
ಗದಗ: ತಾಲ್ಲೂಕಿನ ಪಾಪನಾಶಿ ಗ್ರಾಮದ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಡಾ. ಅಶೋಕ ಮತ್ತಿಗಟ್ಟಿ ವೈದ್ಯಕೀಯ ಕ್ಷೇತ್ರದಲ್ಲಿ ಮಾತ್ರವಲ್ಲದೇ; ಕನ್ನಡಾಭಿಮಾನಿಯಾಗಿಯೂ ಛಾಪು ಮೂಡಿಸಿದ್ದಾರೆ. ‘ಕನ್ನಡಾಭಿಮಾನ ಕೇವಲ ಬಾಯಿ ಮಾತಿನಲ್ಲಷ್ಟೇ ಅಲ್ಲ; ಹೃದಯದಲ್ಲಿ ಇರಬೇಕು’ ಎಂಬ ಮಾತಿಗೆ ಅವರು ಅರ್ಧ ಶತಮಾನಕ್ಕಿಂತಲೂ ಹೆಚ್ಚು ಕಾಲದಿಂದ ನಿಷ್ಠೆಯಿಂದ ನಡೆದುಕೊಂಡು ಬಂದಿದ್ದಾರೆ.
ಡಾ. ಅಶೋಕ ಮತ್ತಿಗಟ್ಟಿ ಅವರ ದಿನಚರಿ ಜತೆಗೆ ಕನ್ನಡದ ಪರಿಮಳ ಬೆರೆತಿದೆ. ಆಸ್ಪತ್ರೆಗೆ ಸಂಬಂಧಿಸಿದ ಕಡತ, ದಾಖಲಾತಿ, ವಹಿಗಳೆಲ್ಲವನ್ನೂ ಇವರು ಕನ್ನಡದಲ್ಲೇ ನಿರ್ವಹಿಸುತ್ತಾರೆ. ಅಂಕಿ ಸಂಖ್ಯೆಗಳನ್ನು ಕನ್ನಡದಲ್ಲೇ ಬರೆಯುವುದು ಅವರ ಮತ್ತೊಂದು ವೈಶಿಷ್ಟ್ಯ. ಮಾತ್ರೆ ಚೀಟಿ, ಲೆಟರ್‌ಹೆಡ್, ವಿಸಿಟಿಂಗ್ ಕಾರ್ಡ್ ಹೀಗೆ ಎಲ್ಲವೂ ಕನ್ನಡಮಯ.
‘ಕನ್ನಡ ಉಳಿಸಿ, ಬೆಳೆಸಿ ಅಂತ ಎಲ್ಲೀವರೆಗೆ ಭಾಷಣ ಮಾಡುವುದು? ಸ್ವತಃ ನಾವು ಕನ್ನಡವನ್ನು ಬಳಸದೇ ಹೋದರೆ ಅದು ಉಳಿಯುವುದಾದರೂ ಹೇಗೆ’ ಎಂಬ ಪ್ರಶ್ನೆ ಮುಂದಿಡುವ ಡಾ. ಅಶೋಕ ಮತ್ತಿಗಟ್ಟಿ, ‘ನಾವು ಮೊದಲು ಕನ್ನಡವನ್ನು ಬಳಸಬೇಕು. ಆಗ ಅದನ್ನು ಯಾರಾದರೂ ಉಳಿಸುವ ಅವಶ್ಯಕತೆ ಬರುವುದಿಲ್ಲ’ ಎಂದು ತಿಳಿಸಿದರು.
