ಗದಗ: ‘ಮಹಾತ್ಮ ಗಾಂಧೀಜಿಯವರು ಅಹಿಂಸೆ ಮತ್ತು ಸತ್ಯಾಗ್ರಹದ ಅಸ್ತ್ರದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರು. ಗಾಂಧೀಜಿಯವರ ಅಹಿಂಸ್ವಾ ತತ್ವ ಜಗತ್ತಿಗೆ ಮಾದರಿಯಾಗಿದೆ’ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಮಹಾತ್ಮ ಗಾಂಧೀಜಿಯವರ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಗಾಂಧೀಜಿಯವರು ಇಂಗ್ಲೇಂಡ್‌ನಲ್ಲಿ ಕಾನೂನು ಅಧ್ಯಯನ ಮಾಡಿ ನಂತರ ದಕ್ಷಿಣ ಆಫ್ರಿಕಾದಲ್ಲಿ ವಕೀಲ ವೃತ್ತಿಯಲ್ಲಿದ್ದಾಗ ಸವರ್ಣೀಯರ ದಬ್ಬಾಳಿಕೆ ಹಾಗೂ ಅಸ್ಪಶ್ಯತೆ ಕಂಡು ಮರುಗಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕತ್ವ ವಹಿಸಿದ ಬಳಿಕ ಬಡತನ ನಿವಾರಣೆ, ಅಸ್ಪೃಶ್ಯತೆ ವಿರುದ್ದ ಹೋರಾಡಿದರು. ತಮ್ಮ ದೇಶದಲ್ಲಿಯೇ ಇರುವ ಸಾಮಾಜಿಕ ಸಮಸ್ಯೆಗಳಾದ ಅಸ್ಪೃಶ್ಯತೆ ಹಾಗೂ ಪರಕೀಯರ ದಬ್ಬಾಳಿಕೆ ವಿರುದ್ಧ ಹೋರಾಟ ನಡೆಸಿದರು. ಸತ್ಯ ಮತ್ತು ಸರಳತೆ ಇವರ ವಿಶೇಷತೆಗಳಾಗಿದ್ದವು’ ಎಂದರು.
‘ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಅವರು ದೇಶಗಳಲ್ಲಿನ ಬಹಳಷ್ಟು ಕ್ಲಿಷ್ಟಕರ ಸಮಸ್ಯೆಗಳನ್ನೂ ಸಹ ಮಾತುಕತೆಯಿಂದ ಬಗೆಹರಿಸಬಹುದಾಗಿದೆ ಎಂದು ಜಗತ್ತಿಗೆ ತಿಳಿಸಿಕೊಟ್ಟರು’ ಎಂದರು.
ಸಮೀಕ್ಷಾದಾರರಿಗೆ ಸನ್ಮಾನ: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪೂರ್ಣಗೊಳಿಸಿದ ಗದಗ ತಾಲ್ಲೂಕಿನ ಶಿಕ್ಷಕರಾದ ಮಲ್ಲಮ್ಮ ಹೂಗಾರ, ಕಾಶಿಬಾಯಿ ಮದಿ, ಎಚ್.ಡಿ. ಕುರಿ, ಪ್ರದೀಪ ಚಿತ್ತರಗಿ, ಜಯಕುಮಾರ್, ರಂಗಪ್ಪನವರ, ಹುಸೇನಬಾದಶಾಹ ಮಂಗಳೂರ ಅವರನ್ನು ಜಿಲ್ಲಾಧಿಕಾರಿಗಳು ಸನ್ಮಾನಿಸಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ದುರಗೇಶ ಕೆ.ಆರ್., ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಸವರಾಜ ಕಡೆಮನಿ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆರ್.ಎಸ್. ಬುರುಡಿ, ಸರ್ಕಾರಿ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಬಳ್ಳಾರಿ, ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಚಂದ್ರಪ್ಪ ಬಾರಂಗಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಸನಗೌಡ್ರ ಕೋಟೂರ ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು.
ಕಲಾವಿದ ವೆಂಕಟೇಶ ಅಲ್ಕೋಡ ಅವರು ಮಹಾತ್ಮ ಗಾಂಧೀಜಿಯವರ ಪ್ರಿಯ ಭಜನೆ ಗೀತೆಗಳನ್ನು ಪ್ರಸ್ತುತಪಡಿಸಿದರು. ನಾಡಗೀತೆಯೊಂದಿಗೆ ಪ್ರ‍್ರಾರಂಭವಾದ ಕಾರ್ಯಕ್ರಮದಲ್ಲಿ ಪ್ರೊ. ಬಾಹುಬಲಿ ಜೈನರ್ ಕಾರ್ಯಕ್ರಮ ನಿರ್ವಹಿಸಿದರು.
ಪ್ರಬಂಧ ಸ್ಪರ್ಧೆ ವಿಜೇತರಿಗೆ ಸನ್ಮಾನ
ಮಹಾತ್ಮ ಗಾಂಧೀಜಿಯವರ 156ನೇ ಜಯಂತಿ ಪ್ರಯುಕ್ತ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರೌಢಶಾಲಾ ವಿಭಾಗ: ಸೌಮ್ಯ ದೇವೇಂದ್ರಪ್ಪ ಮೆಣಸಿನಕಾಯಿ- ಪ್ರಥಮ ಸಮೀಕ್ಷಾ ಬ. ಮೇಗಳಮನಿ- ದ್ವಿತೀಯ ಸೌಮ್ಯ ಜಗ್ಗಲ- ತೃತೀಯ. ಪದವಿಪೂರ್ವ ವಿಭಾಗ: ಐಶ್ವರ್ಯ ಎಂ. ತಮ್ಮಣ್ಣವರ ಪ್ರಥಮ ಸಾಹಿಲ್- ದ್ವಿತೀಯ ಅಕ್ಷತಾ ಮಲ್ಲಪ್ಪ ಹೂಗಾರ– ತೃತೀಯ. ಪದವಿ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಸಹನಾ ಹೆಬಸೂರ- ಪ್ರಥಮ ಕೃಷ್ಣಾ ದೂರಪ್ಪನವರ- ದ್ವಿತೀಯ ಕೀರ್ತಿ ಸಿ. ಮಾನ್ವಿ– ತೃತೀಯ ಸುಮಿತ್ರಾ ನಾ. ಗವಾರಿ– ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.