ಕಡತ
(ಸಾಂದರ್ಭಿಕ ಚಿತ್ರ)
ಗದಗ: ಅನುಕಂಪದ ಆಧಾರದಲ್ಲಿ ಗ್ರೂಪ್ ‘ಡಿ’ ಹುದ್ದೆಗೆ ಇನ್ನು ನೇಮಕಾತಿ ಮಾಡದಂತೆ ಸಾರಿಗೆ ಇಲಾಖೆ ಕಾರ್ಯದರ್ಶಿ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಮೃತ ನೌಕರರ ಕುಟುಂಬದ, ನೌಕರಿ ನಿರೀಕ್ಷೆಯಲ್ಲಿದ್ದ ಅವಲಂಬಿತರಿಗೆ ಇದರಿಂದ ಆಘಾತವಾಗಿದೆ.
‘ಸರ್ಕಾರದ ನಿರ್ದೇಶನಗಳಿಗೆ ವ್ಯತಿರಿಕ್ತವಾಗಿ ಸಾರಿಗೆ ನಿಗಮಗಳಲ್ಲಿ ಅನುಕಂಪದ ಆಧಾರದಲ್ಲಿ ಗ್ರೂಪ್ ‘ಡಿ’ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ’ ಎಂಬ ಅಂಶವನ್ನು ಉಲ್ಲೇಖಿಸಿದ್ದಾರೆ.
ಈ ಆದೇಶಾನುಸಾರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ವ್ಯವಸ್ಥಾಪಕರು (ಸಿಬ್ಬಂದಿ) ನಿಗಮ ವ್ಯಾಪ್ತಿಯ ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಆಗಸ್ಟ್ 7ರಂದು ಪತ್ರ ಬರೆದಿದ್ದಾರೆ.
‘ಸಂಸ್ಥೆಯ ವಿಭಾಗ ಮತ್ತು ಪ್ರಾದೇಶಿಕ ಕಾರ್ಯಾಗಾರದಲ್ಲಿ ಅನುಕಂಪದ ಆಧಾರದ ಗ್ರೂಪ್ ‘ಡಿ’ ಹುದ್ದೆ ನೇಮಕಾತಿ ಕುರಿತು ಮುಖ್ಯ ಕಚೇರಿಗೆ ಯಾವುದೇ ಪ್ರಸ್ತಾವ ಸಲ್ಲಿಸಬಾರದು. ಅನುಕಂಪದ ಹುದ್ದೆಯ ನೇಮಕಾತಿ ಕೋರಿ ಬರುವ ಮೃತರ ಅವಲಂಬಿತರಿಗೆ ಸರ್ಕಾರದ ನಿರ್ದೇಶನ ಕುರಿತು ವಿಭಾಗ ಮಟ್ಟದಲ್ಲೇ ಮಾಹಿತಿ ನೀಡಬೇಕು’ ಎಂದು ತಿಳಿಸಿದ್ದಾರೆ.
‘ಈ ಆದೇಶ ಬರುವುದಕ್ಕೂ ಮೂರು ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಕರ್ತವ್ಯದ ವೇಳೆ ನಿಧನರಾಗಿ, ಕಡಿಮೆ ವಿದ್ಯಾರ್ಹತೆಯಿಂದ ಗ್ರೂಪ್ ‘ಡಿ’ ನೌಕರಿಗೆ ಅವರ ಕುಟುಂಬದವರು ಅರ್ಜಿ ಸಲ್ಲಿಸಿರುವ ನೂರಕ್ಕೂ ಹೆಚ್ಚು ಪ್ರಕರಣಗಳಿವೆ. ಈ ಆದೇಶದಿಂದ ಅವರ ನೌಕರಿಯ ಕನಸು ಕಮರಿದೆ’ ಎಂದು ಗದಗ ಜಿಲ್ಲೆ ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಮುತ್ತು ಬಿಳೆಯಲಿ ತಿಳಿಸಿದ್ದಾರೆ.
‘ಅನುಕಂಪದ ಆಧಾರದಡಿ ಗ್ರೂಪ್ ‘ಡಿ’ ನೌಕರಿ ಕೋರಿ ಗದಗ ವಿಭಾಗದಲ್ಲಿ 28 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈಗ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿವೆ’ ಎಂದು ಗದಗ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಶಶಿಧರ್ ಚನ್ನಪ್ಪಗೌಡರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.