ಗದಗ: ‘ಸೆ.22ರಿಂದ ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ ಸಮೀಕ್ಷೆ ಆರಂಭಗೊಳ್ಳಲಿದ್ದು, ಜಿಲ್ಲೆಯ ಪಂಚಮಸಾಲಿ ಸಮಾಜದವರು ಧರ್ಮದ ಹೆಸರಿನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ
ಲಿಂಗಾಯತ ಪಂಚಮಸಾಲಿ, ಉಪಜಾತಿ ಕಾಲಂನಲ್ಲಿ ಕೂಡ ಪಂಚಮಸಾಲಿ ಎಂದೇ ನಮೂದಿಸಬೇಕು’ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.
‘ನಮ್ಮ ಧರ್ಮ ಹಿಂದೂ. ಅನಾದಿಕಾಲದಿಂದ ಹಿಂದೂ ಅನ್ನುವ ಶಬ್ದ ಪಂಚಮಸಾಲಿಗಳ ರಕ್ತದಲ್ಲಿ ಬಂದಿದೆ. ನಮ್ಮ ಸಂಸ್ಕೃತಿಯನ್ನು ಕಾಪಾಡಬೇಕಿದೆ. ಇರುವ ಧರ್ಮವನ್ನು ಚೆನ್ನಾಗಿ ನೋಡಿಕೊಳ್ಳದೇ ಹೊಸ ಧರ್ಮ ಸ್ಥಾಪನೆ ಮಾಡುವುದರಲ್ಲಿ ಅರ್ಥವೇನಿದೆ’ ಎಂದು ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
‘ಪಂಚಾಚಾರ್ಯರು, ಬಸವಣ್ಣನವರ ತತ್ವಗಳು ಒಂದೇ ಇದ್ದಾಗ ನಾವೇಕೆ ಕಿತ್ತಾಡಬೇಕು. ಈ ಕಾರಣಕ್ಕಾಗಿ ಧರ್ಮದ ಹೆಸರಿನಲ್ಲಿ ಹಿಂದೂ ಎಂದೇ ಬರೆಸಬೇಕು’ ಎಂದು ಹೇಳಿದರು.
‘ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಅಭಿಪ್ರಾಯಗಳು ಸಂಗ್ರಹಣೆ ಆಗುವ ಸಂದರ್ಭಗಳು ಬಂದಾಗಲೆಲ್ಲ ಒಂದೊಂದು ವಿಷಯಗಳನ್ನು ತೇಲಿಬಿಟ್ಟು ಜನರ ಗಮನವನ್ನು ಬೇರೆಡೆ ಸೆಳೆಯಲಾಗುತ್ತದೆ. ಈಗ ಜಾತಿ ಗಣತಿ, ಸಾಮಾಜಿಕ, ಆರ್ಥಿಕ ಸಮೀಕ್ಷೆ ಎಂಬ ವಿಷಯವನ್ನು ಚರ್ಚೆಗೆ ತಂದು
ಇಡೀ ರಾಜ್ಯದ ಜನರ ಜತೆಗೆ ಮಠಾಧಿಪತಿಗಳ ಗಮನವನ್ನೂ ಬೇರೆಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಇದ್ಯಾವುದೂ ಶಾಶ್ವತ ಪರಿಹಾರವಲ್ಲ ಎಂಬುದನ್ನು ಸಿಎಂ ಸಿದ್ದರಾಮಯ್ಯ ಅವರು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.
