
ಗದಗ: ಮುಂಡರಗಿ ತಾಲ್ಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ಶಿವರಾತ್ರಿ ದಿನ ದುಷ್ಕರ್ಮಿಗಳು ಈಶ್ವರ, ನಂದಿ, ಹೊನ್ನತ್ತೆಮ್ಮದೇವಿ ಮೂರ್ತಿಗಳನ್ನು ಭಗ್ನಗೊಳಿಸಿರುವುದು ದುರ್ದೈವದ ಸಂಗತಿ. ಕಾಂಗ್ರೆಸ್ ಆಡಳಿತದಲ್ಲಿ ಹಿಂದೂ ದೈವಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರುಡಗಿ ಹೇಳಿದ್ದಾರೆ.
ಶಿವರಾತ್ರಿ ಹಬ್ಬದಂದು ಹಿಂದೂಗಳು ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರೆ; ದುಷ್ಕರ್ಮಿಗಳು ಸಿಂಗಟಾಲೂರ ಗ್ರಾಮದಲ್ಲಿ ದೇವರ ಮೂತಿಗಳನ್ನ ಭಗ್ನಗೊಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳಿಗೂ ರಕ್ಷಣೆ ಇಲ್ಲ; ದೇವರ ಮೂರ್ತಿಗಳಿಗೂ ರಕ್ಷಣೆ ಇಲ್ಲದಂತಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಕಿಡಿಕಾರಿದ್ದಾರೆ.
ಸಿಂಗಟಾಲೂರು ಗ್ರಾಮದಲ್ಲಿ ಮಾತ್ರವಲ್ಲದೇ ರಾಜ್ಯದ ವಿವಿಧೆಡೆಗಳಲ್ಲಿ ಹಿಂದೂಗಳ ದೇವಸ್ಥಾನಗಳಲ್ಲಿನ ಮೂರ್ತಿಗೆ ಧಕ್ಕೆ ಮಾಡುವಂತಹ ಕೆಲಸ ನಡೆಯುತ್ತಿದೆ. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆ ಬರುತ್ತಿದ್ದು, ಸೌಹಾರ್ದ ವಾತಾವರಣ ನಿರ್ಮಾಣವಾಗಬೇಕಾದರೆ ಇಂತಹ ಕೃತ್ಯಗಳನ್ನು ಎಸಗಿದವರನ್ನು ಶೀಘ್ರ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಲ್ಲವಾದರೆ, ಬಿಜೆಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.