ADVERTISEMENT

ಅವಳಿ ನಗರದಲ್ಲಿ ಬಣ್ಣದ ಮಳೆ: ಹೋಳಿ ಸಂಭ್ರಮದಲ್ಲಿ ಖುಷಿಯ ವಿನಿಮಯ

ಓಣಿಗಳಲ್ಲಿ ಕಟ್ಟೆಯೊಡೆದ ಹಬ್ಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 6:42 IST
Last Updated 2 ಏಪ್ರಿಲ್ 2021, 6:42 IST
ಗದಗ ನಗರದ ಓಣಿಯೊಂದರಲ್ಲಿ ಹೋಳಿ ಸಂಭ್ರಮ
ಗದಗ ನಗರದ ಓಣಿಯೊಂದರಲ್ಲಿ ಹೋಳಿ ಸಂಭ್ರಮ   

ಗದಗ: ಹೋಳಿ ಅಂದರೆ ಕೋಟ್ಯಂತರ ಮನಸ್ಸುಗಳಲ್ಲಿ ಪುಳಕದ ಭಾವ ಮೂಡುತ್ತದೆ. ಬಣ್ಣಗಳ ಮಳೆಯಲ್ಲಿ ತೊಯ್ಯುವಾಗ ಎಲ್ಲರ ಭಾವಭಿತ್ತಿಯಲ್ಲೂ ಬಾಲ್ಯದ ನೆನಪುಗಳೇ ಜೀಕುತ್ತವೆ. ಬಣ್ಣ ಹಚ್ಚಿಸಿಕೊಳ್ಳುವಾಗ, ಬಣ್ಣದ ನೀರನ್ನು ಪ್ರೀತಿಪಾತ್ರರ ಮೇಲೆ ಸುರಿಯುವಾಗ ಖುಷಿಯ ವಿನಿಮಯವಾಗುತ್ತದೆ. ಹತ್ತಾರು ಬಗೆಯ ಭಾವಗಳಿಗೆ ಬಣ್ಣದ ಮೆರುಗು ನೀಡುವ ಹೋಳಿ ಹಬ್ಬ ಎಲ್ಲರಿಗೂ ಸಂತಸ ಹಂಚುವ ರಾಯಭಾರಿಯಂತೆ ಗೋಚರಿಸುತ್ತದೆ.

ಗದಗ-ಬೆಟಗೇರಿ ಅವಳಿ ನಗರದಲ್ಲೂ ಗುರುವಾರ ಬಣ್ಣಗಳ ಮಳೆ ಸುರಿಯಿತು. ಬೀಸುವ ಗಾಳಿಯಲ್ಲೂ ಹತ್ತಾರು ಬಣ್ಣಗಳು ಕಂಡವು. ಪುಟ್ಟಮಕ್ಕಳ ಹೊಳಪು ಕೆನ್ನೆಯ ಮೇಲೆ ಕೆಂಪು, ಅರಿಷಿಣ, ನೇರಳೆ ಬಣ್ಣಗಳು ನಗು ತುಳುಕಿಸುತ್ತಿದ್ದವು. ಯುವಕ– ಯುವತಿಯರು ಬಣ್ಣಗಳ ಮಳೆಯಲ್ಲಿ ತೊಯ್ದು ತೊಪ್ಪೆಯಾಗಿದ್ದರು. ಹಲಗಿ ಸಪ್ಪಳಕ್ಕೆ ಅವರು ಹಾಕುತ್ತಿದ್ದ ಹೆಜ್ಜೆಗಳು ಕೂಡ ಅಷ್ಟೇ ಕಲರ್‌ಫುಲ್‌ ಆಗಿದ್ದವು!

ಬೆಳಿಗ್ಗೆ 6ಕ್ಕೆ ಆರಂಭಗೊಂಡ ಹೋಳಿ ಸಂಭ್ರಮ ರಾತ್ರಿಯವರೆಗೂ ಮುಂದುವರಿಯಿತು. ಎಲ್ಲೆಲ್ಲೂ ಸಂಭ್ರಮ ಮೇರೆ ಮೀರಿತ್ತು. ಓಣಿಗಳಲ್ಲಿ, ರಸ್ತೆಗಳಲ್ಲಿ, ಪ್ರಮುಖ ವೃತ್ತಗಳೆಲ್ಲವೂ ಹೋಳಿಮಯವಾಗಿದ್ದವು. ಅಲ್ಲಲ್ಲಿ ರಸ್ತೆ ಮಧ್ಯೆ ದೊಡ್ಡ ದೊಡ್ಡ ಮರದ ಕೊಂಡುಗಳು ಉರಿದು ಬೂದಿಯಾಗಿದ್ದವು. ಯುವಕರ ಗುಂಪು ಚರ್ಮದ ಹಲಗಿಯನ್ನು ಆ ಬೆಂಕಿಯಲ್ಲೇ ಕಾಯಿಸಿ, ಹುಚ್ಚೆಬ್ಬಿಸಿ ಕುಣಿಯುವಂತೆ ಬಾರಿಸುತ್ತಿದ್ದರು. ತಮಟೆ ಸದ್ದಿಗೆ ಮಕ್ಕಳು, ಯುವಕರು, ವೃದ್ಧರೆಲ್ಲರೂ ಹೆಜ್ಜೆ ಹಾಕಿ ಸಂಭ್ರಮಿಸಿದರು.

ADVERTISEMENT

ನಗರದ ಕಿಲ್ಲಾ ಓಣಿ, ವೀರನಾರಾಯಣ ದೇವಸ್ಥಾನ, ಖಾನತೋಟ, ಮದ್ಲಿಓಣಿ, ಗಂಗಾಪುರ ಪೇಟೆ, ನರಿಬಾವಿ ಓಣಿ, ಹಾಳದಿಬ್ಬ ಓಣಿ, ಒಕ್ಕಲಗೇರಿ ಓಣಿ ಸೇರಿದಂತೆ ನಗರದ 17 ಕಡೆಗಳಲ್ಲಿ ಕಾಮ-ರತಿಯರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಕೋವಿಡ್‌–19 ಕಾರಣದಿಂದಾಗಿ ಈ ಬಾರಿಯ ಹೋಳಿಯ ಸಂಭ್ರಮ ಆಚೆ ವರ್ಷಗಳಿಗೆ ಹೋಲಿಕೆ ಮಾಡಿ ನೋಡಿದಲ್ಲಿ ತುಂಬ ಕಡಿಮೆ ಇತ್ತು. ಆದರೂ, ನಗರದ ಓಣಿಗಳಲ್ಲಿ ಆಚರಣೆ ಜೋರಾಗಿತ್ತು. ಮನೆ ಮಂದಿ ಅಕ್ಕ ಪಕ್ಕದ ಮನೆಯವರ ಜತೆಗೂಡಿ ಹೋಳಿ ಆಚರಿಸಿದರು. ಹಣೆಗೆ ಬಣ್ಣದ ತಿಲಕವಿಟ್ಟು ಶುಭಾಶಯ ವಿನಿಮಯ ಮಾಡಿಕೊಂಡರು. ಬಣ್ಣದೊಂದಿಗೆ ಖುಷಿಯನ್ನೂ ಹಂಚಿ ಓಕುಳಿ ಹಬ್ಬವನ್ನು ಸಂಪನ್ನಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.