ರೋಣ: ಪಟ್ಟಣ ಸೇರಿದಂತೆ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟ ಮಳಿಗೆಗಳಿವೆ. ಆದರೆ, ತಾಲ್ಲೂಕಿನಲ್ಲಿ ಅಧಿಕೃತ ಮದ್ಯ ಮಾರಾಟ ಮಳಿಗೆಗಳಿಗಿಂತ ಅನಧಿಕೃತ ಮದ್ಯ ಮಾರಾಟವೇ ಹೆಚ್ಚಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪ್ರತಿಯೊಂದು ಗ್ರಾಮಗಳಲ್ಲಿ ಚಹಾದ ಅಂಗಡಿ, ಕಿರಾಣಿ ಅಂಗಡಿ, ಚಿಕ್ಕಪುಟ್ಟ ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ಇಲಾಖೆ ಇದಕ್ಕೆ ಕಡಿವಾಣ ಹಾಕುವ ಬದಲಿಗೆ ಮಾರಾಟ ಹೆಚ್ಚಿಸುವ ನಿಟ್ಟಿನಲ್ಲಿ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ಕೆಲವು ಗ್ರಾಮಗಳ ಗ್ರಾಮಸ್ಥರು ಹಾಗೂ ಮಹಿಳೆಯರು ಆರೋಪ ಮಾಡಿದ್ದಾರೆ.
ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೂ ರೋಣ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಈ ಕುರಿತು ಯಾವುದೇ ಮಾಹಿತಿ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈಚೆಗೆ ಸವಡಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮನೆಯೊಂದರ ಮೇಲೆ ಗದಗ ಅಬಕಾರಿ ಉಪ ವಿಭಾಗದವರು ದಾಳಿ ಮಾಡಿದ್ದರು. ಈ ದಾಳಿಯ ಕುರಿತು ರೋಣ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇರಲಿಲ್ಲ. ಗ್ರಾಮೀಣ ಪ್ರದೇಶದ ಶಾಲೆಗಳ ಮೈದಾನ ಹೊರವಲಯದ ಸರ್ಕಾರಿ ಕಟ್ಟಡ, ರಸ್ತೆ ಪಕ್ಕದ ಜಮೀನುಗಳೇ ಕುಡುಕರ ತಾಣಗಳಾಗುತ್ತಿವೆ. ಪ್ರತಿ ನಿತ್ಯ ಮದ್ಯದ ತಾಜ್ಯಗಳನ್ನು ವಿಲೇವಾರಿ ಮಾಡುವುದೇ ಶಿಕ್ಷಕರು ಮತ್ತು ರೈತರ ಕೆಲಸವಾಗಿ ಬಿಟ್ಟಿದೆ.
ಪ್ರತಿಯೊಂದು ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದು, ಕೂಲಿ ಕೆಲಸಕ್ಕೆ ಹೋಗುವ ಜನರು ಸೇರಿದಂತೆ ಯುವಪೀಳಿಗೆ ಮದ್ಯಕ್ಕೆ ದಾಸರಾಗಿದ್ದಾರೆ. ₹10ರಿಂದ ₹20 ಹೆಚ್ಚಿನ ಬೆಲೆ ನೀಡಿ ಮದ್ಯವನ್ನು ಕುಡಿಯುವ ಸ್ಥಿತಿ ಹಳ್ಳಿಗಳಲ್ಲಿ ಕಂಡು ಬರುತ್ತಿದೆ. ಇದರಿಂದ ಕುಟುಂಬಕ್ಕೆ ಆರ್ಥಿಕ ನಷ್ಟದ ಜೊತೆಗೆ ಯುವಪೀಳಿಗೆಯ ಭವಿಷ್ಯವು ಹಾಳಾಗುತ್ತಿದೆ. ಇಲಾಖೆಗೆ ಮಹಿಳೆಯರು ವಿವಿಧ ಸಂಘಟನೆಗಳು ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟುವಂತೆ ಹಲವು ಬಾರಿ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದ್ದರೂ ಅಬಕಾರಿ ಇಲಾಖೆ ಕ್ರಮವಹಿಸಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಕಳೆದ ಒಂದು ವಾರದಲ್ಲಿ ಮೂರು ಅಕ್ರಮ ಮದ್ಯ ಮಾರಾಟ ಪ್ರಕರಣವನ್ನು ದಾಖಲಿಸಲಾಗಿದೆ. ಅಕ್ರಮವಾಗಿ ಮಾರಾಟ ಮಾಡುತ್ತಿರುವ ದಾಬಾಗಳ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು.ಶ್ರೀದೇವಿ ಕೊಳ್ಳಿ ಅಬಕಾರಿ ನೀರಿಕ್ಷಕರು ರೋಣ
ಅಕ್ರಮ ಮದ್ಯಕ್ಕೆ ಅಬಕಾರಿ ಇಲಾಖೆ ಕಡಿವಾಣ ಹಾಕಬೇಕಿದೆ. ಗ್ರಾಮೀಣ ಪ್ರದೇಶದ ಯುವಜನತೆ ಕುಡಿತದ ಚಟಕ್ಕೆ ದಾಸರಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕುಎಂ.ಎಚ್.ನದಾಫ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರೋಣ ತಾಲ್ಲೂಕು ಅಧ್ಯಕ್ಷರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.