಕ್ಕೆ ಸಂಬಂಧಿಸಿದ ಮಾದರಿಗಳನ್ನು ಇರಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಜ್ಞಾನ ಹಂಚುವುದರ ಜತೆಗೆ ವೈದ್ಯಕೀಯ ಅಭ್ಯಾಸ ಮಾಡುತ್ತಿರುವ ಯುವ ವೈದ್ಯರ ಕಲಿಕೆಗೂ ಪೂರಕವಾಗಿತ್ತು. ಮಾದರಿ ತೋರಿಸಿ ವಿವರಣೆ ನೀಡಿದ್ದರಿಂದಾಗಿ ಮಕ್ಕಳ ಆಸಕ್ತಿಯೂ ಹಿಗ್ಗಿತ್ತು.

ಮೂರು ದಿನ ನಡೆಯುವ ವಸ್ತುಪ್ರದರ್ಶನದಲ್ಲಿ ಸೋಮವಾರ 8200 ಮಕ್ಕಳು ಭಾಗವಹಿಸಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳನ್ನು ಶಿಕ್ಷಕರು ಕರೆತಂದಿದ್ದರು
ಡಾ. ಬಸವರಾಜ ಬೊಮ್ಮನಹಳ್ಳಿ ಸಂಸ್ಥೆಯ ನಿರ್ದೇಶಕ

ವಸ್ತುಪ್ರದರ್ಶನಕ್ಕೆ ಸಚಿವ ಎಚ್‌.ಕೆ.ಪಾಟೀಲ ಚಾಲನೆ

ಗದಗ ನಗರದ ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಆಯೋಜಿಸಿದ್ದ ಮೆಡಿವಿಜನ್– ಮೂರು ದಿನಗಳ ವೈದ್ಯಕೀಯ ವಿಜ್ಞಾನ ವಸ್ತುಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಸೋಮವಾರ ಚಾಲನೆ ನೀಡಿದರು. ವೈದ್ಯಕೀಯ ವಸ್ತು ಪ್ರದರ್ಶನ ಜುಲೈ 23ರವರೆಗೆ ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ನಡೆಯಲಿದ್ದು ಪ್ರೌಢಶಾಲೆ ಹಾಗೂ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.