ADVERTISEMENT

ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಕಡೇಮನಿ

ದಲಿತ ಮುಖಂಡರಿಂದ ಪರಸ್ಪರ ಸಿಹಿ ಹಂಚಿ ಸರ್ಕಾರಕ್ಕೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 4:20 IST
Last Updated 22 ಆಗಸ್ಟ್ 2025, 4:20 IST
ಸರ್ಕಾರ ನ್ಯಾಯಮೂರ್ತಿ ನಾಗಮೋಹನ ದಾಸ್ ವರದಿಯನ್ನು ಪರಿಷ್ಕರಿಸಿ ಮೂರು ಗುಂಪುಗಳಾಗಿ ವಿಂಗಡಿಸಿ ಅಂಗೀಕರಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ದಲಿತ ಮುಖಂಡರು ಗದಗ ನಗರದಲ್ಲಿ ಸಿಹಿಹಂಚಿ ಸಂಭ್ರಮಿಸಿದರು
ಸರ್ಕಾರ ನ್ಯಾಯಮೂರ್ತಿ ನಾಗಮೋಹನ ದಾಸ್ ವರದಿಯನ್ನು ಪರಿಷ್ಕರಿಸಿ ಮೂರು ಗುಂಪುಗಳಾಗಿ ವಿಂಗಡಿಸಿ ಅಂಗೀಕರಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ದಲಿತ ಮುಖಂಡರು ಗದಗ ನಗರದಲ್ಲಿ ಸಿಹಿಹಂಚಿ ಸಂಭ್ರಮಿಸಿದರು   

ಗದಗ: ‘ಒಳಮೀಸಲಾತಿ ಜಾರಿಗೆ ಒತ್ತಾಯಿಸಿ 35 ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ ಸರ್ಕಾರ ವಿಶೇಷ ಸಚಿವ ಸಂಪುಟದಲ್ಲಿ ನ್ಯಾಯಮೂರ್ತಿ ನಾಗಮೋಹನ ದಾಸ್ ವರದಿಯನ್ನು ಪರಿಷ್ಕರಿಸಿ ಮೂರು ಗುಂಪುಗಳಾಗಿ ವಿಂಗಡಿಸಿ ಅಂಗೀಕರಿಸಿದೆ’ ಎಂದು ದಲಿತ ಒಕ್ಕೂಟ ಹರ್ಷ ವ್ಯಕ್ತಪಡಿಸಿದೆ.

ನಗರದ ಗಾಂಧಿ ವೃತ್ತದಲ್ಲಿ ದಲಿತ ಮುಖಂಡರು ಸೇರಿ ಗುರುವಾರ ಪರಸ್ಪರ ಸಿಹಿ ಹಂಚಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಗದಗ ಜಿಲ್ಲಾ ದಲಿತ ಮುಖಂಡ ಬಸವರಾಜ ಕಡೇಮನಿ ಮಾತನಾಡಿ, ‘ಒಳಮೀಸಲಾತಿ ಜಾರಿಗಾಗಿ ಮೂರೂವರೆ ದಶಕಗಳಿಂದ ರಾಜ್ಯದಲ್ಲಿ ನಿರಂತರ ಹೋರಾಟ ನಡೆದಿದ್ದು, ಆ ಹೋರಾಟಕ್ಕೆ ಈಗ ಜಯ ಸಿಕ್ಕಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಗದಗ ಜಿಲ್ಲೆಯ ಎಲ್ಲ ದಲಿತರ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇವೆ’ ಎಂದರು.

ADVERTISEMENT

ರಮೇಶ ಕಡೇಮನಿ ಮಾತನಾಡಿ, ‘ಮಾದಿಗ ಸಮುದಾಯದ ಸುದೀರ್ಘ ಹೋರಾಟದಿಂದ ಒಳಮೀಸಲಾತಿ ಹೋರಾಟಕ್ಕೆ ಜಯ ಸಿಕ್ಕಿದೆ. ಉತ್ತರ ಕರ್ನಾಟಕದ ಹೊಲೆ ಮಾದಿಗರು ನಾವು ಒಂದಾಗಿದ್ದೇವೆ‌‌. ದಕ್ಷಿಣ ಭಾಗದ ದಲಿತರಿಗೆ ನಾವು ಹೊಲೆ ಮಾದಿಗರ ರಾಜ್ಯ ಮಟ್ಟದ ಸಮಾವೇಶ ಮಾಡಿ ನಮ್ಮ ಶಕ್ತಿಯನ್ನು ಪ್ರದರ್ಶಿಸಬೇಕಿದೆ’ ಎಂದರು.

