
ನರಗುಂದ: ‘ಕನ್ನಡ ನಾಡು, ನುಡಿ ವಿಶೇಷವಾದದ್ದು. ಆದರೆ, ಕನ್ನಡ ಭಾಷೆಗೆ ಸಂಕಷ್ಟ ಎದುರಾಗಿದ್ದು, ಕನ್ನಡಿಗರು ಸ್ವಾಭಿಮಾನಿಗಳಾಗಿ ಕನ್ನಡ ಬೆಳೆಸಬೇಕು’ ಎಂದು ಧಾರವಾಡದ ಜೆಎಸ್ಎಸ್ ಡಿ. ವೀರೇಂದ್ರ ಹೆಗ್ಗಡೆ ಸಂಶೋಧನಾ ಕೇಂದ್ರದ ಸಂಯೋಜಕ, ಸಾಹಿತಿ ಜಿನದತ್ತ ಹಡಗಲಿ ಹೇಳಿದರು.
ಪಟ್ಟಣದ ಸಿದ್ಧೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರ ಪರಿಷತ್ ಆಶ್ರಯದಲ್ಲಿ ಶುಕ್ರವಾರ ನಡೆದ ಕನ್ನಡ-ಕನ್ನಡಿಗ-ಕರ್ನಾಟಕ, ನಾಡು–ನುಡಿ ಜಾಗೃತಿ ಗೀತ ಗಾಯನ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕನ್ನಡಿಗರೇ ಕನ್ನಡದಲ್ಲಿ ಮಾತನಾಡಲು ಹಿಂದೇಟು ಹಾಕುವುದು ತರವಲ್ಲ. ಕನ್ನಡ ಭಾಷೆಗೆ 2,500 ವರ್ಷಗಳ ಇತಿಹಾಸವಿದ್ದು, ಅತ್ಯಂತ ಶ್ರೀಮಂತ ಭಾಷೆಯಾಗಿದೆ. ತನ್ನದೇ ಆದ ಸಾಹಿತ್ಯ, ಸಂಸ್ಕೃತಿ ಮೂಲಕ ವಿಶ್ವಕ್ಕೆ ಮಾದರಿಯಾಗಿದೆ’ ಎಂದರು.
‘ಕನ್ನಡ ಸಂಸ್ಕೃತಿಯನ್ನು ವಿದೇಶದಲ್ಲಿ ಪಸರಿಸಲಾಗುತ್ತಿದೆ. ಹಾಗಾಗಿ, ಕನ್ನಡ ನೆಲದಲ್ಲಿ ನಮ್ಮ ಭಾಷೆಯನ್ನು ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ. ವಿದ್ಯಾರ್ಥಿಗಳು ಅನ್ಯ ಭಾಷೆಗೆ ಮಾರುಹೋಗದೆ, ಮಾತೃಭಾಷೆ ಪ್ರೇಮ ಬೆಳೆಸಿಕೊಳ್ಳಬೇಕು. ಕನ್ನಡ ಸಾಹಿತ್ಯ ಅಧ್ಯಯನ ಮಾಡಬೇಕು’ ಎಂದು ಸಲಹೆ ನೀಡಿದರು.
ಜನಪದ ಕಲಾವಿದ ಶಂಕ್ರಣ್ಣ ಸಂಕಣ್ಣವರ ನೇತೃತ್ವದ ಕಲಾ ತಂಡದಿಂದ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಪ್ರಾಚಾರ್ಯ ಆನಂದಕುಮಾರ ಲಾಳಸಂಗಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಎಸ್. ವಿ.ಮನಗುಂಡಿ, ಯಶೋಧಾ ಅಂಗಡಿ, ಪವಿತ್ರ, ಆರ್.ಎಚ್. ತಿಗಡಿ, ನಾಗಪ್ಪ ಸೂಳಿಕೇರಿ ಇದ್ದರು.
‘ಕನ್ನಡದ ಏಳ್ಗೆಗೆ ಸಂಘಟಿತರಾಗಿ’
‘ಕನ್ನಡಕ್ಕೆ ಕುತ್ತು ಬಂದಾಗ ಕನ್ನಡಿಗರು ಜಾಗೃತರಾಗಿ ಅದನ್ನು ಎದುರಿಸಬೇಕು. ಈ ಕೆಲಸವನ್ನು ಕರ್ನಾಟಕ ವಿದ್ಯಾವರ್ಧಕ ಸಂಘವು 136 ವರ್ಷಗಳಿಂದ ಮಾಡಿಕೊಂಡು ಬಂದಿದೆ. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಸಂಘದ ಕೊಡುಗೆ ಅಪಾರ’ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು. ‘ಬಂಡಾಯ ನೆಲವಾದ ನರಗುಂದದಲ್ಲಿ ಯಾವಾಗಲೂ ಹೋರಾಟದ ಕಿಚ್ಚು ಇರುತ್ತದೆ. ಇಲ್ಲಿ ಕನ್ನಡದ ಏಳ್ಗೆಗಾಗಿ ವಿದ್ಯಾರ್ಥಿಗಳು ಸಂಘಟಿತರಾಬೇಕು. ಕನ್ನಡ ಸಂಘ ಸ್ಥಾಪಿಸಿ ನಿರಂತರವಾಗಿ ಕನ್ನಡ ಸಾಹಿತ್ಯ ಸಂಸ್ಕೃತಿ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಕನ್ನಡ ಸಂಸ್ಕೃತಿಯನ್ನು ರವಾನಿಲು ಸ್ವಾಭಿಮಾನಿ ಕನ್ನಡಿಗರಾಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.