ADVERTISEMENT

ಹರ್ಡೇಕರ್ ಮಂಜಪ್ಪ ಬಸವತತ್ವ ಪ್ರಸಾರಕರು: ತೋಂಟದ ಸಿದ್ಧರಾಮ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 2:55 IST
Last Updated 3 ಮಾರ್ಚ್ 2026, 2:55 IST
ಗದಗ ನಗರದ ತೋಂಟದಾರ್ಯ ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಡಾ. ಪರ್ವೀನ್‌ ನದಾಫ್ ಮಾತನಾಡಿದರು 
ಗದಗ ನಗರದ ತೋಂಟದಾರ್ಯ ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಡಾ. ಪರ್ವೀನ್‌ ನದಾಫ್ ಮಾತನಾಡಿದರು    

ಗದಗ: ‘ಹರ್ಡೇಕರ್‌ ಮಂಜಪ್ಪ ಅವರು ಸತ್ಯ, ಅಹಿಂಸೆ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿದರು. ಸ್ವಾತಂತ್ರ್ಯ ಹೋರಾಟಕ್ಕೆ ಮತ್ತು ಬಸವತತ್ವ ಪ್ರಸಾರಕ್ಕೆ ಅವರು ಬಹು ದೊಡ್ಡ ಕೊಡುಗೆ ನೀಡಿದ್ದಾರೆ’ ಎಂದು ಸಿದ್ಧರಾಮ ಸ್ವಾಮೀಜಿ ಹೇಳಿದರು.

ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಡೆದ 2,786ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಹರ್ಡೇಕರ್ ಮಂಜಪ್ಪನವರು ಅಕ್ಷರ ಹಾಗೂ ಸಂಸ್ಕೃಯ ಪ್ರತೀಕ. ಪತ್ರಿಕೆಯ ಮೂಲಕ ಸ್ವಾತಂತ್ರ್ಯ ಮತ್ತು ಧರ್ಮ ಜಾಗೃತಿ ಕೆಲಸ ಮಾಡಿದ್ದಾರೆ. ಹಸ್ತ ನಿರ್ಮಿತ ಪತ್ರಿಕೆಗಳನ್ನು ಬರೆದು, ಸ್ವಾತಂತ್ರ್ಯ ಮತ್ತು ಧರ್ಮ ಜಾಗೃತಿ ವಿಷಯಗಳನ್ನು ಪ್ರಚಾರ ಮಾಡಿದರು. ಮಕ್ಕಳ ಸಾಹಿತ್ಯವನ್ನು ಮೊಟ್ಟಮೊದಲು ಪ್ರಸ್ತುತ ಪಡಿಸಿದರು. ಬಸವಣ್ಣನವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಾರಿದರು. ಬಸವಣ್ಣನವರ ಚರಿತ್ರೆಯನ್ನು ಹಿಂದಿಯಲ್ಲಿ ಬರೆದು ಗಾಂಧೀಜಿಯವರಿಗೆ ಓದಲು ಕೊಟ್ಟರು. ಇದರಿಂದಾಗಿ ಗಾಂಧೀಜಿಯವರು ಬಸವಣ್ಣನವರ ತತ್ವಗಳಿಗೆ ಮಾರು ಹೋಗಿದ್ದರು’ ಎಂದು ತಿಳಿಸಿದರು.

ADVERTISEMENT

ಗದಗ ತಾಲ್ಲೂಕು ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರಕಾಶ ಅಸುಂಡಿ ಮಾತನಾಡಿ, ‘1913ರಲ್ಲಿ ಮೊಟ್ಟ ಮೊದಲು ಬಸವ ಜಯಂತಿ ಆಚರಿಸಿದರು. ಅಂದಿನಿಂದ ಬಸವ ತತ್ವ ಪ್ರಸಾರ ನಾಡಿನ ಮಠ ಮಾನ್ಯಗಳಲ್ಲಿ ಪ್ರಾರಂಭವಾಯಿತು. ನಾಡಿನ ಸೇವೆಗಾಗಿ ಮದುವೆಯಾಗದೇ ಸನ್ಯಾಸತ್ವ ಸ್ವೀಕರಿಸಿ, ಆಹಾರ ಉಡುಗೆ ತೊಡುಗೆಯಲ್ಲಿ ಬದಲಾವಣೆ ತಂದರು’ ಎಂದರು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ವಚನ ಸಂಗೀತ ನಡೆಸಿಕೊಟ್ಟರು. ಕೀರ್ತಿ ಹುಡೇದ ಧಾರ್ಮಿಕ ಗ್ರಂಥ ಪಠಿಸಿದರು. ರತ್ನಾ ಪಾಟೀಲ ವಚನ ಚಿಂತನ ನಡೆಸಿಕೊಟ್ಟರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ ಹಾಗೂ ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹ ಕಾರ್ಯದರ್ಶಿ ಸೋಮಶೇಖರ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.

ಐ.ಬಿ.ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು. 

ದೈಹಿಕ– ಮಾನಸಿಕ ಸಮತೋಲನದ ಸ್ಥಿತಿಯೇ ಅಧ್ಯಾತ್ಮ. ಇಂದಿನ ಪರಿಸ್ಥಿತಿಯಲ್ಲಿ ಆರೋಗ್ಯ ಭಾಗ್ಯ ಮಹತ್ವದ್ದು. ಆರೋಗ್ಯವಂತ ವ್ಯಕ್ತಿಯೇ ಅತಿ ಶ್ರೀಮಂತ. ಆಹಾರವೇ ಔಷಧವಾಗಬೇಕು. ಆರೋಗ್ಯದ ಕಡೆಗೆ ಎಲ್ಲರೂ ಗಮನಹರಿಸಬೇಕು
–ಪರ್ವೀನ್‌ ನದಾಫ್ , ಆಯುರ್ವೇದ ವೈದ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.