ADVERTISEMENT

ಪುಲಿಗೆರೆ ಉತ್ಸವ: ಕಲಾರಸಿಕರ ಮನಗೆದ್ದ ಸಿತಾರ್ ವಾದನ

ಪುಲಿಗೆರೆ ಉತ್ಸವ: ಸಿತಾರದಲ್ಲಿ ಹೊಮ್ಮಿದ ವೈಷ್ಣವ ಜನೋತ್ ಭಜನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2025, 4:23 IST
Last Updated 23 ಫೆಬ್ರುವರಿ 2025, 4:23 IST
ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದಲ್ಲಿ ನಡೆದಿರುವ ಪುಲಿಗೆರೆ ಉತ್ಸವದ ಎರಡನೇ ದಿನ ಶನಿವಾರ ಬೆಳಗಿನ ಉದಯರಾಗ ಒಂದನೇ ಕಾರ್ಯಕ್ರಮದಲ್ಲಿ ರಾಜೀವ ಈಶ್ವರ ಹಿರೇಮಠ ಅವರು ಸಿತಾರ್ ವಾದನ ನುಡಿಸಿದರು
ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದಲ್ಲಿ ನಡೆದಿರುವ ಪುಲಿಗೆರೆ ಉತ್ಸವದ ಎರಡನೇ ದಿನ ಶನಿವಾರ ಬೆಳಗಿನ ಉದಯರಾಗ ಒಂದನೇ ಕಾರ್ಯಕ್ರಮದಲ್ಲಿ ರಾಜೀವ ಈಶ್ವರ ಹಿರೇಮಠ ಅವರು ಸಿತಾರ್ ವಾದನ ನುಡಿಸಿದರು   

ಲಕ್ಷ್ಮೇಶ್ವರ: ಇಲ್ಲಿನ ಸೋಮೇಶ್ವರ ದೇವಸ್ಥಾನದಲ್ಲಿ ಇನ್ಫೋಸಿಸ್ ಆಶ್ರಯದಲ್ಲಿ ಬೆಂಗಳೂರಿನ ವಿದ್ಯಾಭವನದ ವತಿಯಿಂದ ನಡೆದಿರುವ ಪುಲಿಗೆರೆ ಉತ್ಸವದ ಎರಡನೇ ದಿನವಾದ ಶನಿವಾರ ಬೆಳಗಿನ ಉದಯರಾಗ ಒಂದನೇ ಕಾರ್ಯಕ್ರಮದಲ್ಲಿ ಗದಗ ನಗರದ ಪಂ.ಪುಟ್ಟರಾಜ ಗವಾಯಿಗಳ ಶಿಷ್ಯ ರಾಜೀವ ಈಶ್ವರ ಹಿರೇಮಠ ನುಡಿಸಿದ ಸಿತಾರ್ ವಾದನ ಗಮನ ಸೆಳೆಯಿತು.

ಮುಂಜಾವಿನ ಉದಯ ರವಿಯ ಹೊಂಗಿರಣಗಳು ಭುವಿಗೆ ಚಾಚುತ್ತಿದ್ದಂತೆ ಸಿತಾರ್ ವಾದನದ ಒಂದೊಂದೇ ತಂತಿಗಳಲ್ಲಿ ಸಂಗೀತದ ಸ್ವರಗಳನ್ನು ಮೀಟುತ್ತ ಹಿರೇಮಠರು ಕೇಳುಗರ ಕರ್ಣಗಳಿಗೆ ಮುದ ನೀಡಿದರು. ರಾಗ ಭೈರಾಗಿ ಭೈರವ್ ದೂನ್‍ನಲ್ಲಿ ಸಿತಾರನ ತಂತಿಗಳನ್ನು ಮೀಟಲು ಶುರು ಮಾಡಿದ ಕಲಾವಿದ ಹಿರೇಮಠರು ಸೊಗಸಾಗಿ ಸಿತಾರ್ ನುಡಿಸಿ ಪ್ರೇಕ್ಷಕರಿಂದ ಸೈ ಎನ್ನಿಸಿಕೊಂಡರು. ವೈಷ್ಣವ ಜನೋತ್ ಭಜನೆಯನ್ನು ಸಿತಾರ್‌ನಲ್ಲಿ ಮಧುರವಾಗಿ ನುಡಿಸಿ ಎಲ್ಲರ ಮನ ಗೆದ್ದರು. ಇವರಿಗೆ ತಬಲಾ ಸಾಥ್ ನೀಡಿದ ಸದಾನಂದ ತವಡೆ ಅವರ ಕೈ ಚಳಕಕ್ಕೆ ಕಲಾರಸಿಕರು ತಲೆದೂಗಿದರು.

