ADVERTISEMENT

ಕೃತಕ ಹೊಂಡದಲ್ಲಿ ಗಣೇಶನಿಗೆ ವಿದಾಯ! ಜಿಲ್ಲಾಡಳಿತ, ನಗರಸಭೆಯಿಂದ ಪರಿಸರಸ್ನೇಹಿ ಕ್ರಮ

ನೀರಿನಲ್ಲಿ ಕರಗಿದ ಮಣ್ಣಿನ ಮೂರ್ತಿ

ಹುಚ್ಚೇಶ್ವರ ಅಣ್ಣಿಗೇರಿ
Published 17 ಸೆಪ್ಟೆಂಬರ್ 2018, 12:44 IST
Last Updated 17 ಸೆಪ್ಟೆಂಬರ್ 2018, 12:44 IST
ಗದುಗಿನ ಟ್ಯಾಗೋರ್ ರಸ್ತೆ ಸಮೀಪದಲ್ಲಿ ಗಣೇಶ ವಿಸರ್ಜನೆಗೆ ನಿರ್ಮಿಸಿರುವ ಕೃತಕ ಹೊಂಡ
ಗದುಗಿನ ಟ್ಯಾಗೋರ್ ರಸ್ತೆ ಸಮೀಪದಲ್ಲಿ ಗಣೇಶ ವಿಸರ್ಜನೆಗೆ ನಿರ್ಮಿಸಿರುವ ಕೃತಕ ಹೊಂಡ   

ಗದಗ: ಪಿಒಪಿ ನಿಷೇಧಿಸಿ ಮಣ್ಣಿನ ಗಣೇಶಮೂರ್ತಿ ಬಳಕೆ ಉತ್ತೇಜಿಸುವ ಸಲುವಾಗಿ, ಮೂರ್ತಿ ತಯಾರಕರಿಗೆ ಒಂದೇ ಸೂರಿನಡಿ ಮಾರಾಟ ಮಳಿಗೆ ತೆರೆಯಲು ಅವಕಾಶ ಕಲ್ಪಿಸಿದ್ದ ಜಿಲ್ಲಾಡಳಿತ, ಈಗ ಮೂರ್ತಿ ವಿಸರ್ಜನೆಗೂ ಪರಿಸರಸ್ನೇಹಿ ಕ್ರಮ ಅನುಸರಿಸಿದೆ.

ಗದಗ ನಗರ ವ್ಯಾಪ್ತಿಯಲ್ಲಿ ಗಣೇಶ ವಿಸರ್ಜನೆಗೆ ನಗರಸಭೆಯು 20ಕ್ಕೂ ಹೆಚ್ಚು ಕೃತಕ ಹೊಂಡಗಳನ್ನು ನಿರ್ಮಿಸಿ, ಅದರಲ್ಲಿ ನೀರು ತುಂಬಿಸಿದೆ. 35 ವಾರ್ಡ್‌ಗಳ ವ್ಯಾಪ್ತಿಗೆ ಬರುವ 22 ಪುರಾತನ ಬಾವಿಗಳನ್ನು ಸ್ವಚ್ಛಗೊಳಿಸಲಾಗಿದೆ. ಈ ಬಾವಿಗಳಲ್ಲಿ ಈಗಾಗಲೇ ನೀರಿನ ಸೆಲೆಯಿದೆ. ಮೂರ್ತಿ ವಿಸರ್ಜನೆ ಮುಗಿದ ಬಳಿಕವೂ ಈ ಬಾವಿಗಳನ್ನು ಸ್ವಚ್ಛಗೊಳಿಸಿ, ಸಮರ್ಪಕ ನಿರ್ವಹಣೆಗೆ ಮುಂದಾದರೆ ಮುಂದಿನ ಬೇಸಿಗೆಯಲ್ಲಿ ನೀರಿನ ಬವಣೆಯೂ ನೀಗಲಿದೆ, ಜಲ ಮೂಲಗಳನ್ನು ಸಂರಕ್ಷಿಸಿದಂತೆಯೂ ಆಗುತ್ತದೆ.

ನಗರದ ಶಹಪೂರ ಪೇಟೆ, ಹುಡ್ಕೋ ಕಾಲೊನಿ, ಆದರ್ಶ ನಗರ, ಹಾಳಕೇರಿ ಮಠ ಹತ್ತಿರ, ನಗರಸಭೆ ಕಚೇರಿ ಸಮೀಪ, ಕೆಎಸ್‍ಎಸ್ ಕಾಲೇಜು ಹಿಂಭಾಗ, ಸಿಕ್ಕಲಗಾರ ಓಣಿ, ಕರ್ನಾಟಕ ಚಿತ್ರಮಂದಿರ ಹತ್ತಿರ, ಹಳೆ ಕೋರ್ಟ್ ಸಮೀಪದ ಬಿಸಿಎಂ ಬಡಾವಣೆ, ಖಾನತೋಟದ ಬಾವಿ, ರಾಚೋಟೇಶ್ವರ ದೇವಸ್ಥಾನದ ಮೂರು ಕಡೆಗಳಲ್ಲಿ, ಜರ್ಮನ್ ಆಸ್ಪತ್ರೆ ಸಮೀಪ ಕೃತಕ ಹೊಂಡಗಳನ್ನು ನಿರ್ಮಿಸಲಾಗಿದೆ. ವಿಸರ್ಜನೆಗೆ ವೇಳೆ ಪೂಜೆ ನೆರವೇರಿಸಲು ತಾತ್ಕಾಲಿಕ ಸಿಮೆಂಟ್ ವೇದಿಕೆಯನ್ನೂ ನಿರ್ಮಿಸಲಾಗಿದೆ. ಇದರಲ್ಲಿ ಚಿಕ್ಕ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಬಹುದು.

ADVERTISEMENT

ನೀರಿನಲ್ಲಿ ಕರಗಿದ ಗಣಪ: ಗದಗ–ಬೆಟಗೇರಿ ಅವಳಿ ನಗರದಲ್ಲಿ ಮನೆಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಿದವರು ಐದನೆಯ ದಿನ ವಿಸರ್ಜನೆ ಮಾಡುತ್ತಾರೆ. ಐದನೆಯ ದಿನವಾದ ಸೋಮವಾರ ಆಯಾ ಬಡಾವಣೆಗಳ ನಿವಾಸಿಗಳು ತಮಗೆ ಸಮೀಪದ ಪ್ರದೇಶದ ಕೃತಕ ಹೊಂಡಗಳಲ್ಲಿ ಮೂರ್ತಿ ವಿಸರ್ಜನೆ ಮಾಡಿದರು. ಸಾರ್ವಜನಿಕ ಗಣೇಶ ಮಂಡಳಿಗಳಿಂದ ಪ್ರತಿಷ್ಠಾಪಿಸಲಾದ ದೊಡ್ಡ ಗಣೇಶ ಮೂರ್ತಿಗಳನ್ನು ಪುರಾತನ ಬಾವಿಗಳಲ್ಲಿ ವಿಸರ್ಜನೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.