ADVERTISEMENT

ಶೇಂಗಾ ಬೆಲೆ ಕುಸಿತ: ರೈತರ ಆಕ್ರೋಶ

ಫಲಿಸದ ಸಭೆ: ಎಪಿಎಂಸಿಗೆ ಬೀಗ ಹಾಕಿ ಪ್ರತಿಭಟಿಸುವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 6:08 IST
Last Updated 4 ಮಾರ್ಚ್ 2026, 6:08 IST
ಗಜೇಂದ್ರಗಡ ಎಪಿಎಂಸಿ ಆವರಣದಲ್ಲಿ ರೈತರು ಶೇಂಗಾ ಬೆಲೆ ಕುಸಿತ ಖಂಡಿಸಿ ರೈತರು ಖರೀದಿದಾರರು ಹಾಗೂ ಅಧಿಕಾರಿಗಳ ವಿರುದ್ದ ಹರಿಹಾಯ್ದರು
ಗಜೇಂದ್ರಗಡ ಎಪಿಎಂಸಿ ಆವರಣದಲ್ಲಿ ರೈತರು ಶೇಂಗಾ ಬೆಲೆ ಕುಸಿತ ಖಂಡಿಸಿ ರೈತರು ಖರೀದಿದಾರರು ಹಾಗೂ ಅಧಿಕಾರಿಗಳ ವಿರುದ್ದ ಹರಿಹಾಯ್ದರು   

ಗಜೇಂದ್ರಗಡ: ಶೇಂಗಾ ಬೆಲೆ ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿರುವುದನ್ನು ಖಂಡಿಸಿ ಮಂಗಳವಾರ ರೈತರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಖರೀದಿದಾರರು, ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

ಪಟ್ಟಣದ ಎಪಿಎಂಸಿಗೆ ಶೇಂಗಾ ತಂದಿದ್ದ ತಾಲ್ಲೂಕಿನ ನೂರಾರು ರೈತರು ಕಡಿಮೆ ದರ ನಮೂದಿಸಿರುವುದಕ್ಕೆ ಹಾಗೂ ಕೆಲ ರೈತರ ಶೇಂಗಾ ಫಸಲಿಗೆ ದರ ನಮೂದಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು; ಬೆವರು ಸುರಿಸಿ ಬೆಳೆದ ಫಸಲಿಗೆ ನ್ಯಾಯಯುತ ಬೆಲೆ ಸಿಗದಿದ್ದರೆ ನಾವು ಮಾಡಿರುವ ಸಾಲ ತೀರಿಸಿ ಕೃಷಿ ಮಾಡುವುದಾದರೂ ಹೇಗೆ ಎಂದು ಹರಿಹಾಯ್ದರು. ಬಳಿಕ ಎಪಿಎಂಸಿ ಖರೀದಿದಾರರು, ಅಧಿಕಾರಿಗಳು, ಪೊಲೀಸರು ರೈತರೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ ಕಳೆದ ಬಾರಿ ಎಪಿಎಂಸಿಯಲ್ಲಿ ಪ್ರತಿಭಟನೆ ಮಾಡಿದಾಗ ರೈತರ ಫಸಲಿಗೆ ನ್ಯಾಯಯುತ ಬೆಲೆ ನೀಡುವುದಾಗಿ ಖರಿದಿದಾರರು ಮತ್ತು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಗೋವಿನಜೋಳ ಫಸಲು ಬಂದಾಗಲೂ ರೈತರಿಗೆ ಸೂಕ್ತ ಬೆಲೆ ಸಿಗಲಿಲ್ಲ. ಈಗ ಶೇಂಗಾ ಫಸಲಿಗೂ ಬೆಲೆ ಇಲ್ಲವೆಂದರೆ ಹೇಗೆ? ಬಿತ್ತನೆ ಮಾಡುವಾಗ ಎಪಿಎಂಸಿ ವರ್ತಕರು ನಕಲಿ ಬೀಜ ಕೊಟ್ಟಿದ್ದರಿಂದ ಹಾಗೂ ಬೀಜಗಳಲ್ಲಿ ಜವಾರಿ ಬೀಜ, ಜಿಟಿ ಬಿಟಿ ಬೀಜ ಮಿಶ್ರಣವಾಗಿದ್ದರಿಂದ ಫಸಲು ಸರಿಯಾಗಿ ಬಂದಿಲ್ಲ. ಕೆಲವು ಖರೀದಿದಾರರು ಬೇಕಾಬಿಟ್ಟಿಯಾಗಿ ದರ ನಮೂದಿಸುತ್ತಿದ್ದಾರೆ. ಕೇಳಿದರೆ ಫಸಲು ಒಣಗಿಸಿಕೊಂಡು ಬನ್ನಿ ಎನ್ನುತ್ತಿದ್ದಾರೆ. ಹಾಗಾದರೆ ಹಸಿ ಶೇಂಗಾ ಖರೀದಿ ಬಂದ್‌ ಮಾಡಲಾಗಿದೆ ಎಂದು ಬೋರ್ಡ್‌ ಹಾಕಿಸಿ. ಎಪಿಎಂಸಿ ಕಾರ್ಯದರ್ಶಿಗಳು ಬಂದು ರೈತರಿಗಾಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಇಲ್ಲದಿದ್ದರೆ ಎಪಿಎಂಸಿಗೆ ಬೀಗ ಹಾಕಿ ಪ್ರತಿಭಟಿಸುತ್ತೇವೆ ಎಂದು ರೈತರು ಹರಿಹಾಯ್ದರು.

