ADVERTISEMENT

ಮುಂಡರಗಿ| ಮಕ್ಕಳಲ್ಲಿ ಭಾಷಾಭಿಮಾನ ಬೆಳೆಸಿ: ಎಸ್.ಎಸ್. ಪಾಟೀಲ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 4:31 IST
Last Updated 25 ನವೆಂಬರ್ 2025, 4:31 IST
ಮುಂಡರಗಿ ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಹಾಗೂ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಎಸ್.ಎಸ್. ಪಾಟೀಲ ಉದ್ಘಾಟಿಸಿದರು 
ಮುಂಡರಗಿ ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಹಾಗೂ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಎಸ್.ಎಸ್. ಪಾಟೀಲ ಉದ್ಘಾಟಿಸಿದರು    

ಮುಂಡರಗಿ: ‘ಮನೆಯಲ್ಲಿ ಎಲ್ಲರೂ ಕನ್ನಡದಲ್ಲೇ ಮಾತನಾಡುವ ಮೂಲಕ ಕನ್ನಡಾಭಿವೃದ್ಧಿಯನ್ನು ಅಲ್ಲಿಂದಲೇ ಆರಂಭಿಸಬೇಕು’ ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಸಲಹೆ ನೀಡಿದರು.

ತಾಲ್ಲೂಕಿನ ಕಲಕೇರಿ ಗ್ರಾಮದ ಗುರು ಮುದುಕೇಶ್ವರ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಹಾಗೂ ಎಂ.ಬಿ. ಪಾಟೀಲ ಪದವಿಪೂರ್ವ ಕಾಲೇಜು ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಹಾಗೂ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಇಂಗ್ಲಿಷ್‌ ಭಾಷೆಯ ವ್ಯಾಮೋಹಕ್ಕೆ ಒಳಗಾಗಿರುವ ಬಹುತೇಕ ಪಾಲಕರು ತಮ್ಮ ಮಕ್ಕಳು ಸಹ ಅದೇ ಭಾಷೆಯಲ್ಲಿ ಮಾತನಾಡಬೇಕೆಂದು ಬಯಸುತ್ತಾರೆ. ಕನ್ನಡವು ಶ್ರೀಮಂತ ಭಾಷೆಯಾಗಿದ್ದು, ಅದರ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು. ಮಕ್ಕಳಲ್ಲಿ ಭಾಷಾಭಿಮಾನ ಬೆಳೆಸಬೇಕು’ ಎಂದು ತಿಳಿಸಿದರು.

ADVERTISEMENT

ಮಂಜುನಾಥ ಮುಧೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ ಪುರಸ್ಕೃತ ಸಂತೋಷ ಅಂಗಡಿ ಅವರನ್ನು ಸನ್ಮಾನಿಸಲಾಯಿತು.

ಮುಖ್ಯಶಿಕ್ಷಕ ಎಂ.ಎಸ್. ರಾಠೋಡ, ಉಪನ್ಯಾಸಕ ಎಸ್.ವಿ. ಪಾಟೀಲ, ಆರ್.ವೈ. ಪಾಟೀಲ,  
ಪ್ರಾಚಾರ್ಯೆ ಮೇಘಾ ಪಾಟೀಲ, ರಮೇಶಗೌಡ ಪಾಟೀಲ, ಕೃಷ್ಣ ಸಾವುಕಾರ, ಕೊಟ್ರೇಶ ಜವಳಿ, ಪ್ರಭು ಪಾಟೀಲ, ಭಾನುಮತಿ ನಾಯಕ, ಮರಿಯಜ್ಜ ಹರಿಜನ ಇದ್ದರು.

‘ಕನ್ನಡದ ಇತಿಹಾಸ ತಿಳಿಯಿರಿ’

‘ಕನ್ನಡ ಸಾಹಿತ್ಯ ಪರಿಷತ್‌ನಿಂದ ವರ್ಷದುದ್ದಕ್ಕೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶೀಘ್ರದಲ್ಲಿ ಮಕ್ಕಳ ಕವಿಗೋಷ್ಠಿ ಹಮ್ಮಿಕೊಳ್ಳಲಾಗುವುದು’ ಎಂದು ಕನ್ನಡ ಸಾಹಿತ್ಯ ಪರಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಹೇಳಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಹನುಮರೆಡ್ಡಿ ಇಟಗಿ ಮಾತನಾಡಿ ‘ಕನ್ನಡ ಭಾಷೆಗೆ ಸುಮಾರು 2500 ವರ್ಷಗಳ ಇತಿಹಾಸವಿದೆ. ಕಾವೇರಿಯಿಂದ ಗೋದಾವರಿವರೆಗೆ ಕರ್ನಾಟಕ ವ್ಯಾಪಿಸಿತ್ತು. ಗ್ರಿಕ್ ಹಾಗೂ ಕನ್ನಡ ಭಾಷೆಗೆ ಬಹಳಷ್ಟು ನಂಟಿದ್ದು ಕನ್ನಡದ ಇತಿಹಾಸವನ್ನು ಮಕ್ಕಳು ತಿಳಿದುಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.