‘ಜಾತಿ ಜನಗಣತಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಆದರೆ, ಜನರ ಅಭಿಪ್ರಾಯ, ಭಾವನೆಗಳನ್ನು ಬೇರೆಡೆಗೆ ಸೆಳೆಯಲು ಇಂತಹ ಅಸ್ತ್ರವನ್ನು ಪ್ರಯೋಗ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿರುವ ಎಂ.ಬಿ. ಪಾಟೀಲ, ಈಶ್ವರ ಖಂಡ್ರೆ, ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ಎಚ್.ಕೆ. ಪಾಟೀಲ ಅವರು ಮೊಟ್ಟಮೊದಲ ಬಾರಿಗೆ ಸಮಾಜದ ಪರವಾಗಿ
ಧ್ವನಿ ಎತ್ತಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜಕಾರಣ, ಅಧಿಕಾರ ಯಾವುದೂ ಶಾಶ್ವತವಲ್ಲ. ಮುಂದಿನ ಪೀಳಿಗೆಗೆ ಏನು ಬಿಟ್ಟು ಹೋಗುತ್ತೇವೆ ಎಂಬುದು ಮುಖ್ಯವಾಗುತ್ತದೆ’ ಎಂದು ಹೇಳಿದರು.
ಪಂಚಮಸಾಲಿ ಸಮಾಜದ ಮುಖಂಡರಾದ ಸಿದ್ದಣ್ಣ ಪಲ್ಲೇದ, ಎಂ.ಎಸ್.ಕರಿಗೌಡ್ರ, ಅಯ್ಯಪ್ಪ ಅಂಗಡಿ ಸೇರಿ ಹಲವರು ಇದ್ದರು.
ರಸ್ತೆ ಅಭಿವೃದ್ಧಿ ಹಣ ನೀಡಿದ್ದೇನೆ
‘ಬಿಜೆಪಿ ಸರ್ಕಾರದ ಅವಧಿಯಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಿಲ್ಲ’ ಎಂದು ಸಿಎಂ ಸಿದ್ದರಾಮಯ್ಯ
ಆರೋಪಿಸಿದ್ದಾರೆ. ಆದರೆ, ನಾನು ಲೋಕೋಪಯೋಗಿ ಸಚಿವನಾಗಿದ್ದಾಗ ಗದಗ ನಗರಕ್ಕೆ ₹10ರಿಂದ ₹15 ಕೋಟಿ ಬಿಡುಗಡೆ ಮಾಡಿದ್ದೇನೆ. ಎಸ್‌ಪಿ ಕಚೇರಿ ರಸ್ತೆ, ಹೊಸ ಬಸ್ ನಿಲ್ದಾಣ ರಸ್ತೆ, ಭೀಷ್ಮ ಕೆರೆ ರಸ್ತೆ ಅಭಿವೃದ್ಧಿಪಡಿಸಲಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಎಷ್ಟು ಗುಂಡಿಗಳಿವೆ ಎಂಬುದನ್ನು ಎಣಿಸಿದ್ದು, ಮೂರು ಸಾವಿರ ಗುಂಡಿಗಳನ್ನು ಮುಚ್ಚಲು ಆದೇಶ ನೀಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಈವರೆಗೆ ಗುಂಡಿಗಳನ್ನು ಮುಚ್ಚಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
‘ರಾಜ್ಯ ಕಂಡ ಹಿರಿಯ ರಾಜಕಾರಣಿ, ಏಳೂವರೆ
ವರ್ಷಗಳ ಕಾಲ ಸಿಎಂ ಆಗಿರುವ ಸಿದ್ದರಾಮಯ್ಯ ಅವರು ಚರಂಡಿ ಮೇಲೆ ಕಟ್ಟಿದ ಉದ್ಯಾನ ಉದ್ಘಾಟಿಸಿದ್ದು ಎಷ್ಟು ಸಮಂಜಸ? ಫುಟ್‌ಪಾತ್ ಹಾಗೂ ಪಾರ್ಕಿಂಗ್‌ಗೆ ಮೀಸಲಿದ್ದ ಜಾಗದಲ್ಲಿ ಉದ್ಯಾನ ನಿರ್ಮಿಸಿ, ಅದನ್ನು ಸಿಎಂಯಿಂದ ಉದ್ಘಾಟಿವುದು ರಾಜ್ಯ ಸರ್ಕಾರದ ಆಡಳಿತ ವೈಖರಿ ಎಂತದ್ದು ಎಂಬುದನ್ನು ತೋರಿಸುತ್ತದೆ’ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.