ಗದಗ: ಜನಸ್ನೇಹಿ ಡಾಕ್ಟರ್, ಖ್ಯಾತ ಶಸ್ತ್ರಚಿಕಿತ್ಸಕ ಎಂದೇ ಗದಗ ಪರಿಸರದಲ್ಲಿ ಜನಪ್ರಿಯತೆ ಗಳಿಸಿರುವ ಡಾ. ಗುರುಲಿಂಗಪ್ಪ ಭರಮಪ್ಪ ಬಿಡಿನಹಾಳ ಅವರ ವೈದ್ಯಕೀಯ ಕ್ಷೇತ್ರದಲ್ಲಿನ ಗಣನೀಯ ಸೇವೆಗಾಗಿ 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಡಾ. ಜಿ.ಬಿ.ಬಿಡಿನಹಾಳ ಅವರು ಮುಂಡರಗಿ ತಾಲ್ಲೂಕಿನ ಮುಷ್ಠಿಕೊಪ್ಪ ಗ್ರಾಮದವರು. ಕೃಷಿಕರಾದ ಭರಮಪ್ಪ ಹಾಗೂ ಭರಮವ್ವ ಇವರ ತಂದೆ ತಾಯಿ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಷ್ಠಿಕೊಪ್ಪ ಹಾಗೂ ಕಲಕೇರಿ ಗ್ರಾಮದಲ್ಲಿ ಪೂರ್ಣಗೊಳಿಸಿದ್ದಾರೆ.
ಜಿ.ಬಿ.ಬಿಡಿನಹಾಳ ಅವರು 1972ರಲ್ಲಿ ಏಳನೇ ತರಗತಿಯಲ್ಲಿದ್ದಾಗ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಡೆದ ಮೆರಿಟ್ ಸ್ಕಾಲರ್‌ಶಿಪ್ ಪರೀಕ್ಷೆಯಲ್ಲಿ ಅಖಂಡ ಧಾರವಾಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮುಂಡರಗಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿ, ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಮುಗಿಸಿ ಗ್ರಾಮೀಣ ಭಾಗದಲ್ಲಿ ವೈದ್ಯರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅವರು ಗದಗ ನಗರದಲ್ಲಿ ರೇಣುಕಾ ಆಸ್ಪತ್ರೆ ನಡೆಸುತ್ತಿದ್ದಾರೆ.
ಡಾ. ಜಿ.ಬಿ.ಬಿಡಿನಹಾಳ ಅವರು ವೈದ್ಯಕೀಯ ಕ್ಷೇತ್ರದಲ್ಲಷ್ಟೇ ಅಲ್ಲದೇ ಕೃಷಿ, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಕಷ್ಟು ಬಡವರು, ಅನಾಥ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಿದ್ದಾರೆ. ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ನಡೆದ ಡಾಕ್ಟರ್ಸ್ ಒಲಿಂಪಿಕ್ಸ್‌ನಲ್ಲಿ 4 ಚಿನ್ನದ ಪದಕಗಳನ್ನು ಗೆದ್ದು, ಗದಗ ಜಿಲ್ಲೆಗೆ ಕೀರ್ತಿ ತಂದಿದ್ದರು.
ಡಾ. ಜಿ.ಬಿ.ಬಿಡಿನಹಾಳ ಅವರು ಎಂಎಸ್ ಮುಗಿಸಿದ್ದರೂ ಕೃಷಿ ಬೆಳೆಗಳು ಮತ್ತು ಪ್ರಸ್ತುತ ಮಾರುಕಟ್ಟೆ ಬೆಲೆಯ ಬಗ್ಗೆ ಅಪಾರ ಜ್ಞಾನವಿದೆ. ಆಸ್ಪತ್ರೆ ಬಿಟ್ಟರೆ ಕೃಷಿ ಭೂಮಿ ಅವರಿಗೆ ಹೆಚ್ಚು ಆಪ್ತವಾಗಿದೆ. ಜಿಲ್ಲೆಯ ಅತ್ಯುತ್ತಮ ರೈತರೆಂಬ ಖ್ಯಾತಿಯನ್ನು ಗಳಿಸಿದ್ದಾರೆ. ಅವರು ಎಪಿಎಂಸಿ ಮಾರುಕಟ್ಟೆಯಲ್ಲಿನ ಎಲ್ಲಾ ಬೆಳೆಗಳ ಬೆಲೆಯನ್ನು ತಿಳಿಸುತ್ತಾರೆ ಮತ್ತು ಉತ್ತಮ ಬೆಲೆ ಸಿಗುವ ಸ್ಥಳಗಳ ಬಗ್ಗೆ ರೈತರಿಗೆ ಮಾಹಿತಿ ಕೂಡ ನೀಡುತ್ತಿದ್ದಾರೆ.
‘ವೈದ್ಯಕೀಯ ಕ್ಷೇತ್ರದಲ್ಲಿನ ನನ್ನ ಗ್ರಾಮೀಣ ಸೇವೆ ಗುರುತಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ. ತುಂಬ ಖುಷಿಯಾಗಿದೆ. ಈ ಪ್ರಶಸ್ತಿ ನನ್ನ ಜವಾಬ್ದಾರಿಯನ್ನೂ ಹೆಚ್ಚಿಸಿದೆ’ ಎಂದು ಡಾ. ಜಿ.ಬಿ.ಬಿಡಿನಹಾಳ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.