
ಎಐ ಚಿತ್ರ
ಮುಳಗುಂದ (ಗದಗ ಜಿಲ್ಲೆ): ಇಲ್ಲಿನ ಕಲ್ಲೂರ ರಸ್ತೆಯ ಬದಿ ಇರುವ ಕೆರೆಗೆ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಶನಿವಾರ ನಡೆದಿದೆ.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಬಸವರಾಜ ಹ. ಬಡಗೇರ (15), ಪರಶುರಾಮ ಮ. ವಡ್ಡರ (15) ನೀರು ಪಾಲಾದ ವಿದ್ಯಾರ್ಥಿಗಳು. ಇವರಿಬ್ಬರೂ ಎಸ್‌ಜೆಜೆಎಂ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯಲ್ಲಿ ಒಂಬತ್ತನೆ ತರಗತಿ ಓದುತ್ತಿದ್ದರು.
ಶನಿವಾರ ಬೆಳಿಗ್ಗೆ 11.30ಕ್ಕೆ ಶಾಲೆ ಬಿಟ್ಟಿದ್ದು, ಆರು ಮಂದಿ ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ಹೋಗದೆ, ಈಜಾಡಲು ಕಲ್ಲೂರ ರಸ್ತೆಯಲ್ಲಿರುವ ಕೆರೆಯ ಕಡೆಗೆ ತೆರಳಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಮೇಲಿಂದ ನೀರಿಗೆ ಜಿಗಿದಿದ್ದು, ಆಳನೀರಲ್ಲಿ ಮುಳುಗಿದ್ದಾರೆ. ದಡದಲ್ಲಿದ್ದ ನಾಲ್ಕು ವಿದ್ಯಾರ್ಥಿಗಳು ಗಾಬರಿಗೊಂಡು, ಸ್ಥಳೀಯರಿಗೆ ವಿಷಯ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಮುಳಗುಂದ ಪೊಲೀಸ್ ಠಾಣೆ ಸಿಪಿಐ ಸಂಗಮೇಶ ಶಿವಯೋಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗ್ನಿಶಾಮಕದಳದ ಸಿಬ್ಬಂದಿ ವಿದ್ಯಾರ್ಥಿಗಳ ದೇಹ ಶೋಧ ಕಾರ್ಯ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.