ADVERTISEMENT

ಗದಗ: ಅಲೆಮಾರಿಗಳಿಗೆ ಇಲ್ಲ ಶಾಶ್ವತ ಸೂರು

ಒಂದೆಡೆ ಮನೆ ವಂಚಿತ ಬಡವರು; ಇನ್ನೊಂದೆಡೆ ಪಾಳುಬಿದ್ದ ಮನೆಗಳು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 7 ಸೆಪ್ಟೆಂಬರ್ 2019, 19:45 IST
Last Updated 7 ಸೆಪ್ಟೆಂಬರ್ 2019, 19:45 IST
ಗುಡಿಸಲ ಮುಂದೆ ಅಡುಗೆ ಸಿದ್ಧಪಡಿಸುತ್ತಿರುವ ದುರಗಮರಗಿ ಸಮುದಾಯದ ಮಹಿಳೆಯರು
ಗುಡಿಸಲ ಮುಂದೆ ಅಡುಗೆ ಸಿದ್ಧಪಡಿಸುತ್ತಿರುವ ದುರಗಮರಗಿ ಸಮುದಾಯದ ಮಹಿಳೆಯರು   

ನರೇಗಲ್: ಪಟ್ಟಣದ ವಿವಿಧೆಡೆ ಹಲವು ದಶಕಗಳಿಂದ ನೆಲೆ ಕಂಡುಕೊಂಡಿರುವ ಅಲೆಮಾರಿ ಸಮುದಾಯದ ಕುಟುಂಬಗಳಿಗೆ ಸ್ವಂತ ಸೂರು ಎನ್ನುವುದು ಕನಸಿನ ಮಾತಾಗಿದೆ.

ಒಂದೆಡೆ ನಿವೇಶನಗಳು ಪಾಳುಬಿದ್ದಿದ್ದರೂ ಇವರಿಗೆ ಸ್ವಂತ ಮನೆ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಸುತ್ತಿಲ್ಲ. ಪರಿಣಾಮ ಕನಿಷ್ಠ ಮೂಲಸೌಕರ್ಯವೂ ಇಲ್ಲದೆ ಇವರು ಶೋಚನೀಯ ಬದುಕು ಸಾಗಿಸುತ್ತಿದ್ದಾರೆ.

ದುರಗಮುರಗಿ ಸಿಂಧೋಳ್ ಸಮುದಾಯದ 60 ಕುಟುಂಬಗಳು ಹಲವು ದಶಕಗಳಿಂದ ಪಟ್ಟಣದಲ್ಲಿ ವಿವಿಧೆಡೆ ಗುಡಿಸಲು ಹಾಕಿಕೊಂಡು ಬದುಕುತ್ತಿದ್ದಾರೆ. ಮೊದಲು ಇವರು ಹಿರೇಕೆರೆಯ ದಂಡೆಯ ಮೇಲೆ ಇದ್ದರು. ಅಲ್ಲಿಂದ ಸ್ಥಳಾಂತರ ಮಾಡಿದ ಮೇಲೆ ಉಡುಪಿಯವರ ಮನೆ ಹತ್ತಿರ ಗುಡಿಸಲು ಹಾಕಿದ್ದಾರೆ. ಅಲ್ಲಿಂದಲೂ ಎತ್ತಂಗಡಿ ಆದ ನಂತರ ಬುಲ್ಡೋಜರ ನಗರದಲ್ಲಿ ಆಶ್ರಯ ಪಡೆದಿದ್ದಾರೆ.

ADVERTISEMENT

8 ದಶಕಗಳಿಂದ ಹೋಬಳಿಯಲ್ಲಿ ನೆಲೆ ಕಂಡುಕೊಂಡಿರುವ ಲಂಬಾಣಿ ಸಮುದಾಯದ 20 ಕುಟುಂಬಗಳು ರೈತರ ಜಮೀನಿನಲ್ಲಿ, ತೋಟಗಳಲ್ಲಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರ ಮಕ್ಕಳು 10 ಕಿ.ಮೀ ದೂರ ನಡೆದುಕೊಂಡು ಪಟ್ಟಣಕ್ಕೆ ಬಂದು ಶಾಲೆಗೆ ಹೋಗುತ್ತಿದ್ದಾರೆ. ಕುಂಚಿಕೋರವರ ಸಮುದಾಯದ 20 ಕುಟುಂಬಗಳು ಭೂತನಾಥೇಶ್ವರ ದೇವಸ್ಥಾನದ ‍ಪಕ್ಕದಲ್ಲಿ, ಜೋಗ್ಯಾರ ಸಮುದಾಯದ 10, ಜಾತಿಗಾರರ 8 ಕುಟುಂಬಸ್ಥರು ಪಟ್ಟಣದಲ್ಲಿ ಅಲ್ಲಲ್ಲಿ ಗುಡಿಸಲು ಹಾಕಿಕೊಂಡು ಆಶ್ರಯ ಪಡೆದಿದ್ದಾರೆ.

