
ಗದಗ: ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಛಾಪು ಮೂಡಿಸಿರುವ ಇಸ್ರೊ ವಿಜ್ಞಾನಿ ಡಾ. ರಾಮನಗೌಡ ವಿ. ನಾಡಗೌಡ ಅವರಿಗೆ ವಿಜ್ಞಾನ ಹಾಗೂ ತಂತ್ರಜ್ಞಾನ ವಿಭಾಗದಿಂದ 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಪ್ರಸ್ತುತ ಅವರು ಯು.ಆರ್.ರಾವ್ ಉಪಗ್ರಹ ಕೇಂದ್ರದ ಯೋಜನಾ ವಿಭಾಗದ ಸಹ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಗದಗ ಜಿಲ್ಲೆಯಿಂದ ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ಜಿಲ್ಲೆಯ ಜನತೆಗೆ ಖುಷಿ ತರಿಸಿದೆ.
ಡಾ. ರಾಮನಗೌಡ ವಿ. ನಾಡಗೌಡ ಅವರು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಅವರಾದಿ ಗ್ರಾಮದವರು. ತಂದೆ ಕೃಷಿಕರು. ತಾಯಿ ಗೃಹಿಣಿ. ವಿದ್ಯಾಭ್ಯಾಸ, ಉದ್ಯೋಗ ಸಂಬಂಧಿ ಚಟುವಟಿಕೆಗಳ ಕಾರಣದಿಂದ ಇವರ ನಂಟು ಧಾರವಾಡ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳೊಂದಿಗೆ ಬೆಸೆದುಕೊಂಡಿದೆ. ಕಳೆದ ವರ್ಷ ಗದಗ ನಗರದಲ್ಲಿ ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಸೇರಿದಂತೆ ಖ್ಯಾತನಾಮ ವಿಜ್ಞಾನಿಗಳೆನ್ನೆಲ್ಲಾ ಒಂದೆಡೆ ಸೇರಿಸಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಆಚರಿಸಿದ್ದನ್ನು ಸ್ಮರಿಸಬಹುದು.
‘ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಡಾ. ರಾಮನಗೌಡ ವಿ. ನಾಡಗೌಡ ಅವರು ಕರ್ನಾಟಕದ ಗ್ರಾಮೀಣ ಪ್ರತಿಭೆಗಳನ್ನು ಉತ್ತೇಜಿಸುವ ಮೂಲಕ ವಿಜ್ಞಾನ ಲೋಕದಲ್ಲಿ ಹೊಸಪೀಳಿಗೆಯ ನಾಯಕರನ್ನು ರೂಪಿಸುತ್ತಿದ್ದಾರೆ’ ಎಂದು ಗದುಗಿನ ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ವಿ.ನಾಡಗೌಡ ತಿಳಿಸಿದ್ದಾರೆ.
‘ರೈತನ ಮಗನಾಗಿ ಬಾಲ್ಯವನ್ನು ಹಳ್ಳಿಯಲ್ಲಿ ಕಳೆದರೂ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಜ್ಞಾನ ಭಂಡಾರವನ್ನು ರಾಷ್ಟ್ರಿಯ ಬಾಹ್ಯಾಕಾಶ ದಿನ, ಇಸ್ರೋ ರೋಬೋಟಿಕ್ಸ್, ಕನ್ನಡ ತಾಂತ್ರಿಕ ಕಮ್ಮಟ, ವಿಶ್ವ ಬಾಹ್ಯಾಕಾಶ ದಿನ ಸೇರಿದಂತೆ ಅನೇಕ ಪ್ರೇರಣಾದಾಯಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲರಿಗೂ ತಲುಪಿಸಿದ್ದಾರೆ’ ಎಂದು ತಿಳಿಸಿದರು.
‘ಡಾ. ರಾಮನಗೌಡ ವಿ. ನಾಡಗೌಡ ಸುರತ್ಕಲ್‌ನ ಎನ್‌ಐಟಿ ಪದವೀಧರರು. ಎಂಟೆಕ್ ಮುಗಿಸಿದ ಬಳಿಕ ದೇಶ ಸೇವೆಯ ಹಂಬಲದಿಂದ 1989ರಲ್ಲಿ ಇಸ್ರೊ ಸೇರಿದರು. ಕಾರ್ಟೊಸಾಟ್-1, ಇನ್ಸಾಟ್-4ಬಿ, ಆಸ್ಟ್ರೋಸಾಟ್, ಚಂದ್ರಯಾನ, ಮಂಗಳಯಾನ, ರೀಸಾಟ್ ಸಮೂಹ (ದೇಶದ ಗಡಿಯ ಮೇಲೆ ಕಣ್ಗಾವಲಿಡಲು ಬಳಸುವ ತಂತ್ರಜ್ಞಾನ), ಆದಿತ್ಯ ಎಲ್1, ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್ (ಸ್ಪೆಡೆಕ್ಸ್), ನಿಸಾರ್ ಮತ್ತು ಗಗನಯಾನಗಳಂತಹ ಹೆಗ್ಗುರುತಿನ ಉಪಗ್ರಹಗಳ ಯಶಸ್ವಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ’ ಎಂದು ತಿಳಿಸಿದ್ದಾರೆ.