ವಿನಾಯಕ ಬಳ್ಳಾರಿ ಹಾಗೂ ಆನಂದ ಶಿಂಗಾಡಿ ಮಾತನಾಡಿದರು.

ಪ್ರಕಾಶ ಕಾಳೆ, ವಿಜಯ ಕಲ್ಮನಿ, ಶಂಭು ಹುನಗುಂದ, ಮಂಜುನಾಥ ಗೊಂದಿಯವರ, ಶಂಭು ಕಾಳೆ, ಅಜೇಯ ಪಾಟೀಲ, ಬಸವರಾಜ ಚಲವಾದಿ, ಮೋಹನ ಚಲವಾದಿ, ಅನಿಲ ಕಾಳೆ, ಪರಶು ಕಾಳೆ, ಬಸೂ ಬಿಳೆಯಲಿ, ಶಿವಾನಂದ ತಮ್ಮಣ್ಣವರ, ಶ್ರೀಕಾಂತ ಮಳಲಿ, ಸಂತೋಷ ಬಣಕಾರ, ಸುರೇಶ ಬಣಕಾರ, ರಾಘು ಡೋಣಿ, ಗೋಪಾಲ ಕಾಳೆ, ಪ್ರವೀಣ ಬಿಳೆಯಲಿ, ಆಕಾಶ ಬಣಕಾರ, ಅಕ್ಷಯ ಬಿಳೆಯಲಿ, ಮಾರುತಿ ಗೊಟುರು, ವಿಶಾಲ ಬಣಕಾರ ಇದ್ದರು.

ಕಾಂಗ್ರೆಸ್ ಸರ್ಕಾರ ಸಹಕಾರ ಕ್ಷೇತ್ರದಲ್ಲಿ ದಲಿತರಿಗೂ ಮೀಸಲಾತಿ ಕಲ್ಪಿಸಿ ಕಾಯ್ದೆ ಜಾರಿಗೆ ತಂದಿದೆ. ದಲಿತರು ಸಮಾಜಮುಖಿಯಾಗಿ ಕೆಲಸ ಮಾಡಲು ಸಹಕಾರಿಯಾಗಲಿದೆ
ಬಸವರಾಜ ಕಡೇಮನಿ ಗದಗ ಜಿಲ್ಲಾ ದಲಿತ ಮುಖಂಡ

ಅವಕಾಶವಂಚಿತ ಅಲೆಮಾರಿಗಳು; ಕ್ರಮಕ್ಕೆ ಆಗ್ರಹ

‘ಸರ್ಕಾರ ಮೂರು ಗುಂಪುಗಳಾಗಿ ವಿಂಗಡಿಸಿ ಒಳಮೀಸಲಾತಿಯನ್ನು ಅಂಗೀಕರಿಸಿದೆ. ಆದರೆ ಮೂರನೇ ಗುಂಪಿನಲ್ಲಿ ಅಲೆಮಾರಿಗಳನ್ನು ಸೇರಿಸಿ ಅವರನ್ನು ಅವಕಾಶ ವಂಚಿತರನ್ನಾಗಿ ಮಾಡಿದೆ. ಅವರನ್ನು ಸ್ಪೃಶ್ಯರೊಂದಿಗೆ ಸೇರಿಸಿದ್ದು ಬೇರ್ಪಡಿಸಿ ಮೀಸಲಾತಿಯನ್ನು ಕಲ್ಪಿಸಿಕೊಡಬೇಕು’ ಎಂದು ದಲಿತ ಮುಖಂಡ ಶರೀಫ್ ಬಿಳೆಯಲಿ ಒತ್ತಾಯಿಸಿದರು. ‘ಒಳಮೀಸಲಾತಿ ವರದಿಯನ್ನು ಜಾರಿಗೆ ತಂದು ಬ್ಯಾಕಲಾಗ್ ಹಾಗೂ ಇನ್ನಿತರ ಹುದ್ದೆಗಳನ್ನು ಆದಷ್ಟು ಬೇಗ ತುಂಬಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.