
ರೋಣ: ಪುಟ್ಟ ಗ್ರಾಮವಾದರೂ ಸ್ವಚ್ಛತೆ ಮರೀಚಿಕೆ, ಒಡೆದ ಚರಂಡಿಗಳು, ಪಾಳು ಬಿದ್ದಿರುವ ಬಸ್ ನಿಲ್ದಾಣ ಸಮಸ್ಯೆಗಳಿಂದಲೇ ತುಂಬಿಕೊಂಡು ಸೌಲಭ್ಯಗಳಿಂದ ವಂಚಿತವಾಗಿದೆ. ರೋಣ ತಾಲ್ಲೂಕಿನ ಸವಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಾಪುರ ಗ್ರಾಮ.
ರೋಣ ತಾಲ್ಲೂಕಿನ ಹಳ್ಳಿಯಾದರೂ ನರಗುಂದ ವಿಧಾನಸಭಾ ಕ್ಷೇತ್ರದ ಗಡಿ ಅಂಚಿನ ಹಳ್ಳಿಯಾಗಿರುವ ಹೊನ್ನಾಪುರ ಗ್ರಾಮ ರೋಣ ಹುಬ್ಬಳ್ಳಿ ಸಂಪರ್ಕದ ಪ್ರಮುಖ ರಸ್ತೆಯ ಸಂದಿಗವಾಡ ಗ್ರಾಮದಿಂದ ಕೂಗಳತೆಯ ದೂರದಲ್ಲಿದೆ. ಅಂದಾಜು 150ರಿಂದ 200 ಕುಟುಂಬಗಳನ್ನು ಹೊಂದಿರುವ ಪುಟ್ಟ ಗ್ರಾಮ ಇದು. ಮೂಲಸೌಲಭ್ಯಗಳಿಂದ ವಂಚಿತವಾಗಿದೆ.
ಗ್ರಾಮಕ್ಕೆ ಬಸ್ ಸಂಪರ್ಕ ಕಲ್ಪಿಸಲು ಇದುವರೆಗೂ ಸಾಧ್ಯವಾಗಿಲ್ಲ. ಗ್ರಾಮದಿಂದ ಬೇರೆ ಊರುಗಳಿಗೆ ತೆರಳಬೇಕಾದರೆ ರೋಣ ಹುಬ್ಬಳ್ಳಿ ರಸ್ತೆಗೆ ತೆರಳಿ ಅಲ್ಲಿಂದ ಬಸ್ ಹಿಡಿಯಬೇಕಾದ ಪರಿಸ್ಥಿತಿ ಇದೆ. ಗ್ರಾಮದಲ್ಲಿ ನಿರ್ಮಿಸಿರುವ ಬಸ್ ನಿಲ್ದಾಣ ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದೆ. ಸದ್ಯ ಬಸ್ ನಿಲ್ದಾಣ ಮತ್ತು ಅದರ ಆವರಣ ದನ ಕರುಗಳನ್ನು ಕಟ್ಟಲು, ಕೃಷಿ ಸಾಮಗ್ರಿಗಳನ್ನು ಇಡಲು ಸೀಮಿತವಾಗಿದ್ದು ಪ್ರಯಾಣಿಕರ ಬಳಕೆಗೆ ಯೋಗ್ಯವಾಗಿಲ್ಲ.
ತಾಲ್ಲೂಕಿನ ದೊಡ್ಡ ಗ್ರಾಮ ಪಂಚಾಯಿತಿಗಳ ಪೈಕಿ ಒಂದಾಗಿರುವ ಸವಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹೊನ್ನಾಪುರ ಗ್ರಾಮದಲ್ಲಿ ಚರಂಡಿ ಸೇರಿದಂತೆ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸುವಲ್ಲಿ ಹಾಗೂ ನಿರ್ವಹಿಸುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಚರಂಡಿಗಳು ಒಡೆದು ಹೋಗಿ ಗ್ರಾಮದ ತುಂಬಾ ಗಲೀಜು ವಾತಾವರಣ ಸೃಷ್ಟಿಯಾಗಿದ್ದರೂ ಸಂಬಂಧಿಸಿದ ಪಂಚಾಯಿತಿ ಆಡಳಿತ ಮಾತ್ರ ಗ್ರಾಮದ ಕಡೆ ತಲೆ ಹಾಕುತ್ತಿಲ್ಲ. ಗ್ರಾಮದಲ್ಲಿ ಬಯಲು ಬಹಿರ್ದೆಸೆ ಸಾಮಾನ್ಯವಾಗಿದ್ದು ಸಮುದಾಯ ಶೌಚಾಲಯಗಳಿಲ್ಲ. ಗ್ರಾಮ ಪಂಚಾಯಿತಿ ಆಡಳಿತ ಕೇವಲ ಸವಡಿ ಗ್ರಾಮಕ್ಕೆ ಮಾತ್ರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಹೊನ್ನಾಪುರ ಗ್ರಾಮಸ್ಥರಲ್ಲಿ ಹತಾಶೆ ಮೂಡಿಸಿದೆ.
