ADVERTISEMENT

ಗದಗ | ರಾಜ್ಯದಲ್ಲಿರುವುದು ಕಿವುಡ, ಮೂಕ ಸರ್ಕಾರ: ವೆಂಕನಗೌಡ ಗೋವಿಂದಗೌಡ್ರ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 4:23 IST
Last Updated 23 ಆಗಸ್ಟ್ 2025, 4:23 IST
ಉತ್ತರ ಕರ್ನಾಟಕ ಮಹಾಸಭಾ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗದಗ ಜಿಲ್ಲಾಡಳಿತ ಕಚೇರಿ ಎದುರು ನಡೆಸುತ್ತಿರುವ ಬಗರ್ ಹುಕುಂ ಸಾಗುವಳಿದಾರರ ಅಹೋರಾತ್ರಿ ಧರಣಿ ಶುಕ್ರವಾರ ಐದನೇ ದಿನ ಪೂರೈಸಿತು
ಉತ್ತರ ಕರ್ನಾಟಕ ಮಹಾಸಭಾ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗದಗ ಜಿಲ್ಲಾಡಳಿತ ಕಚೇರಿ ಎದುರು ನಡೆಸುತ್ತಿರುವ ಬಗರ್ ಹುಕುಂ ಸಾಗುವಳಿದಾರರ ಅಹೋರಾತ್ರಿ ಧರಣಿ ಶುಕ್ರವಾರ ಐದನೇ ದಿನ ಪೂರೈಸಿತು   

ಗದಗ: ‘ರಾಜ್ಯ ಸರ್ಕಾರ ರೈತರನ್ನು ಸಂಪೂರ್ಣ ಕಡೆಗಣಿಸಿದ್ದು, ಅವರ ಯಾವುದೇ ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ. ರೈತರ ಪಾಲಿಗೆ ಇದು ಕಿವುಡ, ಕುರುಡ ಹಾಗೂ ಮೂಕ ಸರ್ಕಾರವಾಗಿದೆ’ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಟೀಕಿಸಿದರು.

ಉತ್ತರ ಕರ್ನಾಟಕ ಮಹಾಸಭಾ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗದಗ ಜಿಲ್ಲಾಡಳಿತ ಕಚೇರಿ ಎದುರು ನಡೆಸುತ್ತಿರುವ ಬಗರ್ ಹುಕುಂ ಸಾಗುವಳಿದಾರರ ಅಹೋರಾತ್ರಿ ಧರಣಿಗೆ ಶುಕ್ರವಾರ ಬೆಂಬಲ ನೀಡಿ ಮಾತನಾಡಿದರು.

‘ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ರೈತರು ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಆಡಳಿತಯಂತ್ರ ಈವರೆಗೆ ಸ್ಪಂದಿಸಿಲ್ಲ’ ಎಂದು ಕಿಡಿಕಾರಿದರು.

ADVERTISEMENT

ಜೆಡಿಎಸ್ ಪಕ್ಷ ಮಾತ್ರ ರೈತರ ಹಿತ ಕಾಯುತ್ತ ಬಂದಿದೆ. ಮುಂದೆಯೂ ಕಾಯುತ್ತದೆ. ರೈತರನ್ನು ಸಂತೈಸಲು ಕೇವಲ ಭಾಷಣ ಮಾಡಿ ಹೋದರೆ ಆಗುವುದಿಲ್ಲ. ರೈತರ ಬಗ್ಗೆ ಕಾಳಜಿ ಇದ್ದರೆ ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರ ನೀಡಬೇಕು. ಚುನಾವಣೆಗೆ ಮುಂಚೆ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಭರವಸೆಯನ್ನು ಈಡೇರಿಸಬೇಕು’ ಎಂದು ಆಗ್ರಹಿಸಿದರು.

