ADVERTISEMENT

ಗದಗ | ಮೂರು ದಿನಕ್ಕೊಮ್ಮೆ ನೀರು ಪೂರೈಸಿ: ಸಚಿವ ಎಚ್.ಕೆ. ಪಾಟೀಲ

ಗದಗ ಬೆಟಗೇರಿ ಅವಳಿ ನಗರದ ಸಮರ್ಪಕ ನೀರಿನ ಪೂರೈಕೆ ಕುರಿತು ಅಧಿಕಾರಿಗಳ ಜತೆಗೆ ಸಭೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 2:53 IST
Last Updated 30 ಜುಲೈ 2025, 2:53 IST
ಗದಗ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಸಚಿವ ಎಚ್‌.ಕೆ. ಪಾಟೀಲ ಮಾತನಾಡಿದರು. ಎಸ್‌ಪಿ ರೋಹನ್ ಜಗದೀಶ್‌, ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್‌, ಸಿಇಒ ಭರತ್‌ ಎಸ್‌. ಪಾಲ್ಗೊಂಡಿದ್ದರು 
ಗದಗ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಸಚಿವ ಎಚ್‌.ಕೆ. ಪಾಟೀಲ ಮಾತನಾಡಿದರು. ಎಸ್‌ಪಿ ರೋಹನ್ ಜಗದೀಶ್‌, ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್‌, ಸಿಇಒ ಭರತ್‌ ಎಸ್‌. ಪಾಲ್ಗೊಂಡಿದ್ದರು    

ಗದಗ: ‘ಅವಳಿ ನಗರದ ಜನರಿಗೆ ಸಮರ್ಪಕವಾಗಿ ನೀರು ಪೂರೈಸಲು ಆದ್ಯತೆ ವಹಿಸಬೇಕು. ಕನಿಷ್ಠ ಪ್ರತಿ ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಆಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿ ಗದಗ ಬೆಟಗೇರಿ ಅವಳಿ ನಗರಕ್ಕೆ ನೀರು ಸರಬರಾಜು ಕುರಿತಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಮೂಲಸೌಲಭ್ಯಗಳಲ್ಲಿ ಒಂದಾದ ನೀರು ಸರಬರಾಜು ಮಾಡಲು ಪ್ರಥಮ ಆದ್ಯತೆ ನೀಡಬೇಕು. ವಿನಾಃಕಾರಣ ನೀರಿನ ಅಪವ್ಯಯ ತಡೆದು ಅಗತ್ಯವಿರುವಲ್ಲಿ ನೀರು ಪೂರೈಕೆ ಮಾಡಲು ಅಧಿಕಾರಿ ವರ್ಗ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

‘ಪ್ರತಿದಿನ ರಾತ್ರಿ ನದಿಯಿಂದ ಜಾಕ್‌ವೆಲ್ ಮೂಲಕ ನೀರನ್ನು ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿ, ಬೆಳಿಗ್ಗೆ ವಾರ್ಡ್‌ವಾರು ನೀರು ಪೂರೈಕೆಗೆ ವಾಲ್‌ಮನ್‌ಗಳು ಮುಂದಾಗಬೇಕು. ಸದ್ಯ ನಗರಸಭೆಯಿಂದ ಕಾರ್ಯನಿರ್ವಹಿಸುತ್ತಿರುವ ವಾಲ್‌ಮನ್‌, ಸೂಪರ್‌ವೈಸರ್‌ಗಳನ್ನು ಬದಲಾವಣೆ ಮಾಡಬೇಕು. ಅವರಿಗೆ ಪ್ರತ್ಯೇಕ ಬೀದಿ, ವಾರ್ಡ್‌ಗಳನ್ನು ಮರುಹಂಚಿಕೆ ಮಾಡಿ ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ನಗರಸಭೆ ಪೌರಾಯುಕ್ತರು ಕ್ರಮವಹಿಸಬೇಕು’ ಎಂದು ಸೂಚನೆ ನೀಡಿದರು.

‘ಈಗ ನಾವೆಲ್ಲರೂ ನೀರು ಪೂರೈಕೆ ಮಾಡುವ ವಾಲ್‌ಮನ್‌ಗಳ ಮೇಲೆ ವಿಶ್ವಾಸವಿಡಬೇಕಿದೆ. ಮುಂದಿನ 100 ದಿವಸದೊಳಗೆ ಸಮರ್ಪಕ ನೀರಿನ ವ್ಯವಸ್ಥೆ ಆಗುವಂತೆ ಅವರು ಕಾರ್ಯನಿರ್ವಹಿಸುವ ವಿಶ್ವಾಸವಿದೆ. ನ. 1ರ ವೇಳೆಗೆ ನೀರಿನ ಸಮಸ್ಯೆ ಪೂರೈಕೆ ಸಂಪೂರ್ಣ ನಿವಾರಣೆಯಾಗಿರಬೇಕು’ ಎಂದರು.

ಅವಳಿ ನಗರಕ್ಕೆ ನೀರು ಪೂರೈಕೆಗಾಗಿಯೇ ಪ್ರತ್ಯೇಕ ಒಬ್ಬ ಎಂಜಿನಿಯರ್ ನೇಮಕ ಮಾಡಿ, ನೀರು ಪೂರೈಕೆ ಸರಳೀಕರಣಗೊಳಿಸಬೇಕು. ಅಲ್ಲದೆ ಪೈಪ್, ವಾಲ್‌ಗಳಿಂದ ಪೋಲಾಗುವ ನೀರನ್ನು ತಡೆಯಲು ಶೀಘ್ರ ದುರಸ್ತಿ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವನಗೌಡ, ನಗರಸಭೆ ಪೌರಾಯುಕ್ತ ರಾಜಾರಾಮ್ ಪವಾರ್ ಸೇರಿದಂತೆ ನಗರಸಭೆಯ ಅಧಿಕಾರಿಗಳು, ವಾಲ್‌ಮನ್‌ಗಳು, ಸೂಪರ್‌ವೈಸರ್‌ಗಳು ಇದ್ದರು.

ಅವಳಿ ನಗರಕ್ಕೆ ನೀರು ಪೂರೈಕೆ ಕುರಿತಂತೆ ನಗರಸಭೆ ಪೌರಾಯುಕ್ತರು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿರುವ ಬಗ್ಗೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಮೇಲುಸ್ತುವಾರಿ ನಿರ್ವಹಿಸಬೇಕು
ಎಚ್‌.ಕೆ.ಪಾಟೀಲ ಸಚಿವ
ಮೊದಲು ದಿಬ್ಬದಲ್ಲಿರುವ ಮನೆಗಳಿಗೆ ನೀರಿನ ಪೂರೈಕೆ ಮಾಡಬೇಕು. ನಂತರದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ಪೂರೈಕೆ ಆಗುವಂತೆ ನಿಗಾ ವಹಿಸಬೇಕು
ಸಿ.ಎನ್‌. ಶ್ರೀಧರ್‌ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.