
ನರಗುಂದ: ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ತತ್ತರಿಸಿ ಹೋದ ತಾಲ್ಲೂಕಿನ ರೈತರಿಗೆ ಈಗ ಹಿಂಗಾರು ಹಂಗಾಮಿನಲ್ಲಿ ಮತ್ತೊಂದು ಸಂಕಷ್ಟ ಎದುರಾಗಿದೆ. ತಾಲ್ಲೂಕಿನ ಕೆಳ ಹಂತದ ಮಲಪ್ರಭಾ ಕಾಲುವೆಗಳಿಗೆ ನವಿಲುತೀರ್ಥ ಜಲಾಶಯದ ನೀರು ಹರಿಯದ ಪರಿಣಾಮ ಬೆಳೆಗಳು ಒಣಗುತ್ತಿವೆ.
ಹದಲಿ, ಖಾನಾಪುರ, ಗಂಗಾಪುರ, ರಡ್ಡೇರನಾಗನೂರ ಬಳಿಯ ಬೆಣ್ಣೆಹಳ್ಳಗಳಿಗೆ ಜಾಕ್ವೆಲ್‌ಗಳನ್ನು ನಿರ್ಮಿಸಲಾಗಿದೆ. ಆದರೆ ಅವುಗಳು ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಕಾಲುವೆಗಳಿಗೆ ನೀರಿಲ್ಲದೇ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ತಾಲ್ಲೂಕಿನಲ್ಲಿ ಮಲಪ್ರಭಾ ನದಿಗೆ ಮತ್ತು ಬೆಣ್ಣಿಹಳ್ಳಕ್ಕೆ ಸೇರಿದಂತೆ ಒಟ್ಟು 10 ಏತ ನೀರಾವರಿ ಇವೆ. ಈ ಏತ ನೀರಾವರಿ ವ್ಯಾಪ್ತಿಯಲ್ಲಿನ ಬೆಳೆಗಳಿಗೆ ನೀರು ಸಿಗಬೇಕೆಂದರೆ ಜಾಕ್ವೆಲ್ ಮೂಲಕ ಮೇಲ್ಬಾಗದ ಭೂಮಿಗಳಿಗೆ ನೀರನ್ನು ಲಿಫ್ಟ್ ಮಾಡಬೇಕು. ಆದರೆ, 14ನೇ ಹಂಚಿಕೆಯ ಹದಲಿ-ಗಂಗಾಪೂರ ಮತ್ತು ಹದಲಿ-ಮದುಗುಣಿಕಿ ಈ ಎರಡು ಜಾಕ್ವೆಲ್‌ಗಳು ಬಂದ್ ಆಗಿವೆ. ಜಾಕ್ವೆಲ್‌ಗಳು ಸರಿಯಾಗಿ ನಿರ್ವಹಣೆ ಆಗದಿರುವುದಕ್ಕೆ ನೀರಾವರಿ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷವಷ್ಟೇ ವೈಂಡಿಂಗ್ ವೈರ್, ಟಿಸಿ ಕಳುವಾಗಿದ್ದವು. ಕಳೆದ ವರ್ಷ ₹25 ಲಕ್ಷ ವೆಚ್ಚದಲ್ಲಿ ಎರಡು ಜಾಕ್ವೆಲ್‌ಗಳನ್ನು ದುರಸ್ತಿ ಮಾಡಲಾಗಿತ್ತು. ಆದರೆ ಈಗ ನಿರ್ವಹಣೆ ಕೊರತೆಯಿಂದ ಸಂಪೂರ್ಣ ಬಂದ್ ಆಗಿವೆ. ನಿರ್ವಹಣೆಗೆ ಅನುದಾನವೂ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಇದನ್ನು ನೋಡಿದರೆ ಈ ವರ್ಷ ಮತ್ತೆ ಬೆಳೆಗಳು ಒಣವುದು ನಿಶ್ಚಿತ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
‘ಜಾಕ್ವೆಲ್‌ಗಳನ್ನು ದುರಸ್ತಿ ಮಾಡುವಂತೆ 15 ದಿನಗಳಿಂದ ನೀರಾವರಿ ಇಲಾಖೆ, ತಹಶೀಲ್ದಾರ್ ಕಚೇರಿಗೆ ರೈತರು ಅಲೆದಾಡುತ್ತಿದ್ದಾರೆ. ಪ್ರತಿಭಟನೆಯನ್ನೂ ಮಾಡಲಾಗಿದೆ. ಮಲಪ್ರಭಾ ಕಾಲುವೆಗಳು ಹೂಳು, ಮುಳ್ಳುಕಂಟಿಯಿಂದ ತುಂಬಿವೆ. ಅವುಗಳು ದುರಸ್ತಿ ಯಾಗಿಲ್ಲ. ನೀರಾವರಿ ಇಲಾಖೆ ಸ್ಪಂದಿಸುತ್ತಿಲ್ಲ’ ಎಂದು ಭಾರತೀಯ ಕಿಸಾನ ಸಂಘದ ಜಿಲ್ಲಾ ಘಟದಕ ಅಧ್ಯಕ್ಷ ಎಸ್.ಎಸ್.ಪಾಟೀಲ ಕಿಡಿಕಾರಿದ್ದಾರೆ.