‘ಜಗತ್ತಿನಲ್ಲಿ ಯಾವುದೇ ಸಮಸ್ಯೆ ಎದುರಾದರೂ ಅದು ಮೊದಲು ತಟ್ಟುವುದೇ ರೈತರಿಗೆ. ರೈತ ಎಲ್ಲವನ್ನು ನುಂಗಿಕೊಂಡು ಯಾವುದೇ ಜಾತಿ, ಮತ, ಭೇದವಿಲ್ಲದೆ ತನ್ನ ಕಾಯಕದ ಮೂಲಕ ಜನರ ಹೊಟ್ಟೆ ತುಂಬಿಸುತ್ತಿದ್ದಾನೆ. ರೈತರ ಸಮಸ್ಯೆ ಕುರಿತಾಗಿ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಈ ಹೋರಾಟಕ್ಕೆ ಜಯ ಸಿಗಲು ನೆರವಾಗುತ್ತೇವೆ’ ಎಂದು ಭರವಸೆ ನೀಡಿದರು.

ಜೆಡಿಎಸ್ ಪಕ್ಷದ ಕಾನೂನು ಘಟಕದ ಜಿಲ್ಲಾ ಅಧ್ಯಕ್ಷ ಜೋಸೆಫ್ ಉದೋಜಿ ಮಾತನಾಡಿ, ‘ರೈತರು ಯಾವುದೇ ಕಾರಣಕ್ಕೂ ಎದೆಗುಂದದೆ ಮುನ್ನುಗ್ಗಬೇಕು. ರೈತರ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು, ಸರ್ಕಾರ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು.

‘ಯಾವುದೇ ರೀತಿಯ ಕಾನೂನು ಹೋರಾಟಕ್ಕೆ ಕಾನೂನಿನ ನೆರವು ನೀಡಲು ಜೆಡಿಎಸ್ ಪಕ್ಷ ಸದಾ ರೈತರೊಂದಿಗೆ ಇರುತ್ತದೆ’ ಎಂದು ಭರವಸೆ ನೀಡಿದರು.

ಜೆಡಿಎಸ್‌ ಮುಖಂಡರಾದ ಬಸವರಾಜ ಅಪ್ಪಣ್ಣವರ, ರಮೇಶ್ ಹುಣಸಿಮರದ, ಸಂತೋಷ್ ಪಾಟೀಲ, ಪ್ರಫುಲ್ ಪುಣೇಕರ, ಜಿ.ಕೆ. ಕೊಳ್ಳಿಮಠ, ಶರಣಪ್ಪ ಹೂಗಾರ, ಸಿದ್ದಯ್ಯ ಹೊಂಬಾಳಿಮಠ, ಮಂಜುಳಾ ಮೇಟಿ, ರಾಜೇಶ್ವರಿ ಹೂಗಾರ, ಶರಣಪ್ಪ ತೂಲಿ, ಅಭಿಷೇಕ್ ದೇಸಾಯಿ, ಲಲಿತಾ ಕಲ್ಲಪ್ಪನವರ, ಅಭಿಷೇಕ್ ಕಂಬಳಿ, ಜಯರಾಜ ವಾಲಿ ಇದ್ದರು.

ರೈತ ಮುಖಂಡರಾದ ಬಸವಣೇಪ್ಪ ಚಿಂಚಲಿ, ಎನ್.ಟಿ. ಪೂಜಾರ ಸೇರಿದಂತೆ ಜಿಲ್ಲೆಯ ಹಲವು ರೈತ ಸಂಘಟನೆಯ ಮುಖಂಡರು ಮತ್ತು ರೈತರು ಇದ್ದರು.

ರೈತರ ಹೋರಾಟಕ್ಕೆ ಜೆಡಿಎಸ್ ಪಕ್ಷ ಹೆಗಲುಕೊಟ್ಟು ನಿಲ್ಲುತ್ತದೆ. ಈ ಹೋರಾಟ ಕೊನೆಗೊಳ್ಳುವವರೆಗೂ ರೈತರು ಯಾವುದೇ ಆಶ್ವಾಸನೆಗಳಿಗೆ ಮರುಳಾಗಬಾರದು
ವೆಂಕನಗೌಡ ಗೋವಿಂದಗೌಡ್ರ ಜೆಡಿಎಸ್‌ ರಾಜ್ಯ ವಕ್ತಾರ
ರೈತರ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು. ಅವರು ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದು ಜಿಲ್ಲಾಡಳಿತ ಅವರನ್ನು ಕಡೆಗಣಿಸಬಾರದು
ಚಂದ್ರಕಾಂತ ಚವ್ಹಾಣ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಕರ್ನಾಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.