ಮೀಸಲಾತಿ(ಸಾಂಕೇತಿಕ ಚಿತ್ರ)
ಮುಂಡರಗಿ: ‘ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಸಲ್ಲಿಸಿರುವ ಒಳ ಮೀಸಲಾತಿ ವರದಿಯನ್ನು ಸರ್ಕಾರ ಯಥಾವತ್ತಾಗಿ ಸ್ವೀಕರಿಸಬೇಕು’ ಎಂದು ತಾಲ್ಲೂಕು ಡಿಎಸ್ಎಸ್ ಸಂಚಾಲಕ ಸೋಮಣ್ಣ ಹೈತಾಪುರ ಒತ್ತಾಯಿಸಿದರು.
ಪಟ್ಟಣದಲ್ಲಿ ಬುಧವಾರ ತಾಲ್ಲೂಕು ಮಾದಿಗ ಸಮಾಜ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಸರ್ಕಾರ ವರದಿಯನ್ನು ತಿದ್ದುಪಡಿ ಮಾಡಲು ಮುಂದಾದರೆ ರಾಜ್ಯದಾಧ್ಯಂತ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.
‘ವರದಿ ಪ್ರಕಾರ ರಾಜ್ಯದಲ್ಲಿ 37ಲಕ್ಷ ಮಾದಿಗ ಸಮಾಜದವರಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಅವರಿಗೆ ಸಮರ್ಪಕ ಮೀಸಲಾತಿ ದೊರೆಯದೆ ಇದ್ದುದ್ದರಿಂದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ. ಅದನ್ನು ಸರಿದೂಗಿಸುವ ನಿಟ್ಟಿನಲ್ಲಿ ಸರ್ಕಾರ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಡಿಎಸ್ಎಸ್ ಮುಖಂಡ ಎಚ್.ಡಿ. ಪೂಜಾರ ಮಾತನಾಡಿ, ‘ವರದಿ ಅನುಷ್ಠಾನ ಕುರಿತು ಕೆಲವು ಪ್ರಭಾವಿಗಳು ಸರ್ಕಾರದ ಮಟ್ಟದಲ್ಲಿ ಈಗಾಗಲೇ ಅಪಸ್ವರ ಎತ್ತುತ್ತಿದ್ದಾರೆ. ಸಿಎಂ ಸಿದ್ಧರಾಮಯ್ಯನವರು ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸದಿದ್ದರೆ ಮಾದಿಗ ಸಮಾಜದವರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಯುವ ಮುಖಂಡ ನಿಂಗರಾಜ ಹಾಲಿನವರ ಮಾತನಾಡಿ, ‘ಆ.16 ರಂದು ನಡೆಯುವ ವಿಶೇಷ ಸಂಪುಟ ಸಭೆಯಲ್ಲಿ ವರದಿ ಕುರಿತು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದು, ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು’ ಎಂದರು.
ಈ ವೇಳೆ ಡಿ.ಜಿ. ಪುಜಾರ, ಲಿಂಗರಾಜ ಸ್ವಾಗಿ, ನಿಂಗರಾಜ ಮೇಗಳಮನಿ, ಮರಿಯಜ್ಜ ಎಂ.ಎಚ್., ಪ್ರವೀಣ ವಡ್ಡಟ್ಟಿ, ಶಿವು ಪೂಜಾರ, ಸೋಮಣ್ಣ ತಾಂಬ್ರಗುಂಡಿ, ಹನುಮಂತ ಜಂತ್ಲಿ, ಮರಿಯಜ್ಜ ಸಿದ್ದಣ್ಣವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.