ADVERTISEMENT

ನರಗುಂದ | ಪಾತಾಳಕ್ಕೆ ಕುಸಿದ ಹೆಸರು ದರ: ರೈತ ಕಂಗಾಲು

ಬಸವರಾಜ ಹಲಕುರ್ಕಿ
Published 4 ಸೆಪ್ಟೆಂಬರ್ 2025, 5:49 IST
Last Updated 4 ಸೆಪ್ಟೆಂಬರ್ 2025, 5:49 IST
ನರಗುಂದ ತಾಲ್ಲೂಕಿನಲ್ಲಿ ಹೆಸರು ಕಾಳು ಒಣಗಲು ಹಾಕಿರುವ ದೃಶ್ಯ.
ನರಗುಂದ ತಾಲ್ಲೂಕಿನಲ್ಲಿ ಹೆಸರು ಕಾಳು ಒಣಗಲು ಹಾಕಿರುವ ದೃಶ್ಯ.   

ನರಗುಂದ: ಅತಿವೃಷ್ಟಿ, ಪ್ರವಾಹದಿಂದ ಕಂಗಾಲಾಗಿರುವ ರೈತರು ಅಳಿದುಳಿದ ಹೆಸರುಬೆಳೆ ಮಾರಾಟ ಮಾಡಲಾರದ ಸ್ಥಿತಿ ತಲುಪಿದ್ದಾರೆ. ರಸ್ತೆ ಮೇಲೆ ಒಣಗಲು ಹಾಕಿದ ಹೆಸರು ಹರವುತ್ತಿದ್ದ ರೈತರು, ‘ನಮ್ಮ ನಾಲ್ಕೈದು ದಶಕದ ಅನುಭವದಲ್ಲಿ ಇಷ್ಟು ಕೆಟ್ಟ ಪರಿಸ್ಥಿತಿ ಬಂದಿದ್ದಿಲ್ಲ’ ಎಂದು ಅಲವತ್ತುಕೊಂಡರು.

ಪಾತಾಳಕ್ಕೆ ಇಳಿದ ದರ:

ಮಳೆಯಾಗುವುದಕ್ಕೂ ಮುನ್ನ ಕ್ವಿಂಟಲ್ ಹೆಸರು ₹10 ಸಾವಿರಕ್ಕೆ ಮಾರಾಟವಾಗುತ್ತಿತ್ತು. ಆದರೆ, ಈಗ ಅದೇ ಗುಣಮಟ್ಟದ ಹೆಸರುಬೆಳೆಯನ್ನು ₹4 ಸಾವಿರಕ್ಕೂ ಕೇಳುತ್ತಿಲ್ಲ. ಹೆಸರಿನ ದರ ಪಾತಾಳಕ್ಕೆ ಕುಸಿದಿದ್ದು, ರೈತರು ತತ್ತರಿಸಿಹೋಗಿದ್ದಾರೆ. ಕೆಲವು ರೈತರ ಹೆಸರು ಬೆಳೆಯಂತೂ ತೀವ್ರ ಹಾನಿಗೊಂಡು ಕಪ್ಪು, ಬೂದು ಬಣ್ಣಕ್ಕೆ ತಿರುಗಿದೆ. ಅದನ್ನು ₹1,500ಕ್ಕೂ ಕೇಳದ ಸ್ಥಿತಿ ನಿರ್ಮಾಣವಾಗಿದೆ. 

ಒಣಗಿಸಲು ಹರಸಾಹಸ:

ಪಟ್ಟಣದ ಎಪಿಎಂಸಿ ಆವರಣದಲ್ಲಿ, ಬಹುತೇಕ ವಾಹನ ಸಂಚರಿಸುವ ಎಲ್ಲ ರಸ್ತೆಗಳಲ್ಲಿ ಹೆಸರು ಕಾಳು ಒಣಗಲು ಹಾಕಿದ ದೃಶ್ಯ ಸಾಮಾನ್ಯವಾಗಿದೆ. ಮಳೆಯ ಕಾರಣಕ್ಕೆ ಹಾಳಾದ ಹೆಸರನ್ನು ಕಟಾವು ಮಾಡಿ ಒಣಗಿಸಬೇಕೆಂದರೆ ಮತ್ತೇ ಮಳೆ ಕಾಡುತ್ತಿದೆ. ಹೀಗಾದರೆ ಹೆಸರು ಒಣಗಿಸುವುದು ಹೇಗೆ ಎಂದು ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಮಳೆಯ ಕಾರಣಕ್ಕೆ ಒಣಗದ, ಕಪ್ಪಾದ ಹೆಸರನ್ನು ಖರೀದಿಸಲು ವರ್ತಕರು ಹಿಂದೇಟು ಹಾಕುತ್ತಿದ್ದಾರೆ. 

ADVERTISEMENT

ಅತಿಯಾದ ಖರ್ಚು:

ಅಳಿದುಳಿದ ಹೆಸರನ್ನು ಕಟಾವು ಮಾಡಿ ಮಾರುಕಟ್ಟೆಗೆ ತರಲು ಎಕರೆಗೆ ₹4 ಸಾವಿರಕ್ಕಿಂತಲೂ ಹೆಚ್ಚು ಖರ್ಚಾಗುತ್ತಿದೆ. ಆದರೆ, ಇಳುವರಿ ಎಕರೆಗೆ ಒಂದು ಕ್ವಿಂಟಲ್ ಸಹಿತ ಬರುತ್ತಿಲ್ಲ. ಬಂದರೂ ಅದು ಸರಿಯಾಗಿಲ್ಲ. ಜತೆಗೆ ಅದಕ್ಕೆ ಸರಿಯಾದ ದರವಿಲ್ಲ. ಇದರಿಂದ ಹೆಸರು ಕಾಳು ಬೆಳೆದ ರೈತರ ಬಾಳು ಅಯೋಮಯವಾಗಿದೆ. ಬಿತ್ತಿ, ಬೆಳೆದು ಮಾರುಕಟ್ಟೆಗೆ ತರುವವರೆಗೆ ಎಕರೆಗೆ ಕನಿಷ್ಠ ₹20 ಸಾವಿರ ಖರ್ಚಾಗಿದೆ. ಅತಿವೃಷ್ಟಿ ರೈತನ ಜೀವನಕ್ಕೆ ಸಂಕಟ ತಂದಿಟ್ಟಿದೆ. ಇದನ್ನು ಯಾರ ಮುಂದೆ ಹೇಳುವುದು ಎಂದು ರೈತರು ಕಣ್ಣೀರಾದರು.

ನರಗುಂದ ತಾಲ್ಲೂಕಿನಲ್ಲಿ ಹೆಸರು ಕಾಳು ಒಣಗಲು ಹಾಕಿರುವ ದೃಶ್ಯ
ರೈತರ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ. ಈಗಾಗಲೇ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೂಡಲೇ ಬೆಳೆ ಹಾನಿ ಪರಿಹಾರ ನೀಡಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯವಾಗಲಿದೆ
ಬಸವರಾಜ ಸಾಬಳೆ ರೈತ ಸಂಘದ ಮುಖಂಡ
ಹಾನಿಯಾದ ಬೆಳೆ ವಿವರವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪರಿಹಾರ ನೀಡುವುದು ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗುತ್ತದೆ
–ಶ್ರೀಶೈಲ ತಳವಾರ ತಹಶೀಲ್ದಾರ್ ನರಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.