ADVERTISEMENT

ಮೇವಿಗೆ ಬರ: ಜಾನುವಾರು ಕಸಾಯಿಖಾನೆಗೆ!

ಕೃಷಿಯೊಂದಿಗೆ ಹೈನುಗಾರಿಕೆ ನಡೆಸುತ್ತಿರುವ ರೈತರಿಗೆ ಸಂಕಷ್ಟ

ನಾಗರಾಜ ಎಸ್‌.ಹಣಗಿ
Published 17 ಮೇ 2019, 19:45 IST
Last Updated 17 ಮೇ 2019, 19:45 IST
ಲಕ್ಷ್ಮೇಶ್ವರದ ದನದ ಸಂತೆಗೆ ಶುಕ್ರವಾರ ರೈತರು ಮಾರಾಟಕ್ಕೆ ತಂದಿದ್ದ ಎತ್ತುಗಳು
ಲಕ್ಷ್ಮೇಶ್ವರದ ದನದ ಸಂತೆಗೆ ಶುಕ್ರವಾರ ರೈತರು ಮಾರಾಟಕ್ಕೆ ತಂದಿದ್ದ ಎತ್ತುಗಳು   

ಲಕ್ಷ್ಮೇಶ್ವರ: ಕಳೆದ ಮುಂಗಾರು ಮತ್ತು ಹಿಂಗಾರಿನಲ್ಲಿ ಮಳೆ ಕೈಕೊಟ್ಟಿದ್ದರಿಂದ ಈ ಬಾರಿ ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ರೈತರು ದನಕರುಗಳನ್ನು ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಮುಂಗಾರು, ಹಿಂಗಾರಿನಲ್ಲಿ ಬಿತ್ತನೆ ಆಗಿದ್ದರೆ, ಬೇಸಿಗೆಯಲ್ಲಿ ಒಣ ಮೇವು ಜಾನುವಾರುಗಳಿಗೆ ಲಭಿಸುತ್ತಿತ್ತು. ಆದರೆ, ಈಗ ಮೇವಿಗೆ ತೀವ್ರ ಕೊರತೆ ಇದ್ದು, ದನಕರುಗಳನ್ನು ಹೇಗಪ್ಪಾ ಸಾಕೋದು ಎಂಬ ಚಿಂತೆ ರೈತರನ್ನು ಕಂಗಾಲಾಗಿಸಿದೆ. ರೈತರು ಮನಸ್ಸು ಗಟ್ಟಿ ಮಾಡಿಕೊಂಡು ಪ್ರೀತಿಯಿಂದ ಸಾಕಿದ ತಮ್ಮ ಒಡನಾಡಿಗಳಾದ ಎತ್ತು, ಎಮ್ಮೆ, ಆಕಳುಗಳನ್ನು ಮಾರುತ್ತಿದ್ದಾರೆ. ಪ್ರತಿ ಶುಕ್ರವಾರ ಪಟ್ಟಣದಲ್ಲಿ ದನಗಳ ಸಂತೆ ನಡೆಯುತ್ತಿದ್ದು, ವಾರದಿಂದ ವಾರಕ್ಕೆ ಮಾರಾಟಕ್ಕೆ ತರುತ್ತಿರುವ ಜಾನುವಾರುಗಳ ಸಂಖ್ಯೆ ಏರುತ್ತಿದೆ.

ಪಶು ಸಂಗೋಪನಾ ಇಲಾಖೆ ಅಂಕಿ ಅಂಶದ ಪ್ರಕಾರ ತಾಲ್ಲೂಕಿನಲ್ಲಿ 32,490ಕ್ಕೂ ಹೆಚ್ಚು ಜಾನುವಾರುಗಳಿವೆ. ಇದರಲ್ಲಿ ಎಮ್ಮೆಗಳ ಸಂಖ್ಯೆ 10 ಸಾವಿರಕ್ಕಿಂತಲೂ ಹೆಚ್ಚಿದೆ. ರೈತರ ಅಸಾಯಕತೆ ಕಸಾಯಖಾನೆಯವರಿಗೆ ವರವಾಗಿದೆ. ಕಡಿಮೆ ಬೆಲೆಯಲ್ಲಿ ದನಕರುಗಳನ್ನು ಖರೀದಿಸಿ ಸಾಗಿಸುತ್ತಿದ್ದಾರೆ.

