ADVERTISEMENT

ಶಾಲೆ ಸ್ವಚ್ಛಗೊಳಿಸುವವರಿಗೆ ನಿತ್ಯ ‘ಗಾಂಧಿ ಪುರಸ್ಕಾರ’

ಎಸ್.ಎಂ.ಭೂಮರಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 8 ವರ್ಷಗಳಿಂದ ಜಾರಿ

ಕಾಶಿನಾಥ ಬಿಳಿಮಗ್ಗದ
Published 1 ಅಕ್ಟೋಬರ್ 2019, 19:30 IST
Last Updated 1 ಅಕ್ಟೋಬರ್ 2019, 19:30 IST
ಮುಂಡರಗಿಯ ಎಸ್.ಎಂ.ಭೂಮರಡ್ಡಿ ಸರ್ಕಾರಿ ಶಾಲೆಯಲ್ಲಿ ಶಾಲಾ ಆವರಣವನ್ನು ಸ್ವಚ್ಛಗೊಳಿಸಿದ ವಿದ್ಯಾರ್ಥಿ ತಂಡಕ್ಕೆ  ಗಾಂಧೀಜಿ ಭಾವಚಿತ್ರ ಹಸ್ತಾಂತರಿಸುತ್ತಿರುವ ಶಿಕ್ಷಕರು
ಮುಂಡರಗಿಯ ಎಸ್.ಎಂ.ಭೂಮರಡ್ಡಿ ಸರ್ಕಾರಿ ಶಾಲೆಯಲ್ಲಿ ಶಾಲಾ ಆವರಣವನ್ನು ಸ್ವಚ್ಛಗೊಳಿಸಿದ ವಿದ್ಯಾರ್ಥಿ ತಂಡಕ್ಕೆ  ಗಾಂಧೀಜಿ ಭಾವಚಿತ್ರ ಹಸ್ತಾಂತರಿಸುತ್ತಿರುವ ಶಿಕ್ಷಕರು   

ಮುಂಡರಗಿ: ಪಟ್ಟಣದ ಎಸ್.ಎಂ.ಭೂಮರಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ 8 ವರ್ಷಗಳಿಂದ ನಿರಂತರ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಅಷ್ಟೇ ಅಲ್ಲ, ಪ್ರತಿ ದಿನ ಶಾಲಾ ಆವರಣ ಸ್ವಚ್ಛಗೊಳಿಸುವ ವಿದ್ಯಾರ್ಥಿಗಳ ತಂಡಕ್ಕೆ ‘ಗಾಂಧಿ ಪುರಸ್ಕಾರ’ವೂ ಲಭಿಸುತ್ತಿದೆ.

ಗಾಂಧೀಜಿ ಅವರಿಂದ ಪ್ರೇರಣೆಗೊಂಡು, ವಿದ್ಯಾರ್ಥಿಗಳು ಸ್ಚಚ್ಛತಾ ಕಾರ್ಯಗಳಲ್ಲಿ ಭಾಗಿಯಾಗಲಿ ಎನ್ನುವ ಉದ್ದೇಶದಿಂದ ಶಾಲೆಯಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ‘ಗಾಂಧಿ ಪುರಸ್ಕಾರ’ವಾಗಿ ಗಾಂಧೀಜಿ ಅವರ ಭಾವಚಿತ್ರವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

ಪ್ರತಿ ಸೋಮವಾರ 5ನೇ ತರಗತಿಯ ಗಂಡು ಮಕ್ಕಳು ಹಾಗೂ ಪ್ರತಿ ಮಂಗಳವಾರ 5ನೇ ತರಗತಿಯ ಹೆಣ್ಣುಮಕ್ಕಳು ಗಿಡಗಳಿಗೆ ನೀರು ಹಾಕಿ ಶಾಲಾ ಆವರಣವನ್ನು ಸ್ವಚ್ಛಗೊಳಿಸಬೇಕು. ಬುಧವಾರ 6ನೇ ತರಗತಿಯ ಗಂಡುಮಕ್ಕಳು ಹಾಗೂ ಗುರುವಾರ ಹೆಣ್ಣು ಮಕ್ಕಳು ಮತ್ತು ಪ್ರತಿ ಶುಕ್ರವಾರ 7ನೇ ತರಗತಿಯ ಗಂಡು ಮಕ್ಕಳು ಮತ್ತು ಶನಿವಾರ 7ನೇ ತರಗತಿಯ ಹೆಣ್ಣುಮಕ್ಕಳು ಶಾಲಾ ಆವರಣವನ್ನು ಸ್ವಚ್ಛಗೊಳಿಸಬೇಕು.

ADVERTISEMENT

ಯಾವ ತರಗತಿಯ ವಿದ್ಯಾರ್ಥಿಗಳು ಶಾಲಾ ಆವರಣವನ್ನು ಉತ್ತಮವಾಗಿ ಸ್ವಚ್ಛಗೊಳಿಸುತ್ತಾರೊ, ಆ ತರಗತಿಯ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಶಾಲಾ ಪ್ರಾರ್ಥನಾ ಸಮಯದಲ್ಲಿ ಮುಖ್ಯ ಶಿಕ್ಷಕ ಗಾಂಧೀಜಿ ಭಾವಚಿತ್ರ ನೀಡಿ ಅಭಿನಂದಿಸುತ್ತಾರೆ. ಈ ಭಾವಚಿತ್ರವನ್ನು ಅವರು ತಮ್ಮ ತರಗತಿ ಕೋಣೆಗೆ ತೆಗೆದುಕೊಂಡು ಹೋಗುತ್ತಾರೆ. ಗಾಂಧೀಜಿ ಪೋಟೊ ಪಡೆದುಕೊಳ್ಳುವುದು ಮಕ್ಕಳಿಗೆ ಹೆಮ್ಮೆ ಹಾಗೂ ಪ್ರತಿಷ್ಟೆಯ ವಿಷಯ ಆಗಿದೆ. ಹೀಗಾಗಿ ಎಲ್ಲರೂ ಆಸಕ್ತಿಯಿಂದ ಸ್ವಚ್ಛತೆಯಲ್ಲಿ ಭಾಗವಹಿಸುತ್ತಾರೆ.

‘ಪ್ರತಿನಿತ್ಯ ಶಾಲಾ ಆವರಣವನ್ನು ಸ್ವಚ್ಛಗೊಳಿಸುವ ತರಗತಿಯ ಮಕ್ಕಳಿಗೆ ಗಾಂಧೀಜಿ ಭಾವಚಿತ್ರ ನೀಡುತ್ತೇವೆ. ಇದು ಮಕ್ಕಳಲ್ಲಿ ಸ್ಚಚ್ಛತೆಯ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದೆ, ಜತೆಗೆ ಗಾಂಧಿ ತತ್ವಗಳೂ ಅವರ ಮನಸ್ಸಿನಲ್ಲಿ ಅಚ್ಚೊತ್ತುತ್ತವೆ’ ಎಂದು ಮುಖ್ಯ ಶಿಕ್ಷಕ ಎಂ.ಬಿ.ಕನ್ಯಾಳ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.