ADVERTISEMENT

ಗಜೇಂದ್ರಗಡ | ಕಡಲೆಗೆ ಕೀಟಬಾಧೆ: ಇಳುವರಿ ಕುಸಿತ ಭೀತಿ

ಶ್ರೀಶೈಲ ಎಂ.ಕುಂಬಾರ
Published 10 ಡಿಸೆಂಬರ್ 2025, 5:04 IST
Last Updated 10 ಡಿಸೆಂಬರ್ 2025, 5:04 IST
ಗಜೇಂದ್ರಗಡ ಸಮೀಪದ ಜಮೀನೊಂದರಲ್ಲಿ ಕಡಲೆ ಬೆಳೆಯಲ್ಲಿನ ಕೀಟಗಳ ನಿಯಂತ್ರಣಕ್ಕೆ ರೈತರು ಕೀಟನಾಶಕ ಸಿಂಪಡಿಸುತ್ತಿರುವುದು
ಗಜೇಂದ್ರಗಡ ಸಮೀಪದ ಜಮೀನೊಂದರಲ್ಲಿ ಕಡಲೆ ಬೆಳೆಯಲ್ಲಿನ ಕೀಟಗಳ ನಿಯಂತ್ರಣಕ್ಕೆ ರೈತರು ಕೀಟನಾಶಕ ಸಿಂಪಡಿಸುತ್ತಿರುವುದು   

ಗಜೇಂದ್ರಗಡ: ತಾಲ್ಲೂಕಿನಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಹಿಂಗಾರಿ ಬಿತ್ತನೆ ವಿಳಂಬವಾಗಿದ್ದು, ಬಿತ್ತನೆಯಾದ ಕಡಲೆ, ಬಿಳಿಜೋಳ, ಕುಸುಬಿ, ಗೋಧಿ ಬೆಳೆಗಳ ಪೈಕಿ ಕಡಲೆ ಬೆಳೆಗೆ ಕೀಟಬಾಧೆ ಹೆಚ್ಚಾಗಿದೆ. ಹೀಗಾಗಿ ರೈತರು ಕೀಟಗಳಿಂದ ಬೆಳೆ ರಕ್ಷಿಸಿಕೊಳ್ಳಲು ಕೀಟನಾಶಕ ಸಿಂಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ತಾಲ್ಲೂಕಿನಲ್ಲಿ ನರೇಗಲ್‌ ಹೊಬಳಿ ವ್ಯಾಪ್ತಿಯಲ್ಲಿ ಅಂದಾಜು 22 ಸಾವಿರ ಹೆಕ್ಟೇರ್‌ ಕಡಲೆ, 4 ಸಾವಿರ ಹೆಕ್ಟೇರ್‌ ಬಿಳಜೋಳ, 1500 ಹೆಕ್ಟೇರ್‌ ಕುಸುಬಿ ಬಿತ್ತನೆಯಾಗಿದೆ.

ತಾಲ್ಲೂಕಿನ ರಾಜೂರ, ದಿಂಡೂರ, ಸೂಡಿ, ಕೊಡಗಾನೂರ, ವೀರಾಪುರ, ಚಿಲ್‌ಝರಿ, ಇಟಗಿ, ಬೇವಿನಕಟ್ಟಿ, ಗುಳಗುಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಡಲೆ ಬೆಳೆ ಹೂವು ಹಾಗೂ ಕಾಯಿ ಕಟ್ಟುತ್ತಿದ್ದು, ಕೀಟಗಳು ಎಲೆ ಜೊತೆಗೆ ಕಾಯಿ ತಿನ್ನುತ್ತಿರುವುದರಿಂದ ರೈತರು ಇಳುವರಿ ಕುಂಠಿತವಾಗುವ ಆತಂಕದಿಂದ ಕ್ರಿಮಿನಾಶಕ ಸಿಂಪಡಿಸುತ್ತಿದ್ದಾರೆ. 

