ADVERTISEMENT

ನೆಮ್ಮದಿಗೆ ಭಗವಂತನ ನಾಮಸ್ಮರಣೆ ಇರಲಿ: ನಿರಂಜನಾನಂದಪುರಿ ಸ್ವಾಮೀಜಿ

ಕಾರ್ತಿಕೋತ್ಸವ: ಸಾಧಕರಿಗೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2024, 12:51 IST
Last Updated 14 ಡಿಸೆಂಬರ್ 2024, 12:51 IST
ಲಕ್ಷ್ಮೇಶ್ವರದ ಬೀರೇಶ್ವರ ದೇವಸ್ಥಾನದಲ್ಲಿ 11ನೇ ವರ್ಷದ ಕಾರ್ತಿಕೋತ್ಸವನ್ನು ಮಾಜಿ ಶಾಸಕ ರಾಮಣ್ಣ ಲಮಾಣಿ ಮತ್ತು ರಾಮಕೃಷ್ಣ ದೊಡ್ಡಮನಿ ಉದ್ಘಾಟಿಸಿದರು
ಲಕ್ಷ್ಮೇಶ್ವರದ ಬೀರೇಶ್ವರ ದೇವಸ್ಥಾನದಲ್ಲಿ 11ನೇ ವರ್ಷದ ಕಾರ್ತಿಕೋತ್ಸವನ್ನು ಮಾಜಿ ಶಾಸಕ ರಾಮಣ್ಣ ಲಮಾಣಿ ಮತ್ತು ರಾಮಕೃಷ್ಣ ದೊಡ್ಡಮನಿ ಉದ್ಘಾಟಿಸಿದರು   

ಲಕ್ಷ್ಮೇಶ್ವರ: ‘ಜನ್ಮತಾಳಿದ ಮೇಲೆ ನಮ್ಮನ್ನು ರಕ್ಷಣೆ ಮಾಡುವುದು ನಮ್ಮ ಹಣ, ಸಂಪತ್ತು, ಜಾತಿ, ಸಮಾಜವಲ್ಲ. ಬದಲಿಗೆ ನಮ್ಮನ್ನು ರಕ್ಷಣೆ ಮಾಡುವುದು, ಮೋಕ್ಷದೆಡೆಗೆ ಕರೆದುಕೊಂಡು ಹೋಗುವುದು ಭಗವಂತನ ನಾಮಸ್ಮರಣೆಯಾಗಿದೆ. ಧಾರ್ಮಿಕ ಕಾರ್ಯಗಳು ಸಮಾಜದಲ್ಲಿ ಶಾಂತಿ ನೆಮ್ಮದಿಯನ್ನು ನೆಲೆಸುವಂತೆ ಮಾಡುತ್ತವೆ’ ಎಂದು ಕಾಗಿನೆಲೆ ಕನಕಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ಪಟ್ಟಣದ ಮ್ಯಾಗೇರಿ ಓಣಿಯ ಬೀರೇಶ್ವರ ಟ್ರಸ್ಟ್ ಕಮಿಟಿ ವತಿಯಿಂದ ಈಚೆಗೆ ಹಮ್ಮಿಕೊಳ್ಳಲಾಗಿದ್ದ 11ನೇ ವರ್ಷದ ಕಾರ್ತಿಕೋತ್ಸವ ಹಾಗೂ ವಿವಿಧ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ, ಮಾತನಾಡಿದರು.

‘ದೀಪ ಮನುಕುಲದ ಅಜ್ಞಾನ ಮತ್ತು ಅಂಧಕಾರವನ್ನು ಹೋಗಲಾಡಿಸಿ ಧರ್ಮದ ಬೆಳಕಿನೆಡೆಗೆ ಹಾಗೂ ಸನ್ಮಾರ್ಗ ತೋರಿಸುವ ದಿವ್ಯ ಶಕ್ತಿಯಾಗಿದೆ. ಕತ್ತಲೆ ಎಂಬ ಅಜ್ಞಾನ ಕಳೆದು ಸುಜ್ಞಾನದ ಬೆಳಕು ಮೂಡಿಸುವುದು ಕಾರ್ತಿಕೋತ್ಸವದ ಉದ್ದೇಶ. ಯುವ ಜನತೆ ದುಶ್ಚಟಗಳಿಗೆ ಬಲಿಯಾಗದೇ ಮೌಢ್ಯತೆಗೆಳಿಗೆ ಮನಸೋಲದೆ ಶಿಕ್ಷಣ ಕ್ರೀಡೆ, ಸಂಗೀತ, ಜಾನಪದ ಕಲೆಗಳನ್ನು ರೂಡಿಸಿಕೊಳ್ಳಬೇಕು’ ಎಂದರು.

