ಗದಗ: ‘ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಬೆಂಗಳೂರಿನ ವಾಣಿಜ್ಯೋದ್ಯಮ ಸಂಘದ ಜತೆಗೆ ಸ್ಪರ್ಧೆ ಮಾಡಬೇಕು. ಆ ಗುರಿ ಇಟ್ಟುಕೊಂಡಾಗ ನಮಗೆ ದಾರಿ ಸಿಗುತ್ತದೆ. ಗದಗನ್ನು ಔದ್ಯೋಗಿಕ ನಗರವನ್ನಾಗಿ ಮಾಡುವ ಸಂಕಲ್ಪ ಮಾಡಿದ್ದು, ಎಲ್ಲರೂ ಕೈಜೋಡಿಸಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಕೆ.ಎಚ್.ಪಾಟೀಲ ಸಭಾಭವನದಲ್ಲಿ ಭಾನುವಾರ ನಡೆದ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸುವರ್ಣ ಮಹೋತ್ಸವ ಹಾಗೂ ಗದಗ ಉತ್ಸವದ ರಜತ ಮಹೋತ್ಸವ ಮತ್ತು ಶ್ರೇಷ್ಠ ವರ್ತಕ ಹಾಗೂ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
‘ಗದಗಕ್ಕೆ ವಿಶೇಷ ಸ್ಥಾನ ಇದೆ. ಈ ನಿಟ್ಟಿನಲ್ಲಿ ನಗರಕ್ಕೆ ಒಳ್ಳೆಯ ಭವಿಷ್ಯ ಬರೆಯಬೇಕಿದೆ. ಇದು ಸಾಧ್ಯವೋ; ಅಸಾಧ್ಯವೋ ಈ ಪಶ್ನೆ ಎಲ್ಲರನ್ನೂ ಕಾಡುತ್ತಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಬ್ಯಾಂಕರ್ಸ್ ಸಭೆ ಮಾಡುತ್ತೇನೆ. ಆಗ ವಾಣಿಜ್ಯೋದಮಿ ಸಂಘದವರನ್ನೂ ಕರೆಯುತ್ತೇನೆ. ಅಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ನಮ್ಮಲ್ಲಿರುವ ಮೂಲಸೌಕರ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಮುಂದುವರಿದರೆ ಖಂಡಿತ ಒಳ್ಳೆಯ ಭವಿಷ್ಯ ಇದೆ’ ಎಂದರು.
‘ವಾಣಿಜ್ಯೋದ್ಯಮ ಸಂಸ್ಥೆ ಐವತ್ತು ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಒಂದು ಸಿಂಹಾವಲೋಕನ ಮತ್ತು ಆತ್ಮಾವಲೋಕನ ಅಗತ್ಯವಾಗಿದೆ. ಒಬ್ಬ ವ್ಯಕ್ತಿಗೆ ಐವತ್ತು ವರ್ಷ ಆಗುವುದು ಮುಖ್ಯವಲ್ಲ. ಒಂದು ಸಂಸ್ಥೆಗೆ ಐವತ್ತು ವರ್ಷ ಆಗುವುದು ಬಹಳ ಮುಖ್ಯ. ಆಗಿನ ವಾಣಿಜ್ಯೋದ್ಯಮಿಗಳು ಕಷ್ಟ ಕಾಲದಲ್ಲಿ ಸಂಸ್ಥೆ ಕಟ್ಟಿದ್ದಾರೆ. ಹಿಂದಿನ ಅಧ್ಯಕ್ಷರು ಹಾಗು ನಿರ್ದೇಶಕ ಮಂಡಳಿಗೆ ಅಭಿನಂದನೆಗಳು’ ಎಂದು ಹೇಳಿದರು.
‘ಗದಗ– ವಾಡಿ, ಗದಗ– ಯಲವಿಗೆ ರೈಲ್ವೆ ಸಂಪರ್ಕ ಆಗುತ್ತಿದೆ. ಮುಂಬೈಗೆ ಹೈಸ್ಟೀಡ್ ರೈಲು ಸಂಪರ್ಕ ಮಾಡುತ್ತಿದ್ದೇವೆ. ಗದಗ– ಯಲವಿಗೆ ಯೋಜನೆಗೆ ₹700 ಕೋಟಿ ಮಂಜೂರಾತಿ ಸಿಗುತ್ತಿದೆ. ತುಂಗಭದ್ರಾ ನೀರು ದಡದಲ್ಲಿಯೇ ಹರಿಯುತ್ತಿದೆ. ವರದಾ ಬೆಡ್ತಿ ಜೋಡಣೆಗೆ ಕೇಂದ್ರ ಸರ್ಕಾರ ಶೀಘ್ರ ಒಪ್ಪಿಗೆ ಕೊಡುತ್ತದೆ. ಅದು ಬಂದರೆ ತುಂಗಭದ್ರಾ ನದಿಯಲ್ಲಿ ಬೇಸಿಗೆಯಲ್ಲಿ ನೀರಿನ ಕೊರತೆ ತಪ್ಪುತ್ತದೆ’ ಎಂದರು.
‘ನಮ್ಮಲ್ಲಿ ಕೌಶಲ್ಯದ ಕೊರತೆ ಇದೆ. ಇದನ್ನು ನೀಗಿಸಲು ಕೇಂದ್ರ ಸರ್ಕಾರ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಿದೆ. ಅದರ ಉಪಯೋಗ ಮಾಡಿಕೊಂಡು ಮುನ್ನಡೆದರೆ ಖಂಡಿತವಾಗಿಯೂ ನಾವು ಯಾವುದೇ ದೇಶಕ್ಕೂ ಸೆಡ್ಡು ಹೊಡೆಯಬಹುದು’ ಎಂದರು.
‘ಗದಗನಲ್ಲಿ ಆಹಾರ ಸಂಸ್ಕರಣೆ, ಜವಳಿ ಉದ್ಯಮಕ್ಕೆ ಹೆಚ್ಚು ಅವಕಾಶ ಇದೆ. ನಾನು ಜವಳಿ, ಕೌಶಲ್ಯ ಮತ್ತು ಕಾರ್ಮಿಕ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ ಇದ್ದೇನೆ. ಹಾಗಾಗಿ, ಗದಗ ನಗರಕ್ಕಾಗಿ ಏನು ಮಾಡಬೇಕೆಂದು ಅಧಿಕಾರಿಗಳಿಗೆ ಹೇಳಿದ್ದೇನೆ’ ಎಂದರು.
ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಇದ್ದರು.
ರಾಜ್ಯದಲ್ಲಿ ಉದ್ಯಮ ಮಾಡಲು ಕಷ್ಟವಾಗಲು ಸರ್ಕಾರ ಹಾಗೂ ಭೂಮಾಫಿಯಾ ಕಾರಣವಾಗಿದೆ. ಒಂದು ಉದ್ಯಮ ಆರಂಭಿಸಲು ಮುಂದಾದರೆ ಭೂಮಿಯ ಬೆಲೆ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಇದರಿಂದ ಸಾಮಾನ್ಯ ಜನರು ಉದ್ಯಮ ಸ್ಥಾಪಿಸುವುದು ಕಷ್ಟವಾಗಿದೆಬಸವರಾಜ ಬೊಮ್ಮಾಯಿ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.