‘ಈಗಿನ ಮಕ್ಕಳು, ಯುವಜನರಿಗೆ ಕನ್ನಡದ ಅಂಕಿಗಳೇ ಗೊತ್ತಿಲ್ಲ. ದೂರವಾಣಿ ಸಂಖ್ಯೆ ಕೇಳಿದರೆ ಅವರ ಬಾಯಲ್ಲಿ ತಕ್ಷಣ ಬರುವುದು ಇಂಗ್ಲಿಷ್ ಅಂಕಿಗಳು. ಇವರಿಗೆ, ಕನ್ನಡ ಅಂಕಿಗಳಲ್ಲಿ ದೂರವಾಣಿ ಸಂಖ್ಯೆ ಹೇಳಿದರೆ ಬರೆದುಕೊಳ್ಳಲು ಒದ್ದಾಡುತ್ತಾರೆ. ಕೆಲವು ಮಕ್ಕಳಿಗೆ ಸೊನ್ನೆ ಅಂದರೆ ಗೊತ್ತಿಲ್ಲ. ಚಹಾ ಕುಡಿಯಲು ಹೋಟೆಲ್‌ಗೆ ಹೋದರೆ, ‘ಬೈಟೂ ಟೀ ಕೊಡಪ್ಪ’ ಅಂತ ಮಾಣಿಯನ್ನು ಕೇಳುತ್ತೇವೆ. ಆತ ಕೂಡ, ನಿಮಗೆ ಚಹಾ ಬೇಕೇ? ಎಂದು ಕೇಳುವುದಿಲ್ಲ. ‘ಟೀ ಅಥವಾ ಕಾಫಿ ಬೇಕಾ’ ಅನ್ನುತ್ತಾನೆ. ಊಟ ಮಾಡುವಾಗ ಅನ್ನ ಕೊಡು ಅಂತ ಕೇಳಲು ನಮಗೆ ಮುಜುಗರ. ‘ರೈಸ್ ಕೊಡಪ್ಪ’ ಎನ್ನುತ್ತೇವೆ. ದಿನನಿತ್ಯದ ಮಾತಿನಲ್ಲಿ ಕನ್ನಡ ಪದಗಳು ಅಳಿದು ಹೋಗುತ್ತಿವೆ. ಇಂತಹ ಸಣ್ಣ ಸಣ್ಣ ವಿಷಯಗಳಲ್ಲಿಯೂ ಕನ್ನಡ ಉಳಿಯಬೇಕು’ ಎಂಬ ಕಳಕಳಿ ವ್ಯಕ್ತಪಡಿಸುತ್ತಾರೆ ಅವರು.
ಕನ್ನಡದಲ್ಲಿ ಬರೆಯುವಾಗ ಮಾತನಾಡುವಾಗ ಮನಸ್ಸಿಗೆ ಸಂತೋಷ ಸಿಗುತ್ತದೆ. ಕನ್ನಡ ಉಳಿಸಬೇಕಾದರೆ ಅದನ್ನು ಪ್ರತಿಕ್ಷಣ ಬಳಸಬೇಕು ಎಂಬುದು ನನ್ನ ನಿಲುವುಡಾ. ಅಶೋಕ ಮತ್ತಿಗಟ್ಟಿ, ಕನ್ನಡಾಭಿಮಾನಿ
ಪ್ರಾಥಮಿಕ ಹಂತದಿಂದಲೂ ಕನ್ನಡದ ಬಗ್ಗೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದ ಡಾ. ಅಶೋಕ ಮತ್ತಿಗಟ್ಟಿ ಆಯುರ್ವೇದ ವಿಭಾಗದಲ್ಲಿ ವೈದ್ಯಕೀಯ ಪದವಿ ಪಡೆದ ನಂತರವೂ ಅದನ್ನು ಉಳಿಸಿಕೊಂಡಿದ್ದಾರೆ. ಇವರು ಹಾವೇರಿ, ಚಿಕ್ಕಹಂದಿಗೋಳ ಆಯುರ್ವೇದ ಆರೋಗ್ಯ ಕೇಂದ್ರದಲ್ಲಿ ಕೆಲಸ ನಿರ್ವಹಿಸುವ ವೇಳೆ ದಾಖಲಾತಿ, ಕಡತಗಳನ್ನೆಲ್ಲಾ ಕನ್ನಡದಲ್ಲೇ ಬರೆಯುತ್ತ ಬಂದಿದ್ದಾರೆ. ಪಾಪನಾಶಿ ಕೇಂದ್ರಕ್ಕೆ ಬಂದ ನಂತರವೂ ಅದನ್ನು ಮುಂದುವರಿಸಿದ್ದಾರೆ.
‘ಸರ್ಕಾರಿ ಸೇವೆಗೆ ಸೇರಿದಾಗಿನಿಂದಲೂ ಕೆಲಸಕ್ಕೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು ಕನ್ನಡದಲ್ಲೇ ನಿರ್ವಹಿಸಿಕೊಂಡು ಬಂದಿದ್ದೇನೆ. ಮಾತು ಮತ್ತು ಬಹರ ಎರಡರಲ್ಲೂ ಕನ್ನಡದ ಅಂಕಿ ಸಂಖ್ಯೆಗಳನ್ನೇ ಬಳಸುವೆ. ವೈಯಕ್ತಿಕ ದಾಖಲೆ, ವಿಳಾಸಕ್ಕೆ ಸಂಬಂಧಿಸಿದ ಎಲ್ಲವನ್ನೂ ಕನ್ನಡದಲ್ಲೇ ಮುದ್ರಿಸಿದ್ದೇನೆ. ಕನ್ನಡದಲ್ಲಿ ಒಡನಾಡುವುದು ನನಗೆ ಸದಾ ಖುಷಿ ಕೊಡುತ್ತದೆ’ ಎಂದು ಹೆಮ್ಮೆಯಿಂದ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.