ADVERTISEMENT

ಮಾಜಿ ಶಾಸಕರಾದ ರಾಮಣ್ಣ ಲಮಾಣಿ ಹಾಗೂ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ‘ಸಮಾಜದಲ್ಲಿ ಧಾರ್ಮಿಕ ಚಟುವಟಿಕೆಗಳು ನಡೆದರೆ ಅಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ. ಹಲವು ವರ್ಷಗಳಿಂದ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಧಾರ್ಮಿಕ ಚಟುವಟಿಕೆಗಳನ್ನು ನಿರಂತವಾಗಿ ನಡೆಸಿಕೊಂಡು ಹೋಗುವ ಹಾಲಮತ ಸಮಾಜ ಎಲ್ಲರಿಗೂ ಮಾದರಿಯಾಗಿದೆ’ ಎಂದರು.

ಬೀರೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ನಾಗರಾಜ ಕೋರಿ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಪಿಎಸ್‍ಐ ನಾಗರಾಜ ಗಡದ, ಮುಖಂಡರಾದ ನಿಂಗಪ್ಪ ಬನ್ನಿ, ಶೇಕಣ್ಣ ಕಾಳೆ, ವೀರೇಂದ್ರ ಪಾಟೀಲ್, ನೀಲಪ್ಪ ಶೇರಸೂರಿ, ಗಂಗಪ್ಪ ದುರಗಣ್ಣವರ, ನೀಲಪ್ಪ ಪ್ರಜಾರ, ಮಂಜುನಾಥ ಘಂಟಿ, ಭಾಗ್ಯಶ್ರೀ ಬಾಬಣ್ಣ, ಜಯಕ್ಕ ಕಳ್ಳಿ, ನಾಗರಾಜ ಮಡಿವಾಳರ, ಅಣ್ಣಪ್ಪ ರಾಮಗೇರಿ, ಮಂಜುನಾಥ. ಕೊಕ್ಕರಗುಂದಿ, ಶಿವಯೋಗಿ ಗಡ್ಡದೇವರಮಠ, ಯಲ್ಲಪ್ಪ ಸೂರಣಗಿ ಅಮರಪ್ಪ ಗುಡಗುಂಟಿ, ಮಲ್ಲಪ್ಪ ಗುಡಗುಂಟಿ, ಶಿದ್ದಪ್ಪ ಪೂಜಾರ, ಪುಟ್ಟಪ್ಪ ಕೋರಿ ಇದ್ದರು.

ಮಹೇಶ ಹಾರೋಗೇರಿ ಉಪನ್ಯಾಸ ನೀಡಿದರು. ವಿ.ಜಿ. ಪಡಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಧಕರನ್ನು ಹಾಗೂ ಪ್ರತಿಭಾವಂತರಿಗೆ ಸನ್ಮಾನ ನಡೆಯಿತು.

ಹುಲ್ಲೂರು ಅಮೋಘಿಮಠದ ಸಿದ್ದಯ್ಯ ಸ್ವಾಮೀಜಿ ಮಾತನಾಡಿದರು. ಇದಕ್ಕೂ ಮೊದಲು ಕಾಗಿನೆಲೆ ಶ್ರೀಗಳನ್ನು ಆಂಜನೇಯ ದೇವಸ್ಥಾನದಿಂದ ಮೆರವಣಿಗೆ ಮೂಲಕ ಬೀರೇಶ್ವರ ದೇವಸ್ಥಾನ ಕರೆತರಲಾಯಿತು.

ರಸಮಂಜರಿ ಹಾಗೂ ಡೊಳ್ಳಿನ ಪದಗಳ ಕಾರ್ಯಕ್ರಮ ಜರುಗಿತು. ಈಶ್ವರ ಮೆಡ್ಲೆರಿ, ನಾಗರಾಜ ಶಿಗ್ಲಿ, ನೀಲಪ್ಪ ಪಡಗೇರಿ, ಮಲ್ಲೇಶ ಗೊಜಗೋಜಿ ಕಾರ್ಯಕ್ರಮ ನಿರ್ವಹಿಸಿದರು. ಕಾಗಿನೆಲೆ ಕನಕಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಯನ್ನು ಸಮಾಜದ ವತಿಯಿಂದ ತುಲಾಭಾರ ಮಾಡಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.