ಗದಗ: ನಗರದ ವೀರನಾರಾಯಣ ದೇವಸ್ಥಾನ ಆವರಣದಲ್ಲಿರುವ ಬೃಂದಾವನ ಸನ್ನಿಧಾನದಲ್ಲಿ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಭಕ್ತಿಯಿಂದ ನೆರವೇರಿತು.
ಬೆಳಿಗ್ಗೆ 7ಕ್ಕೆ ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಅಲಂಕಾರ ಸೇವೆಗಳು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ರಾಯರ ಉತ್ತರಾಧನೆ ಅಂಗವಾಗಿ ಮಂಗಳವಾರ ಗುರು ರಾಘವೇಂದ್ರ ಉತ್ಸವ ಮಂಡಳ ವತಿಯಿಂದ ಮಹಾರಥೋತ್ಸವ ನಡೆಯಿತು.
ವೀರನಾರಾಯಣ ದೇವಸ್ಥಾನ ಆವರಣದಿಂದ ಆರಂಭವಾದ ರಥೋತ್ಸವವು, ಸರಾಫ್ ಬಜಾರ್‌ನಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ನಡೆಯಿತು. ರಥವನ್ನು ಹೂವು, ಹಣ್ಣು, ಬಣ್ಣದ ಬಟ್ಟೆಯೊಂದಿಗೆ ಸಿಂಗರಿಸಲಾಗಿತ್ತು. ನೂರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಮಧ್ಯಾಹ್ನ ನೈವೇದ್ಯ, ಅಷ್ಟೋದಕ ಹಾಗೂ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.
ರಾತ್ರಿ 8.30ಕ್ಕೆ ಅಷ್ಟಾವಧಾನ ಸೇವೆ, ತೊಟ್ಟಿಲು ಸೇವೆ ಹಾಗೂ ಮಹಾ ಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಸ್ವಾಮಿಗಳ ವೃಂದಾವನವನ್ನು ಹೂವು, ಹಣ್ಣು ಹಾಗೂ ಬೆಳ್ಳಿ ಕವಚಗಳಿಂದ ಅಲಂಕರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.