ADVERTISEMENT

ಗದಗ: ₹1.22 ಕೋಟಿ ಮೌಲ್ಯದ ಸ್ವತ್ತು ಮಾಲೀಕರಿಗೆ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 4:24 IST
Last Updated 23 ಆಗಸ್ಟ್ 2025, 4:24 IST
ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹನ್‌ ಜಗದೀಶ್‌ ಅವರು ನಗರದ ಸಂಭಾಪೂರ ರಸ್ತೆಯ ಜಿಲ್ಲಾ ಪೊಲೀಸ್ ಭವನದಲ್ಲಿ ಶುಕ್ರವಾರ ನಡೆದ ಪ್ರಾಪರ್ಟಿ ರಿಟರ್ನ್‌ ಪರೇಡ್‌ನಲ್ಲಿ ಮೂಲ ಮಾಲೀಕರಿಗೆ ಸ್ವತ್ತು ಹಸ್ತಾಂತರಿಸಿದರು
ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹನ್‌ ಜಗದೀಶ್‌ ಅವರು ನಗರದ ಸಂಭಾಪೂರ ರಸ್ತೆಯ ಜಿಲ್ಲಾ ಪೊಲೀಸ್ ಭವನದಲ್ಲಿ ಶುಕ್ರವಾರ ನಡೆದ ಪ್ರಾಪರ್ಟಿ ರಿಟರ್ನ್‌ ಪರೇಡ್‌ನಲ್ಲಿ ಮೂಲ ಮಾಲೀಕರಿಗೆ ಸ್ವತ್ತು ಹಸ್ತಾಂತರಿಸಿದರು   

ಗದಗ: ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ನಡೆದ ಕಳ್ಳತನ, ಮೋಸ ಹಾಗೂ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ₹1.22 ಕೋಟಿ ಮೌಲ್ಯದ ಚಿನ್ನಾಭರಣ, ಮೊಬೈಲ್, ದ್ವಿಚಕ್ರ ವಾಹನ ಸೇರಿದಂತೆ ನಗದನ್ನು ವಶಪಡಿಸಿಕೊಂಡು ಮೂಲ ಸ್ವತ್ತು ಮಾಲೀಕರಿಗೆ ಮರಳಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ತಿಳಿಸಿದರು.

ನಗರದ ಸಂಭಾಪೂರ ರಸ್ತೆಯ ಜಿಲ್ಲಾ ಪೊಲೀಸ್ ಭವನದಲ್ಲಿ ಶುಕ್ರವಾರ ನಡೆದ ಪ್ರಾಪರ್ಟಿ ರಿಟರ್ನ್‌ ಪರೇಡ್‌ನಲ್ಲಿ ಮಾತನಾಡಿದರು.

‘2024ರ ಆ.1ರಿಂದ 2025ರ ಜುಲೈ 31ರ ಒಳಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾದ 1,262 ಕಳ್ಳತನ, ಮೋಸ, ವಂಚನೆ ಪ್ರಕರಣಗಳಲ್ಲಿ 61 ಸ್ವತ್ತಿನ ಹಾಗೂ ವಂಚನೆ ಪ್ರಕರಣಗಳನ್ನು ಹಾಗೂ 277 ಮೊಬೈಲ್‍ಗಳನ್ನು ಪತ್ತೆ ಮಾಡಿ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 95 ಆರೋಪಿಗಳನ್ನು ಬಂಧಿಸಲಾಗಿದ್ದು, ಒಟ್ಟಾರೆ ₹1.64 ಕೋಟಿ ಮೌಲ್ಯದ ವಂಚನೆ ಪ್ರಕರಣಗಳ ಪೈಕಿ ₹1.22 ಕೋಟಿ ಮೊತ್ತದ ಸ್ವತ್ತುಗಳನ್ನು ವಶಪಡಿಸಿಕೊಂಡು ಮೂಲ ಮಾಲೀಕರಿಗೆ ಹಸ್ತಾಂತರಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

‘₹89.77 ಲಕ್ಷ ಮೊತ್ತದ 1,700.93 ಗ್ರಾಂ ಚಿನ್ನಾಭರಣ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 55 ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 27 ಪ್ರಕರಣಗಳನ್ನು ಪತ್ತೆ ಮಾಡಿ, 33 ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ ₹42 ಲಕ್ಷ ಮೌಲ್ಯದ 711.12 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿದರು.

₹5 ಲಕ್ಷ ಮೌಲ್ಯದ 6,102 ಗ್ರಾಂ ಬೆಳ್ಳಿ ಆಭರಣಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ₹2.07 ಲಕ್ಷ ಮೌಲ್ಯದ 2,630 ಗ್ರಾಂ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಇದೇ ಅವಧಿಯಲ್ಲಿ ಕಳ್ಳತನವಾದ ₹16.10 ಲಕ್ಷ ನಗದು ಪೈಕಿ ₹2.74 ಲಕ್ಷ ಹಣವನ್ನು ಸೀಜ್ ಮಾಡಲಾಗಿದೆ. ವಾಹನಗಳ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲಾದ 49 ಪ್ರಕರಣಗಳ ಪೈಕಿ 25 ಪ್ರಕರಣಗಳನ್ನು ಪತ್ತೆ ಮಾಡಿ 35 ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ ₹23 ಲಕ್ಷ ಮೌಲ್ಯದ 97 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

21 ಮೋಸ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ 9 ಪ್ರಕರಣಗಳನ್ನು ಭೇದಿಸಿ 27 ಆರೋಪಿಗಳನ್ನು ವಶಕ್ಕೆ ಪಡೆದು ₹13.90 ಲಕ್ಷ ಪತ್ತೆ ಮಾಡಲಾಗಿದೆ. ಅದರ ಜತೆಗೆ 1,137 ಮೊಬೈಲ್ ಕಳ್ಳತನ ಪ್ರಕರಣಗಳ ಪೈಕಿ ₹41.55 ಲಕ್ಷ ಮೌಲ್ಯದ 277 ಮೊಬೈಲ್‍ಗಳನ್ನು ವಶಪಡಿಸಿಕೊಂಡು ಮೂಲ ಮಾಲೀಕರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.

ಡಿವೈಎಸ್‍ಪಿ ಮಹಾಂತೇಶ ಸಜ್ಜನ, ಪ್ರಭುಗೌಡ ಕಿರೇದಹಳ್ಳಿ, ಮುರ್ತುಜಾ ಖಾದ್ರಿ, ಸಿಪಿಐ, ಪಿಎಸ್‍ಐ ಹಾಗೂ ಪೊಲೀಸ್ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.