
ಗದಗ: ‘ಭಾರತ ನೆಲದ ಸಂಸ್ಕಾರ, ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುತ್ತಿರುವ ಕನೇರಿ ಶ್ರೀಗಳಿಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿರುವುದು ಖಂಡನೀಯ. ರಾಜ್ಯ ಸರ್ಕಾರ ತಕ್ಷಣವೇ ಆ ಆದೇಶವನ್ನು ಹಿಂಪಡೆದು ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಪ್ರಶಾಂತ ಮಹಾರಾಜರು ಆಗ್ರಹಿಸಿದರು.
ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ವಿಜಯಪುರ, ಬಾಗಲಕೋಟ ಹಾಗೂ ಧಾರವಾಡ ಜಿಲ್ಲೆಗೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಶನಿವಾರ ಗದಗ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
‘ಇಲ್ಲೀವರೆಗೆ ಯಾವುದೇ ಸ್ವಾಮೀಜಿಗೆ ನಿರ್ಬಂಧ ಹೇರಿರಲಿಲ್ಲ. ಆದರೆ, ರಾಜ್ಯ ಸರ್ಕಾರ ಅಂತಹ ದುಷ್ಟ ಕಾರ್ಯವನ್ನು ಮಾಡಿದೆ. ಬ್ರಿಟಿಷರಂತೆ ರಾಜ್ಯ ಸರ್ಕಾರ ಕೂಡ ಒಡೆದು ಆಳುವ ನೀತಿ ಅನುಸರಿಸುತ್ತಿದೆ’ ಎಂದು ಹರಿಹಾಯ್ದರು.
‘ಪಾಕಿಸ್ತಾನ್ ಜಿಂದಾಬಾದ್ ಅಂದವರಿಗೆ, ಗಣಪತಿ ಉತ್ಸವದಲ್ಲಿ ಕಲ್ಲು ಒಗೆದವರಿಗೆ ನಿರ್ಬಂಧ ಇಲ್ಲ. ದೇಶರಕ್ಷಕರು, ಗೋರಕ್ಷರಿಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ. ಸನಾತನ ಹಿಂದೂ ಧರ್ಮಕ್ಕೆ ಅಪಮಾನ ಮಾಡಿದವರಿಗೆ ಬಹಿಷ್ಕಾರ ಹಾಕಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರ ಇದೇ ರೀತಿ ಒಡೆದು ಆಳುವ ನೀತಿ ಮುಂದುವರಿಸಿದರೆ ಮುಂದೆ ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ನರಗುಂದ ಶಾಸಕ ಸಿ.ಸಿ.ಪಾಟೀಲ ಮಾತನಾಡಿ, ‘ಕನೇರಿ ಶ್ರೀಗಳು ಹಿಂದುತ್ವವಾದಿ ಎನ್ನುವ ಒಂದೇ ಕಾರಣಕ್ಕೆ ನಿರ್ಬಂಧ ಹೇರಿದ್ದು ಸರಿಯಲ್ಲ’ ಎಂದು ಖಂಡಿಸಿದರು.
‘ಸರ್ಕಾರ ಅವರಿಗೆ ನಿರ್ಬಂಧ ಹೇರಿರಬಹುದು. ಆದರೆ, ಭಕ್ತರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರ ಮೇಲೆ ನಿರ್ಬಂಧ ತೆರವುಗೊಳಿಸಿ ಮುಕ್ತ ವ್ಯವಸ್ಥೆ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ವಿಜಯಪುರದ ಕೈವಲ್ಯಕುಟೀರ ಪ್ರಣವಪ್ರಕಾಶ ಮಹಾರಾಜರು, ಕನಕನಾಳದ ಗಿರೀಶಾನಂದ ಮಹಾರಾಜರು, ಹಂಸನೂರಿನ ಅಭಿನವ ಬಸವರಾಜೇಂದ್ರ ಸ್ವಾಮೀಜಿ, ಕನ್ನೂರಿನ ಗಿರಿಮಲ್ಲೇಶ್ವರ ಮಹಾರಾಜರು, ಕನ್ನೂರಿನ ಸದಾಶಿವ ಮಹಾರಾಜರು, ಸಿದ್ಧಾಪುರದ ಅರವಿಂದ ಮಹಾರಾಜರು, ಬಸವನಬಾಗೇವಾಡಿಯ ಅಭಯಾನಂದ ಮಹಾರಾಜರು, ಲಿಂಗದಾಳದ ಚೆನ್ನಮಲ್ಲಿಕಾರ್ಜುನ ಮಹಾರಾಜರು, ವಸಂತಗೌಡ ಪೊಲೀಸಪಾಟೀಲ, ಪ್ರದೀಪ ನವಲಗುಂದ, ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರಡಗಿ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಬಿಜೆಪಿ ಮುಖಂಡರಾದ ವಿಜಯಕುಮಾರ ಗಡ್ಡಿ, ಸುಧೀರ ಖಾಟಗೇರ, ರವಿ ವಗ್ಗಣ್ಣನವರ ಸೇರಿದಂತೆ ನೂರಾರು ಮಂದಿ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಕನೇರಿ ಶ್ರೀಗಳು ನಡೆಸುತ್ತಿರುವ ಧರ್ಮದ ಕಾರ್ಯ ಸ್ವಾವಲಂಬಿ ಕಾರ್ಯ ನೋಡಿದರೆ ರಾಜ್ಯ ಸರ್ಕಾರಕ್ಕೂ ತನ್ನ ನಿರ್ಧಾರ ತಪ್ಪು ಎನಿಸಬಹುದು. ಹಾಗಾಗಿ ಕೂಡಲೇ ಅವರ ಮೇಲೆ ವಿಧಿಸಿರುವ ನಿರ್ಬಂಧ ತೆರವುಗೊಳಿಸಬೇಕುಸಿ.ಸಿ.ಪಾಟೀಲ ಶಾಸಕ
ಹಿಂದೆ ಭಾರತವನ್ನು ಆಳಿದ ಮೊಘಲರು ಡಚ್ಚರು ಬ್ರಿಟಿಷರು ಹಿಂದೂ ಧರ್ಮಕ್ಕೆ ಏನೂ ಮಾಡಲಾಗಲಿಲ್ಲ. ಕೇವಲ ಒಂದು ಕಾಂಗ್ರೆಸ್ ಸರ್ಕಾರ ಏನು ಮಾಡಲು ಸಾಧ್ಯ?ಪ್ರಶಾಂತ ಮಹಾರಾಜರು ಧರ್ಮಗುರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.