ಒಳಮೀಸಲಾತಿ ವರ್ಗೀಕರಣ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಬಂಜಾರರು ಗುರುವಾರ ಹೋಳಿ ಹಬ್ಬದ ಸಾಂಪ್ರದಾಯಿಕ ಪದಗಳನ್ನು ಹಾಡುತ್ತ ಪ್ರತಿಭಟನೆ ನಡೆಸಿದರು
ಗದಗ: ಒಳಮೀಸಲಾತಿ ವರ್ಗೀಕರಣ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿಯು ವಿವಿಧ ಬಂಜಾರ ಸಂಘಟನೆಗಳ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ 12ನೇ ದಿನಕ್ಕೆ ಕಾಲಿಟ್ಟಿದೆ.
ಸೇವಾಲಾಲ್ ನಗರ, ಹುಲಕೋಟಿ, ಜಾಲವಾಡಗಿ, ಶೆಟ್ಟಿಗೇರಿ, ನೀಲೂಗಲ್, ದೊಡ್ಡೂರ, ನೆಲ್ಲೂರ ತಾಂಡಾಗಳ ನೂರಾರು ಬಂಜಾರರು ಗುರುವಾರ ಹೋಳಿ ಹಬ್ಬದ ಸಾಂಪ್ರದಾಯಿಕ ಪದಗಳನ್ನು ಹಾಡುತ್ತಾ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅವೈಜ್ಞಾನಿಕ ವರ್ಗೀಕರಣದ ಮೂಲಕ ಸರ್ಕಾರ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು.
ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಾಂತ ಅಂಗಡಿ ಮಾತನಾಡಿ, ‘12 ದಿನಗಳಿಂದ ಜಿಲ್ಲೆಯ 72 ತಾಂಡಾಗಳ ನಾಯಕರು, ಡಾವ್, ಕಾರಭಾರಿ, ಪಂಚರ ಸಮ್ಮುಖದಲ್ಲಿ ಅಹೋರಾತ್ರಿ ಧರಣಿಗೆ ಕುಳಿತಿದ್ದೇವೆ. ಆದರೆ, ನಮ್ಮತ್ತ ಗಮನಹರಿಸದ ಸಚಿವರು, ಸರ್ಕಾರ ದಮನಿತರ ನೋವುಗಳನ್ನು ಹತ್ತಿಕ್ಕುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಜಿಲ್ಲೆಯ 72 ತಾಂಡಾಗಳ ನಾಯಕರು, ಡಾವ್, ಕಾರಭಾರಿ, ಪಂಚರು ಹಾಗೂ ವಿವಿಧ ಸಂಘಟನೆಯ ಮುಖಂಡ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಡಳಿತದ ಎದುರು ಗೋರ್ ಬಂಜಾರ ನಸಾಭ ಮಹಾ ಪಂಚಾಯತ್ ಬಹಿರಂಗ ಸಮಾವೇಶ ನಡೆಸುವ ಮೂಲಕ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು’ ಎಂದರು.
ಮುಖಂಡರಾದ ಕೃಷ್ಣಪ್ಪ ಲಮಾಣಿ, ನೂರಪ್ಪ ನಾಯಕ, ಕೇಶಪ್ಪ ನಾಯಕ್, ಭೋಜಪ್ಪ ಲಮಾಣಿ, ಡಿ.ಡಿ.ಪೂಜಾರಿ, ಬಾಲು ರಾಠೋಡ್, ರವಿ ಲಮಾಣಿ, ಭೀಮಪ್ಪ ಲಮಾಣಿ, ರಾಜು ನಾಯಕ, ಧನ್ನುರಾಮ ತಂಬೂರಿ, ಐ.ಎಸ್ ಪೂಜಾರ, ಲಕ್ಷ್ಮಣ್ ಜಾಧವ್, ಕುಬೇರಪ್ಪ ಪವಾರ್, ಸಂತೋಷ್ ಪವಾರ್, ಸಂತೋಷ್ ಲಮಾಣಿ, ಸೋಮಪ್ಪ ಪೂಜಾರಿ, ಪರಮೇಶ ಲಮಾಣಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕೊಲಂಬೊ ಸಮಾಜಕ್ಕೆ ನ್ಯಾಯ ದೊರಕಿಸಿಕೊಡದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಮೂಲಕ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವುದು ನಿಶ್ಚಿತರವಿಕಾಂತ ಅಂಗಡಿ ಮುಖಂಡ