ADVERTISEMENT

ಕಾಡು ಮೋಹಿಗಳಿಗಾಗಿ ‘ಕಪ್ಪತ ಉತ್ಸವ’ 24ಕ್ಕೆ

ಮಾಹಿತಿ ಜತೆಗೆ ಮನರಂಜನೆ, ಅರಣ್ಯ ಪ್ರೀತಿ ಬೆಳೆಸುವ ಆಶಯ

ಸತೀಶ ಬೆಳ್ಳಕ್ಕಿ
Published 22 ಜನವರಿ 2021, 0:48 IST
Last Updated 22 ಜನವರಿ 2021, 0:48 IST
ಕಪ್ಪತ ಉತ್ಸವ ಲೋಗೊ
ಕಪ್ಪತ ಉತ್ಸವ ಲೋಗೊ   

ಗದಗ: ಕಾಡಿನ ರೌದ್ರ ರಮಣೀಯತೆ, ನಿಕ್ಷೇಪಗಳ ನಿಗೂಢತೆ ಹಾಗೂ ಸುಸ್ಥಿರ ಅಭಿವೃದ್ಧಿಯಲ್ಲಿ ಪರಿಸರ ಸೂಕ್ಷ್ಮವಲಯದ ಪಾತ್ರ ಕುರಿತು ಜನಸಾಮಾನ್ಯರಿಗೆ ಭರಪೂರ ಜ್ಞಾನ ಒದಗಿಸುವ ‘ಕಪ್ಪತ ಉತ್ಸವ’ಕ್ಕೆ ಗದಗ ನಗರಿ ಸಜ್ಜಾಗಿದೆ.

ಬಯಲು ಸೀಮೆಯ ಸಹ್ಯಾದ್ರಿ ಎಂಬ ಹಿರಿಮೆಯೊಂದಿಗೆ ಬೀಗುತ್ತಿರುವ ಕಪ್ಪತಗುಡ್ಡ ಅರಣ್ಯ ಪ್ರದೇಶ ಅಮೂಲ್ಯ ಔಷಧೀಯ ಸಸ್ಯಗಳು ಹಾಗೂ ಖನಿಜ ಸಂಪತ್ತನ್ನು ಒಡಲಲ್ಲಿಟ್ಟುಕೊಂಡಿದೆ. ಇಲ್ಲಿನ ಜಮೀನುಗಳಲ್ಲಿ ಕಾಣಿಸಿಕೊಳ್ಳುವ ವನ್ಯಜೀವಿಗಳು ಹಾಗೂ ಅದರ ಸೆರಗಿನಲ್ಲಿರುವ ಕಪ್ಪತಗುಡ್ಡದೊಂದಿಗೆ ಬಯಲು ಸೀಮೆಯ ಜನರ ಬದುಕು ಬೆಸೆದುಕೊಂಡಿದೆ. ಇಂತಹ ಪರಿಸರದೊಂದಿಗೆ ಜನರು ಇಷ್ಟು ವರ್ಷ ಹೇಗೆ ಜೀವನ ಮಾಡಿದ್ದಾರೆ? ಅದನ್ನು ಸಹಬಾಳ್ವೆಯೊಂದಿಗೆ ಯಾವ ರೀತಿಯಲ್ಲಿ ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಎಂಬ ಪರಿಕಲ್ಪನೆಯೊಂದಿಗೆ ಈ ಬಾರಿಯ ‘ಕಪ್ಪತ ಉತ್ಸವ’ ಆಯೋಜಿಸಲಾಗಿದೆ.

‘ಜ.24ರಂದು ಬೆಳಿಗ್ಗೆ 10.30ಕ್ಕೆ ಆರಂಭವಾಗುವ ‘ಕಪ್ಪತ ಉತ್ಸವ’ ಪಕ್ಕಾ ಅಕಾಡೆಮಿಕ್‌ ಕಾರ್ಯಕ್ರಮ. ಕಾಡು, ವನ್ಯಜೀವಿಗಳ ಬಗ್ಗೆ ಕುತೂಹಲ ಬೆಳೆಸಿಕೊಂಡವರಿಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ. ಜತೆಗೆ ಸ್ಥಳೀಯ ಕಲಾವಿದರ ಸಾಂಸ್ಕೃತಿಕ ರುಜು ಕೂಡ ಇರಲಿದೆ. ಪ್ರಾಕೃತಿಕ ಸಂಪತ್ತನ್ನು ಹಾಳುಗೆಡವದೆ ಜೀವನ ಮುನ್ನಡೆಸುವುದು ಹೇಗೆ? ಎಂಬ ವಿಚಾರವನ್ನು ಪ್ರಧಾನವಾಗಿಟ್ಟುಕೊಂಡು ಈ ಬಾರಿ ಚರ್ಚೆ, ಸಂವಾದಗಳು ನಡೆಯಲಿವೆ’ ಎನ್ನುತ್ತಾರೆ ಡಿಸಿಎಫ್‌ ಸೂರ್ಯಸೇನ್‌.

ADVERTISEMENT

‘ಕಪ್ಪತ ಉತ್ಸವ’ ಎಲ್ಲರ ಒಳಗೊಳ್ಳುವಿಕೆಯೊಂದಿಗೆ ನಡೆಯಬೇಕು ಎಂಬುದು ಅರಣ್ಯ ಇಲಾಖೆಯ ಆಶಯ. ಈ ಹಿನ್ನೆಲೆಯಲ್ಲಿ ಜನ ಸಾಮಾನ್ಯರು ಕೂಡ ಉತ್ಸವದಲ್ಲಿ ಮುಕ್ತವಾಗಿ ಭಾಗವಹಿಸುವ ಅವಕಾಶವನ್ನು ಇಲಾಖೆ ತೆರೆದಿಟ್ಟಿದೆ. ಶಾಲಾ, ಕಾಲೇಜಿನ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.’

‘ವನ್ಯಜೀವಿ ಚಲನಚಿತ್ರ ನಿರ್ದೇಶಕರಾದ ಸುಗಂಧಿ ಮತ್ತು ರಾಣಾ ಅವರು ಶಿರಹಟ್ಟಿ ತಾಲ್ಲೂಕಿನ ಮಾಗಡಿ ಕೆರೆ ಕುರಿತಾಗಿ ಮಾಡಿರುವ ಸಾಕ್ಷ್ಯಚಿತ್ರ ಕಪ್ಪತ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಗದಗ ನಗರದಿಂದ ಮೃಗಾಲಯ ಹಾಗೂ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನಕ್ಕೆ ಬಸ್‌ ಸಂಚಾರ ವ್ಯವಸ್ಥೆಗೆ ಚಾಲನೆ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.