ಗ್ರಾಮದ ಪಕ್ಕದಲ್ಲಿಯೇ ಹರಿಯುವ ಹಳ್ಳವು ಗ್ರಾಮದ ಕೆಲವು ಜಮೀನುಗಳಿಗೆ ನೀರಾವರಿ ಮೂಲದಂತೆ ವರವಾಗಿ ಪರಿಣಮಿಸಿದರೆ ಅತಿವೃಷ್ಟಿ ಸಂದರ್ಭದಲ್ಲಿ ಗ್ರಾಮವನ್ನು ಸಂಪೂರ್ಣವಾಗಿ ಸುತ್ತುವರಿದ ಹಳ್ಳವು ನಡುಗಡ್ಡೆಯನ್ನಾಗಿ ಮಾಡುವ ಮೂಲಕ ಗ್ರಾಮಕ್ಕಿರುವ ಎಲ್ಲ ಸಂಪರ್ಕಗಳನ್ನು ಬಂದ್ ಮಾಡುತ್ತದೆ. ಈ ವೇಳೆ ಆರೋಗ್ಯ ಸೇವೆಗಳನ್ನು ಪಡೆಯಲು ಗ್ರಾಮಸ್ಥರಿಗೆ ಸಾಧ್ಯವಾಗದ ಸ್ಥಿತಿ ಹಲವು ವರ್ಷಗಳಿಂದ ಇದ್ದರೂ ಇದಕ್ಕೆ ಪರಿಹಾರ ಮಾತ್ರ ಸಿಕ್ಕಿಲ್ಲ ಎಂದು ಗ್ರಾಮಸ್ಥರು ಅಲವತ್ತುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಸವಡಿ ಗ್ರಾಮ ಪಂಚಾಯಿತಿಗೆ ವರ್ಗಾವಣೆಯಾಗಿ ಬಂದಿರುವೆ. ಹೊನ್ನಾಪುರ ಗ್ರಾಮದ ಅಭಿವೃದ್ಧಿ ಕಾರ್ಯಗಳಿಗಾಗಿ ಉದ್ಯೋಗ ಖಾತ್ರಿ ಯೋಜನೆ ಅಡಿ ಯೋಜನೆ ರೂಪಿಸಲಾಗುವುದು. ಪ್ರವಾಹ ಸ್ಥಿತಿಯಿಂದ ರಕ್ಷಣೆಗಾಗಿ ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆಶಿವನಗೌಡ ಮೆಣಸಗಿ ಪಿಡಿಒ
ನಿರ್ವಹಣೆ ಇಲ್ಲದೆ ಚರಂಡಿಯ ಕೊಳಚೆ ನೀರು ರಸ್ತೆ ಮೇಲೆಲ್ಲಾ ಹರಡಿಕೊಂಡಿದ್ದು ಗ್ರಾಮಸ್ಥರು ಮಕ್ಕಳು ಅದರಲ್ಲಿಯೇ ಹಾಯ್ದು ಹೋಗುವ ಪರಿಸ್ಥಿತಿ ಇದೆ. ಇಷ್ಟಾದರೂ ಸಂಬಂಧಿಸಿದ ಗ್ರಾಮ ಪಂಚಾಯಿತಿ ಚರಂಡಿ ನಿರ್ವಹಣೆಗೆ ಕ್ರಮ ಕೈಗೊಳ್ಳುತ್ತಿಲ್ಲಮಲ್ಲಪ್ಪ ಹೊನ್ನಾಪುರ ಗ್ರಾಮದ ಯುವಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.