ADVERTISEMENT

ವಸೂಲಾತಿ ಆಯುಕ್ತರ ನೇಮಕಾತಿ ಅಧಿನಿಯಮಕ್ಕೆ ರಾಜ್ಯಪಾಲರ ಅಂಕಿತ: ಎಚ್‌.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 10:46 IST
Last Updated 10 ಸೆಪ್ಟೆಂಬರ್ 2025, 10:46 IST
   

ಗದಗ: ‘ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದಾದ ಸ್ವತ್ತನ್ನು ವಶಪಡಿಸಿಕೊಳ್ಳಲು ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರ ನೇಮಕಾತಿ ಅಧಿನಿಮಯಕ್ಕೆ ರಾಜ್ಯಪಾಲರು ಸೆ.9ರಂದು ಅಂಕಿತ ಹಾಕಿದ್ದಾರೆ’ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

‘ಗಣಿ ಅಕ್ರಮದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹೊಸ ಕಾನೂನು ಅನುಕೂಲ ಕಲ್ಪಿಸಲಿದೆ. ಇದರಿಂದಾಗಿ ಕನ್ನಡಿಗರ ಆಸ್ತಿಯನ್ನು ಮರಳಿ ತರುವ ಕೆಲಸ ತ್ವರಿತವಾಗಿ ಆಗಲಿದೆ’ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ಅಕ್ರಮ ಗಣಿ ಹಗರಣ ವಿಷಯವಾಗಿ ಈವರೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಜುಲೈ 2ರಂದು ನಂದಿ ಬೆಟ್ಟದಲ್ಲಿ ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಉಪ ಸಮಿತಿ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಅದರಂತೆ, ಜುಲೈ 5ರಂದು ಉಪ ಸಮಿತಿ ನೇಮಕಗೊಂಡಿತ್ತು. ತಿಂಗಳ ನಂತರ ಕ್ಯಾಬಿನೆಟ್‌ ಸಮಿತಿ ಕೆಲಸ ಪೂರ್ಣಗೊಳಿಸಿ ವರದಿ ಸಲ್ಲಿಕೆಯಾಗಿತ್ತು. ಅದರಂತೆ, ವಸೂಲಾತಿ ಆಯುಕ್ತರ ನೇಮಕದ ಬಗ್ಗೆ ಒಪ್ಪಿಗೆ ಸೂಚಿಸಲಾಗಿತ್ತು’ ಎಂದು ತಿಳಿಸಿದರು.

ADVERTISEMENT

‘ಕ್ಯಾಬಿನೆಟ್‌ ಒಪ್ಪಿದ ಮಸೂದೆಯನ್ನು ಆಗಸ್ಟ್‌ 18ರಂದು ವಿಧಾನಸಭೆಯಲ್ಲಿ ಮಂಡನೆ ಮಾಡಲಾಗಿತ್ತು. ಅಕ್ರಮ ಗಣಿಗಾರಿಕೆ ಸ್ವತ್ತು ವಶಪಡಿಸಿಕೊಳ್ಳುವ, ಜಪ್ತಿಗಾಗಿ ವಸೂಲಾತಿ ಆಯುಕ್ತರ ಅಧಿನಿಯಮ ಪಾಸ್‌ ಆಗಿತ್ತು. ಸೆ.9ರಂದು ಇದಕ್ಕೆ ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ನಿನ್ನೆಯಿಂದಲೇ ರಾಜ್ಯದಲ್ಲಿ ಕಾನೂನು ಜಾರಿಯಾಗಿದೆ’ ಎಂದು ತಿಳಿಸಿದರು.

‘ಗಣಿ ಅಕ್ರಮದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹೊಸ ಕಾನೂನು ಅನುಕೂಲ ಒದಗಿಸಲಿದ್ದು, ಸಾಧ್ಯವಾದಷ್ಟು ಬೇಗ ವಸೂಲಾತಿ ಆಯುಕ್ತರನ್ನು ನೇಮಿಸುವ ಕೆಲಸ ಆಗಲಿದೆ. ಸಮಯಕ್ಕೆ ಸರಿಯಾಗಿ ಕೆಲಸ ಮಾಡಿ ಕನ್ನಡಿಗರ ಆಸ್ತಿಯನ್ನು ಕನ್ನಡಿಗರಿಗೆ ವಾಪಸ್‌ ತರುವ ಕೆಲಸ ಮಾಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.