ಗದಗ: ಸ್ವಾತಂತ್ರ್ಯಪೂರ್ವದಲ್ಲಿ ಸ್ಥಾಪನೆಗೊಂಡ ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘದ ನೇಕಾರರು ಕೈಮಗ್ಗದಲ್ಲಿ ನೇಯುವ ಪಟ್ಟೆದಂಚು ಸೀರೆಗೆ ಭೌಗೋಳಿಕ ಮಾನ್ಯತೆ (ಜಿಐ ಟ್ಯಾಗ್) ಲಭಿಸಿದೆ.
ಸೀರೆಯ ಅಂಚಿನಲ್ಲಿ ಪಟ್ಟೆ ವಿನ್ಯಾಸ ಇರುವುದಕ್ಕೆ ಪಟ್ಟೆದಂಚು ಸೀರೆ ಎಂಬ ಹೆಸರು ಬಂದಿದೆ. ಪರಿಶುದ್ಧ ಹತ್ತಿ, ಪರಿಸರ ಸ್ನೇಹಿ ಬಣ್ಣ ಮತ್ತು ನೈಸರ್ಗಿಕ ಅಂಟು ಬಳಸಿ ಸೀರೆ ತಯಾರಿಸಲಾಗುತ್ತದೆ. ಅವು 4 ಬಣ್ಣ ಹಾಗೂ 35 ವಿನ್ಯಾಸಗಳಲ್ಲಿ ಲಭ್ಯವಿದ್ದು, ಎಲ್ಲ ಋತುಗಳಿಗೂ ಹೊಂದುತ್ತವೆ.
ಸಂಘ ಸ್ಥಾಪನೆಯಾಗಿ 8 ದಶಕಗಳು ಕಳೆದಿವೆ. ಪಟ್ಟೆದಂಚು ಸೀರೆಗೆ 200 ವರ್ಷಗಳ ಇತಿಹಾಸವಿದೆ.
ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘದಲ್ಲಿ ಸದ್ಯ 1,126 ಮಂದಿ ಸದಸ್ಯರಿದ್ದಾರೆ. ನಿತ್ಯ 200 ಮಂದಿ ಕೆಲಸ ಮಾಡುತ್ತಾರೆ. ಒಬ್ಬರು ಎಂಟು ಗಂಟೆ ಕೆಲಸ ಮಾಡಿದರೆ ಎರಡು ಪಟ್ಟೆದಂಚು ಸೀರೆಗಳು ಸಿದ್ಧವಾಗುತ್ತವೆ. ನೇಯ್ಗೆ ಮಾಡುವವರಲ್ಲಿ ಶೇ 25 ಪುರುಷರು ಮತ್ತು ಶೇ 75 ಮಹಿಳೆಯರು ಇದ್ದಾರೆ.
‘ಪಟ್ಟೆದಂಚು ಸೀರೆಗೆ ಜಿಐ ಟ್ಯಾಗ್ ಮಾನ್ಯತೆ ಪಡೆಯಲು 2019ರಿಂದ ನಡೆಸಿದ ಪ್ರಯತ್ನಕ್ಕೆ 2025ರ ಮಾರ್ಚ್‌ನಲ್ಲಿ ಫಲ ಸಿಕ್ಕಿತು. ಜಿಐ ಟ್ಯಾಗ್ ಮಾನ್ಯತೆ ಸಿಕ್ಕಿರುವುದರಿಂದ ಪಟ್ಟೆದಂಚು ಸೀರೆಯ ಮಾರುಕಟ್ಟೆ ವಿಸ್ತರಿಸುವ ನಿರೀಕ್ಷೆ ಇದೆ. ಕೆಲವೆಡೆ ವಿದ್ಯುತ್ ಮಗ್ಗಗಳಲ್ಲಿ ಪಟ್ಟೆದಂಚು ಸೀರೆಯ ಮಾದರಿಯನ್ನು ನಕಲು ಮಾಡಿ, ಕಡಿಮೆ ದರಕ್ಕೆ ಮಾರುತ್ತಿದ್ದಾರೆ. ಇದರಿಂದ ಕೈಮಗ್ಗದಲ್ಲಿ ನೇಯುವ ಪಟ್ಟೆದಂಚು ಸೀರೆಗೆ ಧಕ್ಕೆಯಾಗುತ್ತದೆ’ ಎಂದು ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರುತಿ ಕಳಕಪ್ಪ ಶಾಬಾದಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗಜೇಂದ್ರಗಡದಲ್ಲಿ ಉತ್ಪಾದನೆಯಾಗುವ ಪಟ್ಟೆದಂಚು ಸೀರೆಯ ಬೆಲೆ ₹850. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಸೇರಿ ವಿವಿಧ ರಾಜ್ಯಗಳಲ್ಲಿ ಈ ಸೀರೆಗೆ ಬೇಡಿಕೆ ಇದೆ.
ಸಹಕಾರಿ ಸಂಘ ಕಳೆದ ವರ್ಷ ₹80 ಲಕ್ಷ ವಹಿವಾಟು ನಡೆಸಿ ₹9.61 ಲಕ್ಷ ಲಾಭ ಗಳಿಸಿತ್ತು. ನೇಕಾರರಿಗೆ ಶೇ 20 ಬೋನಸ್ ಕೊಟ್ಟಿದ್ದೇವೆ. ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.ಮಾರುತಿ ಕಳಕಪ್ಪ ಶಾಬಾದಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.