ಸವದತ್ತಿ ಬಳಿಯ ಮಲಪ್ರಭಾ ನದಿ ಸಂಪೂರ್ಣ ಭರ್ತಿಯಾದ ನಂತರದ ಹೆಚ್ಚುವರಿ ನೀರು ಮಲಪ್ರಭಾ ಕಾಲುವೆಗೆ ಬರುತ್ತದೆ. ಅದನ್ನು ನಂಬಿ ಹಿಂಗಾರು ಹಂಗಾಮಿನಲ್ಲಿ ಹತ್ತಿ, ಗೋವಿನ ಜೋಳ, ಸೂರ್ಯಕಾಂತಿ, ಗೋಧಿ, ಕಡಲೆ ಸೇರಿದಂತೆ ವಿವಿಧ ಬೆಳೆಗಳನ್ನು ಹಾಕಿದ ರೈತರು ನೀರಿಗಾಗಿ ಕಾಯುತ್ತಿದ್ದಾರೆ. ಆದರೆ, ಇಲ್ಲಿ ನೀರೇ ಬರುತ್ತಿಲ್ಲ. ಏತ ನೀರಾವರಿಯನ್ನೇ ಅವಲಂಬಿಸಿದ ಬೆಳೆಗಳ ಸ್ಥಿತಿ ಹೇಳತೀರದಾಗಿದೆ. ಇದರಿಂದ ಮೂರು ಸಾವಿರ ಎಕರೆಗಳಷ್ಟು ಭೂಮಿಯಲ್ಲಿನ ಬೆಳೆಗಳು ನೀರಿಲ್ಲದೇ ಒಣಗುವ ಸಂಭವವಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಹದಲಿ-ಮದುಗುಣಿಕಿ ಜಾಕ್ವೆಲ್ ಹದಲಿ-ಗಂಗಾಪೂರ ಜಾಕ್ವೆಲ್ ನಿರ್ವಹಣೆಗೆ ಅನುದಾನದ ಕೊರತೆ ಇದೆ. ಜತೆಗೆ ಉಳಿದ ಎಂಟು ಜಾಕ್ವೆಲ್‌ಗಳ ಪೈಪಲೈನ್ ಸಂಪೂರ್ಣ ಬದಲಾವಣೆಗಾಗಿ ಅನುದಾನ ಇದೆ. ಆದರೆ ಟೆಂಡರ್ ಹಾಕಲು ಯಾರು ಮುಂದೆ ಬರುತ್ತಿಲ್ಲ. ಇದರಿಂದ ಎಲ್ಲ ಜಾಕ್ವೆಲ್‌ಗಳು ಬಂದ್ ಆಗಿವೆ.–ಎಂ.ಎಸ್.ಓಲೇಕಾರ ಎಇಇ ಕರ್ನಾಟಕ ನೀರಾವರಿ ನಿಗಮ ನಿಯಮಿತ ನರಗುಂದ
ರೈತರ ವಿಚಾರವಾಗಿ ಸರ್ಕಾರದ ನಿರ್ಲಕ್ಷ್ಯ ಹೆಚ್ಚಾಗಿದೆ. ಕಳೆದ ವರ್ಷ ಕೂಡ ಬೆಳೆ ನಾಶಗೊಂಡಿದೆ. ಈ ವರ್ಷವೂ ಹಾನಿ ನಿಶ್ಚಿತ ಎಂಬಂತೆ ಭಾಸವಾಗುತ್ತಿದೆ. ಸರ್ಕಾರ ಜನಪ್ರತಿನಿಧಿಗಳು ರೈತರ ಕಷ್ಟಗಳಿಗೆ ಸ್ಪಂದಿಸಬೇಕು.–ಎಸ್.ಎಸ್.ಪಾಟೀಲ ಜಿಲ್ಲಾಧ್ಯಕ್ಷ ಭಾರತೀಯ ಕಿಸಾನ್ ಸಂಘ ನರಗುಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.