‘ಉಪಗ್ರಹಗಳ ಜೋಡಣೆ, ಪರೀಕ್ಷೆ ಮತ್ತು ದೃಢೀಕರಣಕ್ಕಾಗಿ ಅತ್ಯಾಧುನಿಕ ಪ್ರಯೋಗಾಲಯ ನಿರ್ಮಾಣ, ಉನ್ನತ ತಾಂತ್ರಿಕ ಪ್ರಕ್ರಿಯೆಗಳ ಅಳವಡಿಕೆ ಮತ್ತು ಸ್ವದೇಶೀಕರಣದ ಮೂಲಕ ಸಾವಿರಾರು ಕೋಟಿ ವೆಚ್ಚವನ್ನು ಉಳಿತಾಯ ಮಾಡಿರುವುದು ಇವರ ಮಹತ್ತರ ಸಾಧನೆಗಳಲ್ಲಿ ಒಂದಾಗಿದೆ. ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಗೊಂಡ ರೀಸಾಟ್ ಉಪಗ್ರಹಗಳು ದೇಶದ ಭದ್ರತೆಗೆ ಹಗಲು-ರಾತ್ರಿ ಕಣ್ಗಾವಲಾಗಿವೆ. ಇತ್ತೀಚಿನ, ಆಪರೇಷನ್ ಸಿಂದೂರ ಯಶಸ್ಸಿನಲ್ಲಿಯೂ ಈ ಉಪಗ್ರಹಗಳ ಪಾತ್ರ ಪ್ರಮುಖವಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಸ್ತುತ ಅವರು ಮಂಗಳ ಗ್ರಹದಲ್ಲಿ ಭಾರತೀಯ ನೌಕೆಯನ್ನು ಇಳಿಸುವ ಯೋಜನೆ, ಶುಕ್ರ ಗ್ರಹದ ಸಂಶೋಧನೆ, ಇಸ್ರೋ ಸರ್ವಿಸರ್ ಮತ್ತು ಇನ್ಸ್ಪೆಕ್ಟರ್ ಯೋಜನೆಗಳು, ಭಾರತೀಯ ಅಂತರಿಕ್ಷ ನಿಲ್ದಾಣ ಯೋಜನೆ ಮತ್ತು ಸರಣಿ ಚಂದ್ರಯಾನ ಮಿಷನ್‌ಗಳು ಸೇರಿದಂತೆ ದೇಶದ ಭವಿಷ್ಯದ ಬಾಹ್ಯಾಕಾಶ ಗುರಿಗಳನ್ನು ಯಶಸ್ವಿಗೊಳಿಸಲು ನವೀನ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯ ಸರ್ಕಾರವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿ ಖುಷಿ ತಂದಿದೆ. ಆದರೆ ಗದಗ ಜಿಲ್ಲೆಯಿಂದ ಏಕೆ ಆಯ್ಕೆ ಮಾಡಿದ್ದಾರೆ ಎಂಬುದು ನನಗೂ ಗೊತ್ತಿಲ್ಲ.ಡಾ. ರಾಮನಗೌಡ ವಿ.ನಾಡಗೌಡ ವಿಜ್ಞಾನಿ

ರೈತನ ಮಗನಾಗಿ ಜನಿಸಿ ಅಂತರಿಕ್ಷ ತಂತ್ರಜ್ಞಾನ ಕ್ಷೇತ್ರದ ಶ್ರೇಷ್ಠ ವಿಜ್ಞಾನಿಯಾಗಿ ಬೆಳೆದಿರುವ ಡಾ. ರಾಮನಗೌಡ ವಿ.ನಾಡಗೌಡ ಅವರ ಜೀವನಯಾನ ಯುವಜನತೆಗೆ ಸ್ಫೂರ್ತಿ ತರುವಂತಹದ್ದು.ಪ್ರೊ. ಸುರೇಶ ವಿ.ನಾಡಗೌಡರ ಕುಲಪತಿ
ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಸ್ಫೂರ್ತಿ
‘ಬಾಹ್ಯಾಕಾಶ ವಿಜ್ಞಾನ ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ಆಧರಿತ ಕ್ಷೇತ್ರಗಳಲ್ಲಿ ನನ್ನ ಸಂಸ್ಥೆ ದೇಶ ಹಾಗೂ ಜನಸಾಮಾನ್ಯರಿಗೆ ಮಾಡಿದ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಖುಷಿ ಕೊಟ್ಟಿದೆ. ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಈ ಪ್ರಶಸ್ತಿ ಶಕ್ತಿ ತುಂಬಲಿದೆ’ ಎಂದು ವಿಜ್ಞಾನಿ ಡಾ. ರಾಮನಗೌಡ ವಿ. ನಾಡಗೌಡ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ‘ವಿಜ್ಞಾನ ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಜನ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರನ್ನು ತಲುಪಿ ಅವರಲ್ಲಿ ವಿಜ್ಞಾನದ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿದ ತೃಪ್ತಿ ಇದೆ. ಈ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು ಇನ್ನೂ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.