ADVERTISEMENT

ಸಭೆಯಲ್ಲಿ ರೈತರು ಖರೀದಿದಾರರ ನಡುವೆ ನಡೆದ ವಾಗ್ವಾದದಲ್ಲಿ ಖರೀದಿದಾರರು ಸಭೆಯಿಂದ ಹೊರ ನಡೆದರು. ಸಭೆಯಲ್ಲಿ ರೈತರಾದ ಮಂಜು ರಾಠೋಡ, ಆನಂದ ಭಾಂಡಗೆ, ಸಿದ್ದಪ್ಪ ಕೊಪ್ಪದ, ಶಿವು ರಾಠೋಡ, ಪರಶು ರಾಠೋಡ, ಸಿದ್ದಯ್ಯ ಪೂಜಾರ, ಹನಮಂತ ಕೊಪ್ಪರದ, ಕುಮಾರ ದೇಸಾಯಿ, ವರ್ತಕರಾದ ಅಮರೇಶ ಬಳಿಗೇರ, ಬಸವರಾಜ ಬೇಲೇರಿ, ಬಸವರಾಜ ವಾಲಿ, ಎಪಿಎಂಸಿ ಅಧಿಕಾರಿ ಎಸ್.ಎಸ್.ವಾಲಿ ಹಾಗೂ ಪೊಲೀಸರು ಇದ್ದರು.

ʼಕಳೆದ ವರ್ಷಕ್ಕಿಂತ ಈ ಬಾರಿ ಫಸಲು ಹಾಗೂ ಆವಕ ಕಡಿಮೆಯಿದೆ. ಬಿತ್ತನೆ ಬೀಜ ಕೊಡುವಾಗ ಮೊದಲೇ ಸರಿಯಾಗಿ ಮಾಹಿತಿ ನೀಡಿ ಕೊಡಬೇಕಿತ್ತು. ಇದಕ್ಕೆ ಬೀಜ ಕೊಟ್ಟವರೇ ಉತ್ತರ ನೀಡಬೇಕುʼ ಎಂದು ವರ್ತಕರಾದ ಅಮರೇಶ ಬಳಿಗೆ ಹೇಳಿದರು.