ADVERTISEMENT

‘ಮುಂಗಾರಿನಲ್ಲಿ ಅಧಿಕ ಮಳೆಯಿಂದ ಹೆಸರು, ಗೋವಿನಜೋಳ ಬೆಳೆಗಳಲ್ಲಿ ನಷ್ಟ ಅನುಭವಿಸಿದ್ದೇವೆ. ಮಳೆ ಬಿಡುವು ನೀಡದ ಕಾರಣ ತಡವಾಗಿ ಕಡಲೆ, ಬಿಳಿಜೋಳ ಬಿತ್ತನೆ ಮಾಡಿದ್ದೇವೆ. ಆರಂಭದಲ್ಲಿ ಬಿಳಿಜೋಳ ಮೊಳಕೆಯೊಡೆದಾಗ ಮಿಡತೆಗಳು ತಿಂದು ಹಾಕಿದ್ದರಿಂದ ಕೆಲವರು ಜೋಳ ಹರಗಿ ಕಡಲೆ ಬಿತ್ತನೆ ಮಾಡಿದ್ದಾರೆ. ಕಡಲೆ ಫಸಲಾದರೂ ಕೈ ಹಿಡಿಯುತ್ತದೆಂಬ ಆಶಾಭಾವನೆ ಹೊಂದಿದ್ದು, ಈಗಾಗಲೇ ಒಮ್ಮೆ ಕ್ರೀಮಿನಾಶಕ ಸಿಂಪಡಿಸಿದ್ದೇವೆ. ಈಗ ಹೂ, ಕಾಯಿ ಇದ್ದು, ಈಗ ಕೀಟ ಹೆಚ್ಚಾದರೆ ಇಳುವರಿ ಕುಂಠಿತವಾಗುವ ಭೀತಿಯಿಂದ ಮತ್ತೊಮ್ಮೆ ಕ್ರೀಮಿನಾಶಕ ಸಿಂಪಡಿಸುತ್ತಿದ್ದೇವೆ’ ಎಂದು ರಾಜೂರ ಗ್ರಾಮದ ರೈತರಾದ ಶರಣಪ್ಪ ಪಾಟೀಲ, ಯಲ್ಲಪ್ಪ ಶಂಕ್ರಿ ಹೇಳಿದರು.

‘18 ಲೀ. ನೀರಿಗೆ 10 ಗ್ರಾಂ. ಇಮಾಮೆಕ್ಟಿನ್ ಬೆಂಜೋಯೇಟ್‌, 5-6 ಎಂ.ಎಲ್ ಕೊರಾಜಿನ್‌ ಮಿಶ್ರಣ ಮಾಡಿ ಕೀಟಪೀಡಿತ ಕಡಲೆ ಬೆಳೆಗೆ ಸಿಂಪಡಿಸಬೇಕು. ಅಥವಾ ಸಾವಯವ ಪದ್ಧತಿಗಳಾದ ಪಕ್ಷಿಗಳನ್ನು ಆಕರ್ಷಿಸುವುದು ಹಾಗೂ ದೆವ್ಬಾಳಿ (ಕಲ್ನಾರ್) ಗರಿಯನ್ನು ಚನ್ನಾಗಿ ಜಜ್ಜಿ ಒಂದೆರಡು ದಿನ ನೀರಿನಲ್ಲಿ ನೆನೆಸಿ ಆ ನೀರನ್ನು ಬೆಳೆಗಳಿಗೆ ಸಿಂಪಡಿಸುವುದರಿಂದಲೂ ಕೀಟಗಳ ನಿಯಂತ್ರಣ ಮಾಡಬಹುದಾಗಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ರೈತ ಸಂಪರ್ಕ ಕೇಂದ್ರದಲ್ಲಿ ಔಷಧಿಗಳು ಲಭ್ಯವಿದ್ದು ರೈತರು ಕೀಟಬಾಧೆ ಇರುವ ಬೆಳೆಗಳಿಗೆ ಸಿಂಪಡಿಸಬೇಕು.
–ಸಿ.ಕೆ.ಕಮ್ಮಾರ ಕೃಷಿ ಸಹಾಯಕ ಅಧಿಕಾರಿ ಗಜೇಂದ್ರಗಡ ಕೃಷಿ ಇಲಾಖೆ ಮಾರಾಟ ಮಳಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.