
ಶಿರಹಟ್ಟಿ: ಸಮಾಜದಲ್ಲಿ ನೂರಾರು ವರ್ಷಗಳಿಂದ ಬೇರು ಬಿಟ್ಟಿರುವ ಜೀತಪದ್ಧತಿಯನ್ನು ಪ್ರಸ್ತುತ ಕಾನೂನಿನಡಿ ನಿರ್ಮೂಲನೆ ಮಾಡಬೇಕಾದದ್ದು ನಮ್ಮ ಕರ್ತವ್ಯವಾಗಿದೆ ಎಂದು ದಿವಾಣಿ ನ್ಯಾಯಾಧೀಶ ಸತೀಶ ಎಂ ಅಭಿಪ್ರಾಯಪಟ್ಟರು.
ಸ್ಥಳೀಯ ಎಫ್.ಎಂ.ಡಬಾಲಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ತಾಲೂಕ ಕಾನೂನು ಸೇವೆಗಳ ಸಮಿತಿ ಲಕ್ಷೇಶ್ವರ, ವಕೀಲರ ಸಂಘ ಶಿರಹಟ್ಟಿ ಮತ್ತು ಲಕ್ಷೇಶ್ವರ, ಪೋಲೀಸ್ ಇಲಾಖೆ, ತಾಲೂಕ ಆಡಳಿತ, ತಾಲ್ಲೂಕು ಪಂಚಾಯತಿ, ಶಾಲಾ ಶಿಕ್ಷಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಮೀನ್ದಾರರು, ಶ್ರೀಮಂತರು ಬಡವರಿಗೆ ಸಾಲದ ರೂಪದಲ್ಲಿ ಹಣವನ್ನು ಕೊಟ್ಟು ಅದನ್ನು ತೀರಿಸಲು ಆಗದೆ ಇದ್ದಾಗ ಅದಕ್ಕೆ ಪ್ರತಿಯಾಗಿ ಬೆದರಿಕೆ ಹಾಕಿ, ಭಯಪಡಿಸಿ, ಜೀತದಾಳಾಗಿ ದುಡಿಸಿಕೊಳ್ಳುವುದು ಮತ್ತು ಆ ಹಣಕ್ಕೆ ಬಡ್ಡಿ, ಚಕ್ರಬಡ್ಡಿ ಮಾಡಿ ಅವರನ್ನು ಒತ್ತಾಯ ಪೂರ್ವಕವಾಗಿ ದುಡಿಸಿಕೊಳ್ಳುವುದು ಕ್ರೂರತೆ ಎಂದು ಹೇಳಬಹುದು.
ನೀವು ಭವಿಷ್ಯದ ನಾಗರಿಕರು ಯಾವುದೇ ರೀತಿಯ ಜೀತ ಪದ್ಧತಿಯ ಪ್ರಕರಣಗಳು ನಿಮ್ಮ ಗಮನಕ್ಕೆ ಬಂದಲ್ಲಿ, ಸಂಬಂಧಿಸಿದ ಇಲಾಖೆಗಳು ಹಾಗೂ ಸಹಾಯವಾಣಿಗಳಿಗೆ ಮಾಹಿತಿ ನೀಡಬೇಕು. ಇದರಿಂದ ಜೀತ ಪದ್ಧತಿಗೆ ಒಳಗಾದವರಿಗೆ ನ್ಯಾಯ ದೊರಕುವಂತ ವ್ಯವಸ್ಥೆ ನಿರ್ಮಾಣವಾಗುತ್ತದೆ. ಈ ಹಿನ್ನಲೆಯಲ್ಲಿ ಸಮಾಜವನ್ನು ಉತ್ತಮವಾಗಿ ಕಟ್ಟುವಲ್ಲಿ ಮತ್ತು ಸಮಾಜದ ಕೆಟ್ಟ ಪಿಡುಗು ನಿರ್ಮೂಲನೆ ಮಾಡುವಲ್ಲಿ ಮಕ್ಕಳು ಹಾಗೂ ಸಮಾಜದ ನಾಗರಿಕರು ಕೈಜೋಡಿಸಬೇಕು ಎಂದು ಹೇಳಿದರು.
ಮುಖ್ಯೋಪಾಧ್ಯಾಯ ಆರ್.ಎಫ್.ಬಟಗುರ್ಕಿ, ಸಹಾಯಕ ಅಭಿಯೋಜಕಿ ಕು. ಹೀನಾಕೌಸರ್ ಗಂಜಿಹಾಳ, ಪಿಎಸ್ಐ ಈರಪ್ಪ ರಿತ್ತಿ, ವಕೀಲರ ಸಂಘದ ಅಧ್ಯಕ್ಷ ಎಸ್.ವೈ.ಗೊಬ್ಬರಗುಂಪಿ, ಎಂ.ಕೆ.ಚೌಡಿ, ಶಿಕ್ಷಕಿ ರೇಣುಕಾ ಜಗಂಡಬಾವಿ, ಎನ್.ಆರ್. ಉಡಚಗೊಂಡ, ಬಿ.ಕೆ. ಕರಕಣ್ಣನವರು, ಸುನಿಲ್ ಲಮಾಣಿ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.