
ಗದಗ: ‘ಸಂಸಾರ ಸಮ ಎಂಬುದೂ ಸುಳ್ಳು; ವಿಷಮ ಎಂಬುದೂ ಸುಳ್ಳು. ಸಾಮರಸ್ಯವೇ ಸುಖ ಸಂಸಾರದ ಸೂತ್ರ. ಇದು ಸ್ಥಿರವೂ ಅಲ್ಲ, ನೀರಿನ ಮೇಲಿನ ಗುಳ್ಳೆ ಇದ್ದಂತೆ’ ಎಂದು ಅಭಿನವ ಶಿವಾನಂದ ಸ್ವಾಮೀಜಿ ಹೇಳಿದರು.
ನಗರದ ಶಿವಾನಂದ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಧರ್ಮ ಪರಿಷತ್ತಿನ ಮೊದಲನೇ ದಿನದ ಸಾನ್ನಿಧ್ಯ ವಹಿಸಿದ್ದ ಅವರು, ‘ವಿಷಮ ಸಂಸಾರವಿದನು ಕನಸೆಂದರಿ’ ವಿಷಯ ಕುರಿತು ಮಾತನಾಡಿದರು.
ಹರಳಕಟ್ಟಿ ಶಿವಾನಂದ ಬ್ರಹ್ಮವಿದ್ಯಾಶ್ರಮದ ನಿಜಗುಣ ಸ್ವಾಮೀಜಿ ಮಾತನಾಡಿ, ‘ಸಂಸಾರದಲ್ಲಿ ಅಂತಃಕರಣದ ಶುದ್ಧಿ ಮುಖ್ಯ’ ಎಂದು ಹೇಳಿದರು.
ಕಾಡರಕೊಪ್ಪದ ಪೂರ್ಣಾನಂದ ಆಶ್ರಮದ ದಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ‘ನಾಮ, ರೂಪ, ಗುಣ ಎಂಬ ಯಥಾರ್ಥ ಸ್ವರೂಪ ಮರೆತು, ನಾನು ಎಂಬ ಭಾವನೆ ಮಾಡಿಕೊಳ್ಳುವುದಕ್ಕೆ ಮುಖ್ಯ ಕಾರಣ ನಮ್ಮನ್ನು ನಾವು ಮರೆತಿರುವುದು. ನಿನ್ನನ್ನು ನೀನು ತಿಳಿದುಕೊಳ್ಳುವುದು ಸುಖ’ ಎಂದರು.
ಅಣ್ಣಿಗೇರಿ ರುದ್ರಮುನೀಶ್ವರ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ‘ಸಂಸಾರವೇ ಪರಮ ಸುಖ ಅಲ್ಲ. ಅದು ಭಯ, ಶೋಕ, ಮೋಹದಿಂದ ಕೂಡಿದ್ದು, ಸಾಸಿವೆ ಕಾಳಷ್ಟು ಸುಖ ಇರುವುದು ಎಂಬುವುದರಲ್ಲಿ ಎರಡು ಮಾತಿಲ್ಲ’ ಎಂದರು.
ಶಿವಾನಂದ ಮಠದ ಶಿವಶರಣೆ ಮುಕ್ತಾತಾಯಿ ಮಾತನಾಡಿ, ‘ನಾವೆಲ್ಲರೂ ತಿಳಿದಿದ್ದು ದೇಹದ ಸೌಖ್ಯವೇ ಸುಖ ಎಂದು; ಕನಸಿನಲ್ಲಿ ತೋರಿದ ಪ್ರಪಂಚ ಮಿಥ್ಯ, ಅದು ವಿಷಮ ಎಂದು ತಿಳಿದುಕೊಳ್ಳಬೇಕು’ ಎಂದು ಹೇಳಿದರು.
ಪಂಚಕರ್ಮ ವಿಭಾಗದ ಮುಖ್ಯಸ್ಥ ಡಾ. ಜಯರಾಜ ಬಸರಿಗಿಡದ ಅವರು ನರರೋಗಳು ಹಾಗೂ ಆಯುರ್ವೇದ ಚಿಕಿತ್ಸೆ ಕುರಿತು ಉಪನ್ಯಾಸ ನೀಡಿದರು.
ಗಣಪತಿ ಗಾವಂಕರ ವೇದಘೋಷ ಮಾಡಿದರು. ಡಿ.ಜಿ.ಎಂ. ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಎನ್.ಬೆಳವಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಜನಿ ಎಲ್. ಕರಿಗಾರ ಪ್ರಾರ್ಥನೆ ಹಾಡಿದರು. ಡಾ. ಅನುಪಮಾ ಹಿರೇಮಠ, ಡಾ. ವೀಣಾ ಕೋರಿ ನಿರೂಪಣೆ ಮಾಡಿದರು. ಡಾ. ಮಮತಾ ಖಟಾವಕರ ವಂದಿಸಿದರು.
ಜಾತ್ರಾ ಸಮಿತಿಯ ಗೌರವಾಧ್ಯಕ್ಷ ಬಿ.ಬಿ.ಭಾವಿಕಟ್ಟಿ, ಅಧ್ಯಕ್ಷ ಶಿವಾನಂದ ಗುಡಸಾಲಿ, ಕಾರ್ಯದರ್ಶಿ ಪ್ರಕಾಶ ಪಲ್ಲೇದ ಹಾಗೂ ಜಾತ್ರಾ ಸಮಿತಿಯ ಪದಾಧಿಕಾರಿಗಳು, ಡಿ.ಜಿ.ಎಂ. ಆಯುರ್ವೇದ ಮಹಾವಿದ್ಯಾಲಯದ ಸಿಬ್ಬಂದಿ ವರ್ಗದವರು ಹಾಗೂ ಸ್ನಾತ್ತಕ, ಸ್ನಾತಕೋತ್ತರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.