ಗುಡಿಸಲ ಮುಂದಿನ ಬಯಲು ಜಾಗವೇ ಅಡುಗೆ ಮನೆಯಾಗಿದೆ. ಮಳೆ ಬಂದಾಗ ಇವರ ಪಾಡು ದೇವರಿಗೇ ಪ್ರೀತಿ. ಸಾಕಷ್ಟು ಜನರು ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿದ್ದಾರೆ.

‘ನಮಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತದಾನ ಹಕ್ಕು ಎಲ್ಲವೂ ಇದೆ. ಅದರ ಪ್ರಯೋಜನವನ್ನೂ ಪಡೆದುಕೊಳ್ಳುತ್ತಿದ್ದೇವೆ. ಆದರೆ, ನಮಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮತ್ತ ತಿರುಗಿಯೂ ನೋಡುವುದಿಲ್ಲ’ ಎಂದು ಮಾರೆಪ್ಪ ಕಟ್ಟಿಮನಿ, ಟಗರನಾಗಪ್ಪ ದುರಗಮರಗಿ, ಸೋಮಪ್ಪ ಮಾಳೋತ್ತರ, ಜಂಬವ್ವ ಪೂಜಾರಿ, ಹುಸೆನವ್ವ ಕಟ್ಟಿಮನಿ ಅಳಲು ತೋಡಿಕೊಂಡರು.

‘ಜನಪ್ರತಿನಿಧಿಗಳು, ಅಧಿಕಾರಿಗಳು ಒಂದು ರಾತ್ರಿ ನಮ್ಮ ಗುಡಿಸಲಲ್ಲಿ ವಾಸ್ತವ್ಯ ಮಾಡಿದರೆ ಪರಿಸ್ಥಿತಿಯ ನೈಜತೆ ತಿಳಿಯುತ್ತದೆ’ ಎನ್ನುತ್ತಾರೆ ಇವರು.

ಪಾಳು ಬಿದ್ದ 200 ಆಶ್ರಯ ಮನೆಗಳು

7ನೇ ವಾರ್ಡಿನ ದ್ಯಾಂಪುರ ಸಮೀಪದ ಶಾಸಕ ಕಳಕಪ್ಪ ಜಿ.ಬಂಡಿ ಅವರ ಹಿಂದಿನ ಆಡಳಿತಾವಧಿಯಲ್ಲಿ ನಿರ್ಮಿಸಲಾಗಿರುವ 200 ಆಶ್ರಯ ಮನೆಗಳು ಅರ್ಹ ಫಲಾನುಭವಿಗಳಿಗೆ ಹಂಚಿಕೆಯಾಗದೆ ಪಾಳುಬಿದ್ದಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಮನೆಗಳು ಅಕ್ರಮ ಚಟುವಟಿಕೆಗಳ ತಾಣವಾಗಿವೆ. ಗೋಡೆಗಳು ಬಿದ್ದಿವೆ. ಕಿಟಕಿ, ಬಾಗಿಲು ಕಳ್ಳರ ಪಾಲಾಗಿವೆ. ಒಂದೆಡೆ ಬಡವರು ಮನೆ ಇಲ್ಲದೆ ಪರದಾಡುತ್ತಿದ್ದಾರೆ ಇನ್ನೊಂದೆಡೆ ರಾಜಕೀಯ ಮೇಲಾಟದಲ್ಲಿ ಮನೆಗಳು ಹಂಚಿಕೆಯಾಗದೇ ಪಾಳುಬಿದ್ದಿವೆ.

**

ಇವರಿಗೆ ಪಟ್ಟಣ ಪಂಚಾಯ್ತಿಯಿಂದ ಆಶ್ರಯ ಮನೆಗಳು ಸಿಕ್ಕಿಲ್ಲ. ಬಯಲಲ್ಲಿಯೇ ಜೀವನ ಮಾಡುವಂತಾಗಿದೆ. ತಕ್ಷಣ ನೆಲೆ ಕಲ್ಪಿಸಬೇಕು
- ರವೀಂದ್ರನಾಥ ದೊಡ್ಡಮೇಟಿ, ಜಕ್ಕಲಿ ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.