
ಶಿರಹಟ್ಟಿ: ಈ ಗ್ರಾಮ ಪ್ರವೇಶಿಸುತ್ತಲೇ ರಸ್ತೆಯ ಎರಡೂ ಬದಿಯಲ್ಲಿ ಶೌಚದ ದುರ್ವಾಸನೆ, ನಿರ್ವಹಣೆ ಕಾಣದ ಚರಂಡಿಗಳು, ಅಸ್ಥಿಪಂಜರದಂತಹ ರಸ್ತೆಗಳು, ಗ್ರಾಮಕ್ಕೆ ಬಾರದ ಬಸ್‌ಗಳು... ಹೀಗೆ ಅನೇಕ ಜ್ವಲಂತ ಸಮಸ್ಯೆಗಳ ನಡುವೆ ಜೀವನ ಸಾಗಿಸಬೇಕಾದ ದುಃಸ್ಥಿತಿ ಹೊಳಲಾಪುರ ಗ್ರಾಮಸ್ಥರದ್ದು.
ಮಾಗಡಿ ಗ್ರಾಮ ಪಂಚಾಯಿತಿಗೆ ಒಳಪಡುವ ಗ್ರಾಮದಲ್ಲಿ 100ಕ್ಕಿಂತ ಹೆಚ್ಚು ಮನೆಗಳಿದ್ದು, 600–700 ಜನಸಂಖ್ಯೆ ಇದೆ. ಗ್ರಾಮಸ್ಥರ ಬಗ್ಗೆ ಕಿಂಚಿತ್ತೂ ಕಾಳಜಿ ತೋರದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಗ್ರಾಮದ ರಸ್ತೆಬದಿಯಲ್ಲಿ ಇಂದಿಗೂ ಕೆಲವರು ಶೌಚ ಮಾಡುತ್ತಾರೆ. ಇದರಿಂದ ಅನೈರ್ಮಲ್ಯ ಉಂಟಾಗಿದೆ. ಗ್ರಾಮ ಪಂಚಾಯಿತಿಯು ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿಲ್ಲ ಎಂಬ ಆರೋಪವೂ ಇದೆ. ಸ್ವಚ್ಛ ಭಾರತ ಅಭಿಯಾನ ಹಾಗೂ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ನಿರ್ಮಾಣಕ್ಕೆ ಸಾಕಷ್ಟು ಅನುದಾನ ಬಿಡುಗಡೆಯಾದರೂ, ಅದರಿಂದ ಪ್ರಯೋಜವಾಗಿಲ್ಲ.
ಗ್ರಾಮದಲ್ಲಿ ಎರಡ್ಮೂರು ರಸ್ತೆ ಬಿಟ್ಟರೆ ಬೇರಾವ ರಸ್ತೆಯೂ ನಿರ್ಮಾಣವಾಗಿಲ್ಲ. ಬಹುತೇಕ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಮಳೆಗಾಲದಲ್ಲಿ ಮಳೆ ನೀರು ರಸ್ತೆಯಲ್ಲಿ ಸಂಗ್ರಹಗೊಳ್ಳುವುದರಿಂದ ಸಾಂಕ್ರಾಮಿಕ ರೋಗ ಹರಡುತ್ತದೆ. ಮಾಗಡಿ ಮುಖ್ಯ ರಸ್ತೆಗೆ ಹೊಂದಿಕೊಂಡ ರಸ್ತೆಗಳ ತುಂಬ ಗುಂಡಿಗಳೇ ಇವೆ. ಇದೇ ಕಾರಣಕ್ಕೆ ಬಸ್ ಸಂಚಾರ ಕೂಡಾ ಸ್ಥಗಿತಗೊಂಡಿದೆ. ಬಸ್‌ಗಾಗಿ ಗ್ರಾಮದ ವಿದ್ಯಾರ್ಥಿಗಳು, ಜನರು 1.5 ಕಿ.ಮೀ. ನಡೆದುಕೊಂಡು ಮಾಗಡಿ ಮುಖ್ಯರಸ್ತೆಗೆ ಹೋಗಬೇಕು. ಹದಗೆಟ್ಟ ರಸ್ತೆಗಳಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಇದೆ.
ಜೂಜು ಅಡ್ಡೆಯಾದ ದೇವಸ್ಥಾನ: ‘ಗ್ರಾಮದಲ್ಲಿನ ಬಹುತೇಕ ಗುಡಿಗಳು ಜುಜೂಕೋರರ ಅಡ್ಡೆಯಾಗಿವೆ. ಕಾನೂನು–ಸುವ್ಯವಸ್ಥೆ ಕೇಳುವವರೇ ಇಲ್ಲ. ಸ್ಮಶಾನ, ಸಮುದಾಯ ಶೌಚಾಲಯದ ಸಮಸ್ಯೆಯನ್ನೂ ಅಧಿಕಾರಿಗಳು ಪರಿಹರಿಸಬೇಕು’ ಎನ್ನುತ್ತಾರೆ ಗ್ರಾಮಸ್ಥರು.
ಅಧಿಕಾರಿಗಳು ಗ್ರಾಮದ ರಸ್ತೆ ದುರಸ್ತಿಗೊಳಿಸಿದರೆ ಸಾರಿಗೆ ಸಂಸ್ಥೆಯ ಬಸ್‌ಗಳು ಗ್ರಾಮದಲ್ಲಿ ಸಂಚಾರಿಸುತ್ತವೆ. ಇದರಿಂದ ಅನೇಕರಿಗೆ ಅನುಕೂಲವಾಗುತ್ತದೆಮುತ್ತಪ್ಪ ಗ್ರಾಮಸ್ಥ
ಹೊಳಲಾಪುರ ಗ್ರಾಮದ ಸ್ಮಶಾನಕ್ಕೆ ಒಂಧು ಎಕರೆ ಜಮೀನು ಮೀಸಲಿಡಲಾಗಿದೆ. ಇತರೆ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದುಕೆ. ರಾಘವೇಂದ್ರ ರಾವ್ ತಹಶೀಲ್ದಾರ್
ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕವು ಆರಂಭವಾದ ಒಂದು ವಾರದಲ್ಲೇ ಕೆಟ್ಟುಹೋಗಿದೆ. ಈವರೆಗೆ ದುರಸ್ತಿ ಆಗಿಲ್ಲ. ಸರಿಯಾದ ನಿರ್ವಹಣೆ ಇಲ್ಲದ ಕಾರಣ ಘಟಕದ ಸುತ್ತ ಗಿಡ–ಗಂಟಿಗಳು ಬೆಳೆದಿವೆ. ಅಲ್ಲಿಯೂ ಚಿಕ್ಕಮಕ್ಕಳ ಶೌಚಕ್ಕೆ ಹೋಗುತ್ತಾರೆ. ಮುಖ್ಯರಸ್ತೆ ಸೇರಿದಂತೆ ಗ್ರಾಮದ ಬಹುತೇಕ ಚರಂಡಿಗಳಲ್ಲಿ ಗಿಡಗಳು ಬೆಳೆದಿವೆ. ಕಸ ತುಂಬಿದ್ದು ಸ್ವಚ್ಛತೆ ಮರೀಚಿಕೆಯಾಗಿದೆ. ಅವೈಜ್ಞಾನಿಕವಾಗಿ ನಿರ್ಮಿಸಿದ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೆ ಅಲ್ಲಲ್ಲಿ ಕಟ್ಟಿಕೊಳ್ಳುತ್ತಿದೆ. ಇದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ರೋಗ ಹರಡುತ್ತಿದೆ ಎಂಬುದು ಗ್ರಾಮಸ್ಥರ ಅಳಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.