ಎರಡನೇ ಕಾರ್ಯಕ್ರಮದಲ್ಲಿ ಪಂ.ಪುಟ್ಟರಾಜ ಗವಾಯಿಗಳ ಶಿಷ್ಯ ಶಿವಬಸಯ್ಯ ಎಸ್. ಗಡ್ಡದಮಠ ಅವರು ಸಾದರ ಪಡಿಸಿದ ಹಿಂದೂಸ್ಥಾನಿ ಗಾಯನ ಮೋಹಕವಾಗಿತ್ತು. ರಾಗ ಭೈರವದಲ್ಲಿ ಗಾಯನ ಆರಂಭಿಸಿದ ಅವರು ತಮ್ಮ ಕಂಚಿನ ಕಂಠ ಸಿರಿಯಲ್ಲಿ ಸ್ವರಗಳನ್ನು ಹಾಡುತ್ತಿದ್ದ ಮೋಡಿಗೆ ಸಂಗೀತ ಪ್ರಿಯರು ಮುದಗೊಂಡರು. ಅದೇ ರಾಗದಲ್ಲಿ ‘ಬೋಲೋ ಶಿವಾ ಶಿವಾ’ ಭಜನೆ ಸೊಗಸಾಗಿ ಮೂಡಿ ಬಂದಿತು.

ADVERTISEMENT

ನಂತರ ‘ಬೆಲ್ಲದಾ ನೀರೆರೆದಡರೇನು ಬೇವು ತಾ ಸಿಹಿಯಪ್ಪುದೇ’ ವಚನವನ್ನು ಸುಮಧುರವಾಗಿ ಹಾಡಿದರಲ್ಲದೇ, ಶಿಶುನಾಳ ಶರೀಫರ ‘ಮರುಳೇ ನೀ ಮರೆತಿರ ಬೇಡಾ.. ಮಾಡೋ ಶ್ರೀಶಿವ ಭಜನಾ’ ಹಾಡಿಗೆ ಕಲಾರಸಿಕರು ಸಂತಸಗೊಂಡರು. ಇವರಿಗೆ ತಬಲಾ ಸಾಥ್ ನೀಡಿದ ಹಿರಿಯ ಕಲಾವಿದ ಶರಣಕುಮಾರ ಗುತ್ತರಗಿ ಅವರ ಕಲೆಗೆ ಎಲ್ಲರೂ ಮನಸೋತರು. ಅಂತೆಯೇ ಹರ್ಷತ್‍ಕುಮಾರ ಅವರ ಹಾರ್ಮೋನಿಯಂ ಸಾಥ್ ಗಾಯನಕ್ಕೆ ರಂಗು ನೀಡಿತ್ತು.

ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದಲ್ಲಿ ನಡೆದಿರುವ ಪುಲಿಗೆರೆ ಉತ್ಸವದ ಎರಡನೇ ದಿನ ಶನಿವಾರ ಬೆಳಗಿನ ಉದಯರಾಗ ಎರಡನೇ ಕಾರ್ಯಕ್ರಮದಲ್ಲಿ ಶಿವಬಸಯ್ಯ ಎಸ್. ಗಡ್ಡದಮಠ ಹಿಂದೂಸ್ತಾನಿ ಗಾಯನ ಪ್ರಸ್ತುತಪಡಿಸಿದರು
ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದಲ್ಲಿ ನಡೆದಿರುವ ಪುಲಿಗೆರೆ ಉತ್ಸವದ ಒಂದನೇ ದಿನವಾದ ಶನಿವಾರ ಸಂಜೆ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಭಾಗ್ಯಶ್ರೀ ಗಾಳೆಮ್ಮ ಅವರ ತಂಡದ ಕಲಾವಿದರು ಜಾನಪದ ಹಾಡಿಗೆ ಹೆಜ್ಜೆ ಹಾಕಿದರು

ರಂಜಿಸಿದ ಜಾನಪದ ನೃತ್ಯ

ಪುಲಿಗೆರೆ ಉತ್ಸವದ ಒಂದನೇ ದಿನದ ಕೊನೆಯ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಭಾಗ್ಯಶ್ರೀ ಗಾಳೆಮ್ಮ ಅವರ ತಂಡದ ಕಲಾವಿದರು ನಡೆಸಿಕೊಟ್ಟ ಜಾನಪದ ನೃತ್ಯ ಅದ್ಭುತವಾಗಿತ್ತು. ಉತ್ತರ ಕರ್ನಾಟಕದ ಜಾನಪದ ಹಾಡುಗಳಿಗೆ ಕಲಾವಿದರು ಹೆಜ್ಜೆ ಹಾಕಿ ಕುಣಿಯುತ್ತಿದ್ದಂತೆ ಜನರು ಚಪ್ಪಾಳೆ ತಟ್ಟಿ ಖುಷಿ ವ್ಯಕ್ತಪಡಿಸಿದರು. ‘ಭಾಗ್ಯದಾ ಬಳೆಗಾರ ಹೋಗಿ ನನ್ನ ತವರಿಗೆ ಏನ್ ಕೊಡ ಏನ್ ಕೊಡಾವಾ ಹುಬ್ಬಳ್ಳಿ ಮಠ ಏನ್ ಚಂದುಳ್ಳ ಕೊಡವಾ ಮತ್ತಿತರ ಜಾನಪದ ಹಾಡುಗಳಿಗೆ ಕಲಾವಿದರು ಮಾಡಿದ ನೃತ್ಯಕ್ಕೆ ಕಲಾರಸಿಕರು ಮುದಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.