
ಗದಗ: ಹಿಂಗಾರು ಬೆಳೆಗಳಾದ ಕಡಲೆ, ಸೂರ್ಯಕಾಂತಿಯನ್ನು ಖರೀದಿ ಮಾಡಲು ಜರೂರಾಗಿ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ಕ್ರಮವಹಿಸಬೇಕು ಎಂದು ರೈತ ಸೇನಾ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಆಗ್ರಹಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.
ಶಾಶ್ವತ ಖರೀದಿ ಕೇಂದ್ರಗಳನ್ನು ರಾಜ್ಯದಾದ್ಯಂತ ತೆರೆಯಲು ಹಲವಾರು ಹೋರಾಟಗಳನ್ನು ಮಾಡಲಾಗಿದೆ. ಆದರೆ, ಸರ್ಕಾರ ಸ್ಪಂದಿಸಿಲ್ಲ. ಹಾಗಾಗಿ, 2021ರಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲು ಮಾಡಲಾಗಿತ್ತು. ವಾದ, ಪ್ರತಿವಾದ ಆಲಿಸಿದ ನ್ಯಾಯಾಲಯವು ಕಳೆದ ವರ್ಷ ಫೆಬ್ರುವರಿ 28ರಂದು ಖರೀದಿ ಕೇಂದ್ರ ತೆರೆಯಲು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿತ್ತು ಎಂದು ತಿಳಿಸಿದರು.
ಆದರೆ, ಇಲ್ಲೀವರೆಗೆ ಸರ್ಕಾರ ಸರಿಯಾದ ಕ್ರಮವಹಿಸಿಲ್ಲ. ಇದರಿಂದಾಗಿ ರೈತರಿಗೆ ಅನ್ಯಾವಾಗುತ್ತಲೇ ಇದೆ. ಈ ಕಾರಣಕ್ಕೆ 2026 ಜನವರಿ 9ರಂದು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ರೈತರು ಬೆಳೆದ ಎಲ್ಲ ಬೆಳೆಗಳನ್ನು ಬೆಂಬಲ ಬೆಲೆ ಅಡಿ ಖರೀದಿಸಬೇಕು. ಖರೀದಿ ವೇಳೆ ಗುಣಮಟ್ಟ ಪರೀಕ್ಷೆ ಮಾಡಿ ಬೆಲೆ ನಿಗದಿ ಮಾಡುವುದು ಸರಿ. ಆದರೆ, ಗುಣಮಟ್ಟ ಇಲ್ಲದ ಧಾನ್ಯಗಳ ಪ್ರತಿ ಕ್ವಿಂಟಲ್‌ನಲ್ಲಿ ಎಷ್ಟು ವೇಸ್ಟೇಜ್ ಬರುತ್ತದೆಯೋ ಅದನ್ನು ಹೊರತುಪಡಿಸಿ, ಉಳಿದ ಧಾನ್ಯವನ್ನು ಬೆಂಬಲ ಬೆಲೆಯಲ್ಲೇ ಖರೀದಿಸಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡರಾದ ಎಸ್.ಎಫ್.ಜೋಗನ್ನವರ, ಹನಮಂತ ಸರನಾಯಕ, ಉಮೇಶ ಬಾರಕೇರ, ವಾಸು ಚವ್ಹಾಣ, ಕಾಶವ್ವ, ಶಾಂತವ್ವ, ಸಾವಕ್ಕ, ಹೇಮಕ್ಕ ಇದ್ದರು.
ಒಂದು ತಾಲ್ಲೂಕಿನಲ್ಲಿ ಕನಿಷ್ಠ 10 ಖರೀದಿ ಕೇಂದ್ರಗಳನ್ನು ತೆರೆಯಬೇಕು. ತಕ್ಷಣವೇ ನೋಂದಣಿ ಪ್ರಕ್ರಿಯೆ ಆರಂಭಿಸಬೇಕು. ವಿಳಂಬವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದುವೀರೇಶ ಸೊಬರದಮಠ ರಾಜ್ಯ ಘಟಕದ ಅಧ್ಯಕ್ಷ ರೈತ ಸೇನಾ ಕರ್ನಾಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.