₹13-₹14 ಸಾವಿರಕ್ಕೆ ಕ್ವಿಂಟಲ್‌ನಂತೆ ಬೀಜ ಖರೀದಿಸಿ ಬಿತ್ತನೆ ಮಾಡಿದ್ದೇವು. ಇಂದು ಬೀಜ ಕೊಟ್ಟ ಅಂಗಡಿಗೆ 30 ಚೀಲ ಶೇಂಗಾ ತಂದಿದ್ದೇವೆ. ಆದರೆ ಕ್ವಿಂಟಲ್‌ಗೆ ₹2500 ದರ ಹಾಕಿದ್ದಾರೆ. ಹೀಗಾದರೆ ರೈತರು ಬದುಕು ನಡೆಸುವುದಾದರೂ ಹೇಗೆʼ ಎಂದು ರೈತರೊಬ್ಬರು ಅಳಲು ತೋಡಿಕೊಂಡರು.

ʼಇಂದು ಎಪಿಎಂಸಿಗೆ ಸುಮಾರು ₹2 ಸಾವಿರ ಖರ್ಚು ಮಾಡಿಕೊಂಡು ತಂದಿರುವ 45 ಚೀಲ ಶೇಂಗಾಕ್ಕೆ ದರ ಹಾಕಿಲ್ಲ. ನಾವು ಏನು ಮಾಡಬೇಕು. ಮತ್ತೆ ಶೇಂಗಾ ಗ್ರಾಮಕ್ಕೆ ತೆಗೆದುಕೊಂಡು ಹೋಗಲು ₹2 ಸಾವಿರ ಖರ್ಚು ಮಾಡಬೇಕು. ರೈತರಿಗೆ ಬೀಜ ಕೊಡುವಾಗ ಬೇಕಾ ಬೇಡವಾ ಎಂದು ಕೇಳುವ ವರ್ತಕರು ರೈತರ ಫಸಲು ಬಂದಾಗ ಹೀಗೆ ತಾತ್ಸಾರ ಮಾಡಿದರೆ ಹೇಗೆʼ ಎಂದು ದಿಂಡೂರ ಗ್ರಾಮದ ರೈತ ರಾಮಕೃಷ್ಣ ನಲವಡೆ ಅಲವತ್ತುಕೊಂಡರು. 

ಗಜೇಂದ್ರಗಡ ಎಪಿಎಂಸಿ ಕಚೇರಿಯಲ್ಲಿ ಖರೀದಿದಾರರು ಅಧಿಕಾರಿಗಳು ಹಾಗೂ ರೈತರೊಂದಿಗೆ ನಡೆದ ಸಭೆಯಲ್ಲಿ ಶೇಂಗಾ ಪರಿಶೀಲಿಸುತ್ತಿರುವುದು
ಒಂದ ದಿನಕ್ಕ ಒಂದು ಸಾವಿರ ಧಾರಣಿ ಕಡಿಮಿಯಾಗೆತಿ. ಎಪಿಎಂಸಿಯಲ್ಲಿ ಚಲೊ ಶೇಂಗಾ ಚೊಲೊ ಇರ್ಲಾರ್ದ ಶೇಂಗಾ ಎರಡಕ್ಕೂ ಒಂದ ಧಾರಣಿ ಹಾಕ್ಯಾರ. ಹೀಗಾದರೆ ಹೊಲದಾಗ ಬಾಳೆ ಮಾಡುದಾದ್ರು ಹ್ಯಾಂಗ್‌.
ಈರಪ್ಪ ಹಾದಿಮನಿ, ಮಂಜುನಾಥ ಹಾದಿಮನಿ ರೈತರು
ಖರೀದಾರರಿಗೆ ಬೇಡಿಕೆ ಹಾಗೂ ಗುಣಮಟ್ಟ ಚೆನ್ನಾಗಿದ್ದಾಗ ದರ ಹೆಚ್ಚಿರುತ್ತದೆ. ಗಜೇಂದ್ರಗಡ ಎಪಿಎಂಸಿಯಲ್ಲಿನ ಇಂದಿನ ಘಟನೆ ಗಮನಕ್ಕೆ ಬಂದಿದೆ. ಎಪಿಎಂಸಿಗೆ ಭೇಟಿ ನೀಡಿ ಪರಿಶೀಲಿಸುವೆ.
ಸುವರ್ಣಾ ವಾಲಿಕಾರ ಎಪಿಎಂಸಿ ಪ್ರಭಾರಿ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.