
ಗದಗ: ‘ಗ್ರಾಮೀಣ ಪ್ರದೇಶದ ಯುವಕರಲ್ಲಿ ಕ್ರೀಡೆಗಳ ಬಗ್ಗೆ ಆಸಕ್ತಿ ಬೆಳೆಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಂಸದರ ಕ್ರೀಡಾ ಮಹೋತ್ಸವ ಏರ್ಪಡಿಸಿದ್ದಾರೆ. ಗದಗ ಜಿಲ್ಲೆಯಲ್ಲಿ ಫೆಬ್ರುವರಿ ಮೊದಲ ವಾರದಲ್ಲಿ ನಡೆಸಲು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಂಸದರ ಕ್ರೀಡಾ ಮಹೋತ್ಸವದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘45 ವರ್ಷ ವಯೋಮಾನದ ಒಳಗಿರುವ ಯುವಕರ ಸ್ಫೂರ್ತಿಯ ಸೆಲೆಯನ್ನು ನಿರಂತರವಾಗಿ ಇಟ್ಟುಕೊಂಡು ಸದೃಢ ಭಾರತ ಕಟ್ಟುವ ಕೆಲಸವನ್ನು ಕೇಂದ್ರ ಮಾಡುತ್ತಿದೆ. ಈ ನಿಟ್ಟಿನಲ್ಲಿ ಕ್ರೀಡಾ ಮಹೋತ್ಸವ ಆಚರಿಸಲು ಪ್ರಧಾನಿ ಮೋದಿ ಏರ್ಪಡಿಸಿದ್ದಾರೆ’ ಎಂದು ಹೇಳಿದರು.
‘ಕೇಂದ್ರ ಸರ್ಕಾರ ಈಗ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಅದಕ್ಕೂ ಮೊದಲು ಹತ್ತು ವರ್ಷಗಳಿಂದ ಫಿಟ್ ಇಂಡಿಯಾ ಕಾರ್ಯಕ್ರಮ ಮಾಡಿತ್ತು. ಆಮೇಲೆ ಒಲಿಂಪಿಕ್ಸ್ ಬಂದಾಗ ಖೇಲೊ ಇಂಡಿಯಾ ಕಾರ್ಯಕ್ರಮ ರೂಪಿಸಲಾಯಿತು. ಒಲಿಂಪಿಕ್ಸ್ ಹತ್ತಿರ ಬಂದಾಗ ಜೀತೊ ಇಂಡಿಯಾ ಮಾಡಿದ್ದರಿಂದ ಭಾರತ ಹೆಚ್ಚು ಪದಕಗಳನ್ನು ಗೆಲ್ಲಲು ಸಾಧ್ಯವಾಯಿತು. ಈಗ ಗ್ರಾಮೀಣ ಪ್ರದೇಶಗಳಲ್ಲಿ ಯುವಕರನ್ನು ಆಸಕ್ತಿಯಿಂದ ಬಳಸಿಕೊಳ್ಳಲು ಸಂಸದರ ಕ್ರೀಡೋತ್ಸವ ಕಾರ್ಯಕ್ರಮ ರೂಪಿಸಿದ್ದಾರೆ’ ಎಂದರು.
‘ಸಂಸದರು ಕ್ರೀಡೋತ್ಸವದಲ್ಲಿ ಯಾವೆಲ್ಲಾ ಕ್ರೀಡೆಗಳನ್ನು ಆಡಿಸಬೇಕು, ಹೇಗೆ ಸಂಘಟಿಸಬೇಕು, ಎಷ್ಟು ಸಮಯದಲ್ಲಿ ಮಾಡಬೇಕು ಎಂಬ ಮಾರ್ಗಸೂಚಿ ನೀಡಲಾಗಿದೆ. ಈ ಕ್ರೀಡೆ ಹೋಬಳಿಯಿಂದ ತಾಲ್ಲೂಕು ಮಟ್ಟ, ಅಲ್ಲಿಂದ ಜಿಲ್ಲಾ ಮಟ್ಟಕ್ಕೆ ಬರುತ್ತದೆ. ಇದಕ್ಕೆ ಶಿಕ್ಷಣ ಹಾಗೂ ಆರೋಗ್ಯ ಇಲಾಖೆಯ ಸಹಕಾರ ಬೇಕು. ಪ್ರಾಯೋಜಕತ್ವ ಪಡೆದು ಕೆಲವು ಪ್ರಶಸ್ತಿಗಳನ್ನು ನೀಡಲಾಗುವುದು. ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ ಸಹಯೋಗ ಮುಖ್ಯವಾಗಿದೆ. ಜ.6ರಿಂದಲೇ ನೋಂದಣಿ ಕಾರ್ಯ ಆರಂಭಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕರಾದ ಸಿ.ಸಿ. ಪಾಟೀಲ, ಡಾ.ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಜ.6ರಿಂದಲೇ ನೋಂದಣಿ ಕಾರ್ಯ ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ ಸಹಯೋಗ ಕ್ರೀಡೆ ಮೂಲಕ ಸದೃಢ ಭಾರತ ನಿರ್ಮಾಣ
ಸಿದ್ಧತೆಗೆ ಬೊಮ್ಮಾಯಿ ಸೂಚನೆ ಗುಂಪು ಆಟಗಳಲ್ಲಿ ಕೊಕ್ಕೊ ವಾಲಿಬಾಲ್ ಕಬಡ್ಡಿ ಅಥ್ಲೆಟಿಕ್ಸ್‌ನಲ್ಲಿ 100 ಮೀಟರ್ 4x100 ಮೀಟರ್ ರಿಲೇ ಹಗ್ಗ ಜಗ್ಗಾಟ ಸೇರಿದಂತೆ ಕ್ರೀಡೆಗಳನ್ನು ಆಡಿಸಲು ಸಿದ್ದತೆ ಮಾಡಿಕೊಳ್ಳಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು. ‘ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿರುವ ಒಳ್ಳೆಯ ತಂಡಗಳನ್ನು ಕ್ರೀಡೆಗೆ ಆಹ್ವಾನಿಸಬೇಕು. ಯುವತಿಯರ ತಂಡಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು. ಎಲ್ಲ ತಂಡಗಳಿಗೂ ಟೀ–ಶರ್ಟ್ ನೀಡಬೇಕು. ವಿಜೇತರಾದ ತಂಡಗಳಿಗೆ ಬಹುಮಾನ ನೀಡುವ ವ್ಯವಸ್ಥೆ ಮಾಡಬೇಕು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.