ADVERTISEMENT

ಲಕ್ಷ್ಮೇಶ್ವರ ತಾಲ್ಲೂಕಿನ ಅಡರಕಟ್ಟಿ, ಗೊಜನೂರು, ಅಕ್ಕಿಗುಂದ, ಯಳವತ್ತಿ ಸೇರಿದಂತೆ 14 ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ರೈತರು ಕೃಷಿಯೊಂದಿಗೆ ಹೈನುಗಾರಿಕೆ ನಡೆಸುತ್ತಿದ್ದಾರೆ. ಪ್ರತಿ ಹಳ್ಳಿಯಲ್ಲೂ ಹಾಲು ಉತ್ಪಾದಕರ ಸಹಕಾರಿ ಸಂಘಗಳಿವೆ. ಆದರೆ, ಇತ್ತೀಚೆಗೆ ಹಾಲಿನ ಉತ್ಪಾದನೆ ಗಣನೀಯವಾಗಿ ಕುಸಿದಿದೆ.

ಮುಂಗಾರು ಹಂಗಾಮು ಆರಂಭದಲ್ಲಿ ಒಂದು ಲಕ್ಷ ರೂಪಾಯಿ ಕಿಮ್ಮತ್ತಿನ ಜೋಡೆತ್ತುಗಳನ್ನು ಸದ್ಯ ₹ 45 ರಿಂದ ₹50 ಸಾವಿರಕ್ಕೆ ಕೇಳುವವರಿಲ್ಲದಂತಾಗಿದೆ.

‘ಈ ವರ್ಷ ಮಳಿ ಇಲ್ಲದ್ದಕ್ಕ ಅಡವ್ಯಾಗ ದನಕರಕ್ಕ ಮೇವಿಲ್ಲ. ಕುಡ್ಯಾಕ ನೀರಿಲ್ಲ. ಹಿಂಗಾಗಿ ಬಹಳಷ್ಟು ರೈತರು ಜಾನುವಾರು ಮಾರಾಕತ್ತಾರ. ಕಟಗರು ದನಾ ಖರೀದಿ ಮಾಡಾಕತ್ತಾರ್ರೀ’ ಎಂದು ರೈತ ಈರಪ್ಪ ತಪ್ಪಲದ ಹೇಳಿದರು.

ಮಳೆ ಕೈಕೊಟ್ಟಿದ್ದರಿಂದ ಮುಂಗಾರಿನಲ್ಲಿ ಹೈಬ್ರೀಡ್ ಹಾಗೂ ಹಿಂಗಾರಿನ ಬಿಳಿಜೋಳ ರೈತರ ಕೈ ಹಿಡಿದಿಲ್ಲ. ಪ್ರಮುಖವಾಗಿ ಜೋಳದ ದಂಟು ಬೇಸಿಗೆಯಲ್ಲಿ ಜಾನುವಾರುಗಳಿಗೆ ಪ್ರಮುಖ ಆಹಾರ. ಇದರೊಂದಿಗೆ ಶೇಂಗಾ ಹೊಟ್ಟು ಸಹ ಅವುಗಳ ಹೊಟ್ಟೆ ತುಂಬಿಸುತ್ತಿದ್ದವು. ಆದರೆ ಈ ವರ್ಷ ಶೇಂಗಾ ಸರಿಯಾಗಿ ಬೆಳೆದಿಲ್ಲ. ಹೀಗಾಗಿ ಶೇಂಗಾ ಹೊಟ್ಟಿನ ಕೊರತೆಯೂ ರೈತರನ್ನು ಚಿಂತೆಗೀಡು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.