ADVERTISEMENT

15 ವರ್ಷ ಇಲ್ಲದ ಅರ್ಹತೆ ಪ್ರಶ್ನೆ ಈಗೇಕೆ?: ತೋಂಟದ ಸಿದ್ಧರಾಮ ಸ್ವಾಮೀಜಿ

ಅತಿಥಿ ಉಪನ್ಯಾಸಕರ ಸಮಾವೇಶ ಉದ್ಘಾಟಿಸಿ ತೋಂಟದ ಸಿದ್ಧರಾಮ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 3:05 IST
Last Updated 24 ಜುಲೈ 2025, 3:05 IST
ಗದಗ ನಗರದ ತೋಂಟದಾರ್ಯ ಮಠದ ಆವರಣದಲ್ಲಿ ನಡೆದ ಅತಿಥಿ ಉಪನ್ಯಾಸಕರ ಸಮಾವೇಶಕ್ಕೆ ಸಿದ್ಧರಾಮ ಸ್ವಾಮೀಜಿ ಚಾಲನೆ ನೀಡಿದರು
ಗದಗ ನಗರದ ತೋಂಟದಾರ್ಯ ಮಠದ ಆವರಣದಲ್ಲಿ ನಡೆದ ಅತಿಥಿ ಉಪನ್ಯಾಸಕರ ಸಮಾವೇಶಕ್ಕೆ ಸಿದ್ಧರಾಮ ಸ್ವಾಮೀಜಿ ಚಾಲನೆ ನೀಡಿದರು   

ಗದಗ: ‘ಹದಿನೈದು ವರ್ಷಗಳಿಂದ ಅರ್ಹತೆ ಇಲ್ಲದವರಿಂದ ಪಾಠ ಮಾಡಿಸಿದ್ದು ಸರ್ಕಾರದ ತಪ್ಪು. ಈಗ ಅವರನ್ನು ಅನರ್ಹ ಎಂದು ತಿರಸ್ಕರಿಸುವುದು ಸಮಂಜಸವಲ್ಲ. ಹೋರಾಟದ ನೆಲದಲ್ಲಿ ಚಳವಳಿಯ ಹೆಜ್ಜೆ ಶುರುವಾಗಿದ್ದು, ಅತಿಥಿ ಉಪನ್ಯಾಸಕರ ಎಲ್ಲ ಬೇಡಿಕೆಗಳು ಈಡೇರುವಂತಾಗಲಿ’ ಎಂದು ಸಿದ್ಧರಾಮ ಸ್ವಾಮೀಜಿ ಹೇಳಿದರು.

ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಮಂಗಳವಾರ ನಡೆದ ಅತಿಥಿ ಉಪನ್ಯಾಸಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ಹದಿನೈದು ವರ್ಷ ಸೇವೆ ಸಲ್ಲಿಸುವಾಗ ಇರದ ಅರ್ಹತೆಯ ಪ್ರಶ್ನೆ ಈಗೇಕೆ? ಅತಿಥಿ ಉಪನ್ಯಾಸಕ ಬದುಕು ಬೀದಿಗೆ ಬೀಳುವ ಪ್ರಸಂಗ ಬಂದರೆ ಸರ್ಕಾರಕ್ಕೆ ತಿಳಿ ಹೇಳುತ್ತೇವೆ. ಅಗತ್ಯ ಬಿದ್ದರೆ ರಾಜ್ಯದ ಎಲ್ಲ ಮಠಾಧೀಶರು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹೋರಾಟ ಬೆಂಬಲಿಸುತ್ತೇವೆ’ ಎಂದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು ಮಾತನಾಡಿ, ‘ಪ್ರತಿ ಸಮಸ್ಯೆಗೆ ಪರಿಹಾರ ಇದ್ದೇ ಇದೆ. ಕಾನೂನು ತೊಡಕಿದ್ದರೆ ಬಗೆಹರಿಸುವ ಇಚ್ಛಾಶಕ್ತಿ ಸರ್ಕಾರಕ್ಕೆ ಬೇಕು. ಈ ಬಗ್ಗೆ ವಿಶೇಷ ಕಾನೂನು ನಿಯಮ ರೂಪಿಸಿ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಸರ್ಕಾರ ಆ ನಿಟ್ಟಿನಲ್ಲಿ ಯೋಚಿಸಬೇಕೇ ಹೊರತು ನ್ಯಾಯಾಲಯದ ಆದೇಶ ಪಾಲಿಸಬೇಕು ಎಂದು ಹೇಳುತ್ತಾ ಸಮಯ ದೂಡುವುದಲ್ಲ’ ಎಂದು ಹರಿಹಾಯ್ದರು.

ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹನುಮಂತಗೌಡ ಕಲ್ಮನಿ ಮಾತನಾಡಿ, ‘ಸರ್ಕಾರ ಎರಡು ವರ್ಷಗಳಿಂದ ಅತಿಥಿ ಉಪನ್ಯಾಸಕರಲ್ಲೇ ಒಡಕು ಉಂಟು ಮಾಡುವ ಕೆಲಸಕ್ಕೆ ಕೈ ಹಾಕಿದೆ. ಸಿಎಂ ಮತ್ತು ಉನ್ನತ ಶಿಕ್ಷಣ ಇಲಾಖೆ ಸಚಿವರು ಅತಿಥಿ ಉಪನ್ಯಾಸಕರ ಪರವಾಗಿದ್ದರೂ ಅವರನ್ನು ದಾರಿ ತಪ್ಪಿಸುವ ಕೆಲಸ ಕೆಲವರಿಂದ ಆಗುತ್ತಿದೆ’ ಎಂದು ಆರೋಪಿಸಿದರು.

‘ಅತಿಥಿ ಉಪನ್ಯಾಸಕರನ್ನು ಕೋರ್ಟ್‌ಗೆ ಹೋಗುವಂತೆ ಪುಸಲಾಯಿಸುವ ಕೆಲವರು, ವಕೀಲರನ್ನು ಉದ್ಧಾರ ಮಾಡುತ್ತಾ, ತಾವೂ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ, ಸೇವೆ ಕಾಯಂಗೊಳಿಸಬೇಕು‌‌‌. ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಬಳ್ಳಾರಿ ಅವರನ್ನು ಸತ್ಕರಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಅತಿಥಿ, ಉಪನ್ಯಾಸಕರು ಇದ್ದರು.

ತೋಂಟದಾರ್ಯ ಮಠದಿಂದ ಸಚಿವರ ಕಚೇರಿವರೆಗೆ ಪಾದಯಾತ್ರೆಗೆ ನಡೆಸಿ, ಸಚಿವರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು‌.

ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು. ಬೆಳಗಾವಿ ಅಧಿವೇಶನದ ವೇಳೆ ಅತಿಥಿ ಉಪನ್ಯಾಸಕರ ಹೋರಾಟ ಸರ್ಕಾರವನ್ನೇ ನಡುಗಿಸಿತ್ತು
ಎಸ್.ವಿ.ಸಂಕನೂರ ವಿಧಾನ ಪರಿಷತ್ ಸದಸ್ಯ
ಶೈಕ್ಷಣಿಕ ಅರ್ಹತೆ ಮುಂದಿಟ್ಟುಕೊಂಡು ಮಾಡುತ್ತಿರುವ ತಾರತಮ್ಯ ನೀತಿಯನ್ನು ಸರ್ಕಾರ ಕೈ ಬಿಡಬೇಕು. ಎಲ್ಲರಿಗೂ ಅನ್ವಯವಾಗುವಂತೆ ಈ ಹಿಂದಿನಂತೆ ಸಾಮಾನ್ಯ ಕೌನ್ಸಲಿಂಗ್ ಮಾಡಬೇಕು
ಹನುಮಂತಗೌಡ ಕಲ್ಮನಿ ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.